ತಲೆಬೈಲು ನರಸಿಂಹ

ಶರಣ ಶರಣು ಹೇ ನರಸಿಂಹ
ಭಕ್ತವತ್ಸಲ ತಲೆಬೈಲು ನರಸಿಂಹ ||ಪ||

ನಖ ತೀರ್ಥದಲಿ ಮಿಂದು
ವನಕುಸುಮ ಮಾಲೆಯ ಧರಿಸಿ |
ತಲೆಬೈಲು ಮಠದೊಳು ನಿಂದೆ
ಮೊರೆಯೊ ಬಕುತರನು ಉದ್ಧರಿಸಿ ||೧||

ಇಹವ ಬೆಳಗಲು ನಿನಗಿಹುದು
ಮಾತೆ ದುರ್ಗಾದೇವಿಯ ಮಡಿಲು |
ಆಲಯದ ಕಾವಲಿಗಿಹುದು
ಖಗರಾಜ ಗರುಡನ ಕರವು ||೨||

ಕಾಣಿಯೂರ ಯತಿ ಭಜಿಸಿ
ತಪವ ಮಾಡಿದರು ಓ ನರಸಿಂಹ |
ಧೂಪ ದೀಪಾರತಿ ಬೆಳಗಿ
ಕೊಂಡಾಡಿದರೋ ದಿವ್ಯಸಿಂಹ ||೩||

ವಿಷ್ಣು ದೇವನ ಬಾಲಬಿಂಬದಿ
ಮೈದಳೆದ ಉಗ್ರ ನರಸಿಂಹ |
ಭವದ ಬವಣೆ ಕಳೆಯೋ
ಪ್ರಹ್ಲಾದಪಾಲಕ ನರಸಿಂಹ ||೪||

ನರಹರಿಯ ಸೇವೆ ಮಾಡುತ
ಧನ್ಯ ತಾನಾಗಿಹನು ಮುಖ್ಯಪ್ರಾಣ |
ಹರಿಯ ಪವಮಾನ ಪೂಜೆಗೆ ಒಲಿದು
ಹರಸಿ ಕಾಯ್ವನು ಹನುಮ ||೫||

ಗೋಪಾಲಕೃಷ್ಣನು ನೀನೇ
ಪ್ರಭುವೇ ನೀ ವೆಂಕಟರಮಣ |
ಚರಣ ಸೇವೆಯ ಭಾಗ್ಯವನು
ಕರುಣಿಸು ಹೇ ಲಕ್ಷ್ಮೀರಮಣ ||೬||

ಕೆಂಡನಯನನೇ ಆದರೇನು
ಹರಿಸುವೆಯೊ ಮಮತೆಯ ಕಡಲು |
ಸಿಂಹವದನ ಕರಾಲನೂ ನೀನು
ಬಕುತರಿಗೆ ಪ್ರೇಮದ ಒಡಲು ||೭||

ಭಾವ ಶುದ್ಧದಲಿ ಪದತಲಕೆ
ಶರಣು ನಾನಾಗಿಹೆ ಅಗ್ನಿಲೋಚನ |
ಕರುಣದಿಂದಲಿ ಕರಪಿಡಿದು ಎನ್ನ
ಕಾಯೋ ಕಶಿಪುಶಾಪವಿಮೋಚನ ||೮||

ಪದ ಪದ ಸಾಲನು ಪೋಣಿಸಿ
ಮಾಲೆ ಮಾಡಿಹೆನೋ ಯೋಗನಂದನ |
ಕವಿತೆಯಿದ ತುಲಸೀ ಹಾರವೆಂದರಿತು
ಪಯಣಿಗನ ಕಾಯೋ ದಿವ್ಯನಂದನ ||೯||

- ಪ್ರಕಾಶ ಪಯಣಿಗ

Comments

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು