ಮಾತಾಡು ಓ ಶಂಕರ

(ಸದಾ ಧ್ಯಾನಸ್ಥನಾಗಿರುವ ಸದಾಶಿವ ಶಂಕರನನ್ನು ಮಾತಿಗೆಳೆಯುವ ಈ ಕೀರ್ತನೆಯ ಸುಮಧುರ ಗಾಯನ ಕೇಳಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ....

ಮಾತು ಮರೆತೆ ಏಕೆ ಶಂಕರ
ಬಕುತ ಮನದಿ ನಟನವಾಡಿ ನಿರಂತರ ||ಪ||

ಗಿರಿಜೆ ಕೂಡಿ
ಸರಸವಾಡಿ
ತಿರುಗಿ ಕುಳಿತು
ತಪವ ಮಾಡಿ ಶಿವನೆ – ಮಾತು ಮರೆತೆ ||೧||

ಗಂಗೆ ಜಲದಲಿ
ಮಿಂದು ಬಂದು
ಚೆಂದದಿಂದಲಿ ರಮೆಯ
ಕಂಡು ಹರನೆ – ಮಾತು ಮರೆತೆ ||೨||

ಶೂಲ ಸೆಳೆದು
ಬಾಲ ಗಣಪನ
ಶಿರವ ತರಿಯೆ
ನೋವಿನಿಂದ – ಮಾತು ಮರೆತೆ ||೩||

ಶೂರ ಶರವಣ
ಅರಿಯ ಬಡಿದು
ಗೆಲುವ ಬೀರಿ
ಹರುಷದಿಂದ – ಮಾತು ಮರೆತೆ ||೪||

ಮಸಣ ಬಸುಮ
ಹಣೆಗೆ ಇರಿಸಿ
ರುದಿರ ನಯನ
ಮಾಲೆ ಧರಿಸಿ – ಮಾತು ಮರೆತೆ ||೫||

ನಂದಿ ವಾಹನ
ಏರಿ ಕುಳಿತು
ಲಯದ ಕೆಲಸಕೆ
ಲೋಕ ತಿರುಗಿ – ಮಾತು ಮರೆತೆ ||೬||

ಹರಿ ತಾನೊಂದೆನುತ
ಶೇಷಶಯನನಲಿ
ಲೀನ ತಾನಾಗಿ
ಬಿಂಕದಲಿ ಹರ – ಮಾತು ಮರೆತೆ ||೭||

ಹವನದುರಿಯಲಿ
ದಹಿಸಿಕೊಂಡ
ಸತಿಯ ನೆನೆದು
ಕೂಗಿ ಕರೆದು – ಮಾತು ಮರೆತೆ ||೮||

ಮದನ ಬಾಣ
ಎದೆಗೆ ಇರಿಯೆ
ಕೆಂಡ ನಯನ
ಬೀರಿ ಕೊಂದು – ಮಾತು ಮರೆತೆ ||೯||

ಹಿಮದ ಗಿರಿಯ
ತುದಿಯಲೊಂದು
ಮನೆಯ ಮಾಡಿ
ಶೂಲಪಾಣಿ – ಮಾತು ಮರೆತೆ ||೧೦||

ಕೊರಳ ಮಾಲೆಗೆ
ಹಾವ ಧರಿಸಿ
ಶಶಿಯ ಕರೆದು
ಶಿರದಲಿರಿಸಿ – ಮಾತು ಮರೆತೆ ||೧೧||

ಬೊಗಸೆ ಹಿಡಿದು
ವಿಷವ ಕುಡಿದು
ಜಗದ ಅಳಿವು
ತಡೆದು ಹರನೆ – ಮಾತು ಮರೆತೆ ||೧೨||

ಪಾಪ ಕಳೆದು
ಲೋಕ ಬೆಳಗಿ
ಲಿಂಗವಾಗಿ
ಜಂಭದಿಂದ – ಮಾತು ಮರೆತೆ ||೧೩||

ಗಾನ ಕೇಳಿ
ಪದಪದಕೆ ನಲಿದು 
ಒಲುಮೆಯಿಂದ
ಪಯಣಿಗನ ಹರಸಿ – ಮಾತು ಮರೆತೆ ||೧೪||

- ಪ್ರಕಾಶ ಪಯಣಿಗ

Comments

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು