ಶಂಕರಾಚಾರ್ಯ ಅಕ್ಷರ ವಂದನಂ

(ಈ ಕೀರ್ತನೆಯ ಸುಮಧುರ ಗಾಯನ ಕೇಳಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ...

ಅಷ್ಟಕಾದಿ ಅಪಾರವಂ
ಅಕಲಂಕಿತ ಸ್ತವವಂ
ಅಖಂಡದಿಂ ಅರ್ಪಿಸಿದ
ಅಜೇಯ ಗುರು ಶಂಕರಂ ||೧||

ಆಚಾರ್ಯೋತ್ತಮ ಆಕಲ್ಪಂ
ಆದ್ಯದ್ವೈತದ ಆಕರಂ
ಆತ್ಮವೇ ಆದಿಯೆಂದನುಂ
ಆ ಆದಿಗುರು ಶಂಕರಂ ||೨||

ಇಂದ್ರಛಾಪ ಇಹಾಲೋಕ
ಇಂಥಾಮೋಹ ಇಲ್ಯಾಕೆನೆ
ಇಷುಧಿಯಿಂ ಇಷ್ಟಕಾವ್ಯಂ
ಇತ್ತನಾಗುರು ಶಂಕರಂ ||೩||

ಈಶ ಈಶಾನಿ ಈರ್ವರೇ
ಈಸೃಷ್ಟಿಗಾದಿ ಈಜಗಂ
ಈಪ್ಸೆ ಈಷಣವೇಕೆಂದಂ
ಈ ಜಗದ್ಗುರು ಶಂಕರಂ ||೪||

ಉತ್ಕಂಠಿತ ಉಜ್ವಲನುಂ
ಉರ್ವಿಯನು ಉದ್ಧರಿಪಂ
ಉಕ್ಷಕೇತ ಉಮಾಶಿವಂ
ಉಪಾಸ್ಯ ಗುರು ಶಂಕರಂ ||೫||

ಊನಮಾನವನೂನವಂ
ಊರ್ಜದಿಂಗಳೆದಾಗನೀ
ಊರೂರಜನಮಾನದಿಂ
ಊರ್ಜಸ್ವಿ ಗುರು ಶಂಕರಂ ||೬||

ಋಕ್ಕು ಋಕ್ಕಿನ ಭಾಷ್ಯವಂ
ಋಷಿಗಳುಂ ಋತ್ವಿಜರುಂ
ಋತುವೆಲ್ಲದಿ ಭಜಿಸೆ
ಋಣಿನಾನ್ಗುರು ಶಂಕರಂ ||೭||

ಎಚ್ಚಕನೆ ಎಚ್ಚರಿಸಿಂ
ಎಮ್ಮನವಂ ಎತ್ತರಿಸಿ
ಎನಸುಂ ನೀ ಎರ್ದೆಲಾಡೋ
ಎಂದುಂ ನೀ ಗುರು ಶಂಕರಂ ||೮||

ಏಸುಜನ್ಮವ ಏರಿಯುಂ
ಏರಾಟದಕರ್ಮವಿದುಂ
ಏಳ್ ಏಳೆಂದು ಏಳಿಸೆ
ಏಕೈಕ್ಯಂ ಗುರು ಶಂಕರಂ ||೯||

ಐಸಿರಿ ಐಹಿಕೈಲಿದುಂ
ಐಷಾರಾಮವಿದೇಕಿನ್ನುಂ
ಐಚ್ಛೆಗಳೆಯೆ ಐಕವೋ
ಐತಿಹ್ಯ ಗುರು ಶಂಕರಂ ||೧೦||

ಒಳ್ಳಿತೋಪ್ಪಿತವೋಲ್ಮೆಯಿಂ
ಒಚ್ಚಯದಿಂ ಒಟ್ಟಾಗಲ್
ಒಳಗಣ್ತೆರೆದೋಳಗೆಂ
ಒಳ್ಗಂಪು ಗುರು ಶಂಕರಂ ||೧೧||

ಓಂಕಾರಬೀಜ ಓಜಸ್ಸುಂ
ಓಘವೋವಳಿಸೋಕುಳಿಂ
ಓಂಕಾರಮೂರುತೀಶನಾ
ಓಜಸ್ವಿ ಗುರು ಶಂಕರಂ ||೧೨||

ಔಚಿತ್ಯ ಧ್ಯಾನ ಮಾಳ್ಪೊಡೆ
ಔನ್ನತ್ಯವು ಸಲೀಲವುಂ
ಔದ್ಧತ್ಯಂಬಿಡೆ ಓಂ ತತ್ವಂ
ಔಷಧಿ ಗುರು ಶಂಕರಂ ||೧೩||

ಅಂಬುಜದಳನೇತ್ರೆಯುಂ
ಅಂಬಾ ಅಂಬುಜಪಾಣಿಯುಂ
ಅಂತಃಸ್ಥವಾಗೆ ಅಂಧವೇಂ
ಅಂಚಿತ ಗುರು ಶಂಕರಂ ||೧೪||

ಅಹಂಕಾರವ ತಾ ಕಳೆ
ಅಹವೆನುತ ಅಂಬೆಯಂ
ಆಹ್ವಾನಿಸಿ ನಿನ್ನಾತ್ಮದಿಂ
ಅಹನ್ಯ ಗುರು ಶಂಕರಂ ||೧೫||

ಕಲ್ಪ ಕಲ್ಪಂ ಕಲ್ಪದೊಳ್
ಕಣ್ಮಣಿಯುಂ ಕಮ್ಮೆಲರುಂ
ಕರಣತ್ರಯ ಕಾರಣಂ
ಕಾರುಣ್ಯಂ ಗುರು ಶಂಕರಂ ||೧೬||

ಖಂಡಾಖಂಡ ಹೊತ್ತಗೆಯಂ
ಖನಿಸಿ ಖ್ಯಾತನಾದವಂ
ಖಂಡೋಬಾಂಶಜನ್ಮಿತನುಂ
ಖ್ಯಾತನುಂ ಗುರು ಶಂಕರಂ ||೧೭||

ಗಂಗಾಧರನ ಗೀತವಂ
ಗೀತಿಸ್ಸೇರ್ದನು ಗಂತವ್ಯಂ
ಗುರೋತ್ತಮ ಗುರೋತ್ತಮಂ
ಗರಿಮಂ ಗುರು ಶಂಕರಂ ||೧೮||

ಘಟ್ಟಿಗರನು ಘಲ್ಲಿಸಿ
ಘಟಿಕಾಸ್ಥಾನವಂಗೆಲ್ದು
ಘನಸ್ತಿಕೆಯಲಿಂ ಘೃಣಿ
ಘೃತವುಂ ಗುರು ಶಂಕರಂ ||೧೯||

ಙವನವುಂ ಸುಸ್ತೋತ್ರವುಂ
ಙವನವುಂ ಸುಭಾಷಿತಂ
ಙವನವುಂ ಮಹಾಕಾವ್ಯಂ
ಙವನ ಗುರು ಶಂಕರಂ ||೨೦||

ಚಾಂಡಾಲನೊಳು ಚೋದ್ಯವಂ
ಚೊಕ್ಕನರ್ತು ಚಿದಂಬರಂ
ಚಂದ್ರಶೇಖರ ಚಾಕ್ಷುಷಂ
ಚಾಣಾಕ್ಷಂ ಗುರು ಶಂಕರಂ ||೨೧||

ಛಾಂದೋಗ್ಯ ಛವಿಪ್ರಕಾಶಂ
ಛಂದಶ್ಯಾಸ್ತ್ರವು ಛಂದಸ್ಸುಂ
ಛಪ್ಪನ್ದೇಶದಿ ಛಾಪಿಸಿಂ
ಛಾತ್ರರ ಗುರು ಶಂಕರಂ ||೨೨||

ಜಂಗಿಡಿದ ಜನ್ಮಕೆ ತಾಂ
ಜಗದೀಶನ ಜಾನಿಸಿಂ
ಜಾಗೃತಿಸ್ಜಿತಕಾಮನಂ
ಜಗದ್ಗುರುವು ಶಂಕರಂ ||೨೩||

ಝೇಂಕರಿಸುತ ಝಲ್ಲರೀಂ
ಝಣತ್ಕಾರದ ಝಣಕಂ
ಝಷಕೇತನಮಾತೆಯಂ
ಜಪಿಸ್ದಂ ಗುರು ಶಂಕರಂ ||೨೪||

ವಾಞ್ಛಿತದ ಪಞ್ಜರದಿಂ
ಬಂಧಿತವು ಮನೋಮನಂ
ಓಂಕಾರದ ಇಞ್ಚರವುಂ
ಸತ್ಯವುಂ ಗುರು ಶಂಕರಂ ||೨೫||

ಟೌಳಿಯಿಂತುಂಬಿದೀಜಗ
ಟಿಕ್ಕರಿಗಳೆ ಸ್ಫಟಿಕಂ
ಆತ್ಮ ಟಿಟ್ಟಿವ ಟಂಕಾರಂ
ಕೇಳೆಂದಂ ಗುರು ಶಂಕರಂ ||೨೬||

ಠೇವಣಿಯು ಜಪಾದಿಂ
ಠವಣಿಸಿದ ಠೇವಣಿಂ
ಠಾವ್ಗೊಳ್ಪೆವು ಶಿವಾತ್ಮದಿಂ
ಠಾವೆನ್ನ ಗುರು ಶಂಕರಂ ||೨೭||

ಡಂಬಾಚಾರದ ಡಂಭದಿಂ
ತುಂಬಿದ್ದ ಮನುಷ್ಯಮನಂ
ಶುದ್ಧಿಸೆ ಡಿಂಡಿಮಂ ಓಂ ಓಂ
ಸಕಲಂ ಗುರು ಶಂಕರಂ ||೨೮||

ಢಮಡ್ಢಮ ನಿನಾದವುಂ
ಢಮರುಪಾಣಿ ಈಶನುಂ
ಪರತತ್ವದಿ ಢಾಳಾಗಿಂ
ಢಾಳಿಸು ಗುರು ಶಂಕರಂ ||೨೯||

ಕಣ್ ಕಣ್ತೆರೆದುಂ ಕಾಣ್
ಕಣ್ಮಣೀಶನ ಕಾಣುತಂ
ಕಣ್ಗದಿರ್ ಕಣ್ತುಂಬುದುಂ
ಕಣ್ಮಣಿ ಗುರು ಶಂಕರಂ ||೩೦||

ತಣ್ಬನಿ ತಟಿಲ್ಲತೆಯುಂ
ತಾಂಡವದಿ ತತ್ಪರವುಂ
ತತ್ಪುರುಷ ತತ್ವಾರ್ಥವಂ
ತಿಳಿದ ಗುರು ಶಂಕರಂ ||೩೧||

ಥದ್ದಿಮಿಥಕಧಿಮಿತಂ
ನಲಿದನೀಶ ಥಕಿಟ
ಥಾಟು ಥೈಲಿಯೆಲ್ಲ ಬಿಟ್ಚುಂ
ತಿಳ್ಯೆಂದ ಗುರು ಶಂಕರಂ ||೩೨||

ದುರ್ದೈವ ದೂನಿಸೇನ್ಬಂತು
ದುಃಸ್ಥಿತಿಗೆ ದುಸ್ಸಂಗವೇಂ
ದರ್ಶಿಪಾತ್ಮವು ದೈವತಾಂ
ದೃಷ್ಟಾಂತ ಗುರು ಶಂಕರಂ ||೩೩||

ಧರ್ಮ ಧನ್ವಂತರೀ ದೇವಂ
ಧ್ಯಾಸ ಧೇನುಕೆ ಧ್ಯಾನವುಂ
ಧ್ವನಿತವಿದು ಧ್ವಾಂತಾಂತಂ
ಧ್ಯಾನಸ್ಥಂ ಗುರು ಶಂಕರಂ ||೩೪||

ನಟರಾಜ ನಟ್ವಾಂಗದಿಂ
ನಕ್ಕು ನಲಿಯೆ ನಂದನಂ
ನಮೋ ನಂದೀಶನೆಂದಾಡೋ
ನಿತ್ಯವುಂ ಗುರು ಶಂಕರಂ ||೩೫||

ಪಂಕಜಾಕ್ಷ ಪುರಂದರಂ
ಪಂಚಮುಖಿ ಪರೇಶನಂ
ಪಂಚಾಯತನ ಪೂಜೆಯಿಂ
ಪಾರ್ವನುಂ ಗುರು ಶಂಕರಂ ||೩೬||

ಫಣಿಶಯನ ಫಣ್ನೇತ್ರಂ
ಫಣಿಹಾರಿಯ ಫಲದಿಂ
ಪೂಜಿಸೆ ಫಲದಾಯಕಂ
ಫಲವುಂ ಗುರು ಶಂಕರಂ ||೩೭||

ಬಂಡ ಬಾಳ್ಪುದು ಬೇಕೇನ್
ಬದುಕ ಬಗೆಗಾಣುನೀಂ
ಬಣಗು ಬಿಸುಟಾಕ್ಷಣಂ
ಬರ್ದಿಲಂ ಗುರು ಶಂಕರಂ ||೩೮||

ಭಾವ ಭಾವಸಮಾಧಿಯಿಂ
ಭಕ್ತ ಭಕ್ತವತ್ಸಲನುಂ
ಭಗವಂತನ ಭಜಿಸೋ
ಭಕ್ತಿಯಿಂ ಗುರು ಶಂಕರಂ ||೩೯||

ಮಂದ್ರ ಮಂತ್ರದಿ ಮಂದಾರಂ
ಮನ್ಮಂದಿರಕೆ ಮಂಗಲಂ
ಮಂಗಲಾಷ್ಟಕ ಮಂಗಲಂ
ಮಂಗಲಂ ಗುರು ಶಂಕರಂ ||೪೦||

ಯಜುರ್ವೇದ ಯತೀಶನುಂ
ಯಥಾರ್ಥಜ್ಞಾನ ಯಾಚಕಂ
ಯೋಗವುಂ ಯೋಗಪೀಠವುಂ
ಯೋಗಿನಾಂ ಗುರು ಶಂಕರಂ ||೪೧||

ರಚಿಸಿದಂ ರುದ್ರಕಾವ್ಯಂ
ರಾರಾಜ್ಯಂ ರಾಜಪೂಜಿತಂ
ರೋಚಕಂ ರೋಚನಂ ರುದ್ರಂ
ರಕ್ಷಕಂ ಗುರು ಶಂಕರಂ ||೪೨||

ಲಕ್ಷ್ಮೀಪತಿಂ ಲಕ್ಷ್ಮಿಯನುಂ
ಲಕ್ಷಣದಿಂ ಲಿಖಿಸುತಾಂ
ಲಭ್ಯಂ ಲಲಾಟನೇತ್ರನುಂ
ಲಕ್ಷಣಂ ಗುರು ಶಂಕರಂ ||೪೩||

ವಜ್ರನುಡಿ ವಕ್ಖಾಣದಿಂ
ವರ್ಚಸ್ವಿಂ ವಸುಧೆಯೊಳ್
ವಂದ್ಯ ವಂದಿತ ವಂದನಂ
ವತ್ಸಲಂ ಗುರು ಶಂಕರಂ ||೪೪||

ಶತಮಾನ ಶಬ್ದಜ್ಞಾನಿಂ
ಶರಣಂ ಶಂಕರಂ ಶಿವಂ
ಶಂಕರಂ ಶಂಕರಾಚಾರ್ಯಂ
ಶಕ್ತಿಯುಂ ಗುರು ಶಂಕರಂ ||೪೫||

ಷಡಕ್ಷರಾಂಶ ಷಾಡ್ಗುಣ್ಯಂ
ಷಡಭಿಜ್ಞನು ಶಂಕರಂ
ಷಟ್ತರ್ಕಂ ಷಡದ್ರಿಪ್ಗೆಲ್ದಂ
ಶಂಕರಂ ಗುರು ಶಂಕರಂ ||೪೬||

ಸಂಕೀರ್ತನಂ ಸುಸಂಕಲ್ಪಂ
ಸತ್ಯಜ್ಞಾನ ಸರೋವರಂ
ಸಂಚರಿಸಿಂ ಸರ್ವಲೋಕಂ
ಸರ್ವಜ್ಞಂ ಗುರು ಶಂಕರಂ ||೪೭||

ಹಂಸ ಪರಮಹಂಸನುಂ
ಹಿಮಗಿರಿ ಹತ್ತಿದವಂ
ಹರಿಹರಗೆ ಪ್ರಿಯವಂ
ಹಮ್ಮೀರಂ ಗುರು ಶಂಕರಂ ||೪೮||

ಗಳಿಸ್ದಂ ಗತಿಸ್ದಂ ಕೇಳ್
ಧರ್ಮಕೆ ತಳಪಾಯವಂ
ಚಾಳವಿಸ್ಗಳಿಸ್ದಂ ಗುರುಂ
ನಮಾಮಿ ಗುರು ಶಂಕರಂ ||೪೯||

ಕ್ಷಿಪ್ರ ಕ್ಷಿತಿಜದೋಳ್ ತಾ
ಕ್ಷೋಣೀಧ್ರವದನೇರುತಂ
ಕ್ಷಮಾಕರನು ಕ್ಷಮತಂ
ಕ್ಷಪೆಗಳೆವ ಶಂಕರಂ ||೫೦||

ತ್ರಯೀಮಯನು ತ್ರಿಕಾಲಂ
ತ್ರಿಕಾಲಜ್ಞಾನಿ ತ್ರಿದಿವಂ
ತ್ರಿವೇಣಿ ತ್ರಿವಿಕ್ರಮನುಂ
ತ್ರಿಶೂಲಿಂ ಗುರು ಶಂಕರಂ ||೫೧||

ಜ್ಞಾನಜ್ಯೋತಿಯು ಜ್ಞಾನೇಶಂ
ಜ್ಞಾತಂ ಜ್ಞಾನಮನೋಹರಂ
ಜ್ಞಾನಿಯುಂ ಜ್ಞಾನರೂಪಿಣಂ
ಜ್ಞಾನವುಂ ಗುರು ಶಂಕರಂ ||೫೨||

ವೇದವೇದಾಂತ ಶಂಕರಂ
ವೈರಾಗ್ಯಮುನಿ ಶಂಕರಂ
ನಿರ್ಮಲಾತ್ಮಕ ಶಂಕರಂ
ಲೋಕಾದಿ ಗುರು ಶಂಕರಂ ||೫೩||

ಪಯಣಿಗನ ಕಾವ್ಯದಿಂ
ಪದವಂದನೆ ಶಂಕರಂ
ಅಕ್ಷರಾಕ್ಷರ ವಂದನಂ
ನಮಸ್ತೇ ಗುರು ಶಂಕರಂ ||೫೪||

- ಪ್ರಕಾಶ ಪಯಣಿಗ

Comments

  1. 🙏🏻ವ೦ದೇ ಜಗದ್ಗುರು ಶ೦ಕರ೦🙏🏻
    *ಅ* ಕಾರದಿ೦ದ *ಜ್ಞ* ಕಾರದವರೆಗೂ...
    ಸ್ವರ, ವ್ಯ೦ಜನ, ಹೃಸ್ವ, ದೀರ್ಘ, ವಿಸರ್ಗ, ಅನುಸ್ವಾರ, ಭಕ್ತಿ ಬೆರೆಸಿ, ಭಾವ ಸ್ಫುರಿಸಿ, ರಚಿಸಿದ ಈ ಮಹಾಕಾವ್ಯ...
    ಆದಿಶ೦ಕರರು ದೀನೆಯೊಬ್ಬಳ ಮನೆಗಾಗಮಿಸಿ.... *ಭವತಿ ಭಿಕ್ಷಾ೦ದೇಹಿ* ಅ೦ದಾಗ, ಆ ಅಬಲೆ ತನ್ನ ಗುಡಿಸಿಲಿನ ಮೂಲೆಮೂಲೆಗಳಲ್ಲುಡುಕಿ ದೊರಕಿದ *ಅಮಲಕಿ* ಯನ್ನು ಭಕ್ತಿಯಿ೦ದ ನೀಡಿದಾಗ, ಆದಿಶ೦ಕರರ ಮನಕರಗಿ... ತೇಜೋಪು೦ಜವಾಗಿ ಸ್ಫುರಿಸಿದ, ವಾಕ್ಪ್ರವಾಹದಿ೦ದುದ್ಭವಿಸಿದ *ಕನಕಧಾರಾ ಸ್ತೋತ್ರ* ವನ್ನು ಪಠಿಸಿದಷ್ಟು ಪುಣ್ಯ ಖಂಡಿತಾ ಲಭ್ಯವಾಗಬಹುದು... ಈ ಕಾವ್ಯವಾಚನದಿ೦ದ🙏🏻😁🤔💐

    *ಮಂದ್ರ ಮಂತ್ರದಿ ಮಂದಾರಂ*
    *ಮನ್ಮಂದಿರಕೆ ಮಂಗಲಂ*
    *ಮಂಗಲಾಷ್ಟಕ ಮಂಗಲಂ*
    *ಮಂಗಲಂ ಗುರು ಶಂಕರಂ*

    🙏🏻🙏🏻🙏🏻😁💐💓🙏🏻🙏🏻🙏🏻

    ReplyDelete

Post a Comment

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು