ಜಯತು ಜಯತು ವಿಷ್ಣುಮೂರ್ತಿ


ಮರುಗದಿರು ಮರುಗದಿರು ಓ ಮಾನವ
ಇಳೆಗೆ ಬೆಳಕಾಗಿ ಇಳಿದಿಹನು ಮಾಧವ ||ಪ||

ಕುಂಟಾರಿನ ಪುರದಲ್ಲಿ
ಪಾಡಿಬರುವ ಮನದಲ್ಲಿ
ಬೆಳಕು ತಾನಾಗಿ ಹೊಳೆದಿಹನು
ಭುವಿಸಿರಿಗೊಡೆಯ ಜಗದೀಶ ||೧||

ಶ್ಯಾಮಲೆಯ ಮಡಿಲಲ್ಲಿ
ಪಯಸ್ವಿನಿಯ ತಟದಲ್ಲಿ
ಕರುಣದಿಂದಲಿ ಪೊರೆಯುತಾ
ನೆಲೆಸಿಹನು ದೇವದೇವ ವಿಷ್ಣುದೇವ ||೨||

ಜಲನಿಧಿಯ ಅಲೆಯಲ್ಲಿ
ತರುಲತೆಯ ಕೊರಳಲ್ಲಿ
ಝುಳು ಝುಳು ನಾದ
ಕುಹೂ ಕುಹೂ ಗಾನ ಹರಿ ನಿನ್ನ ಧ್ಯಾನ ||೩||

ನೇಸರನ ಕಿರಣದಲಿ
ತಂಬೆಲರ ಸ್ಪರ್ಶದಲಿ
ಗೋವಿಂದ ನಿನ್ನ ನಾಮ
ಅದು ಓಂಕಾರ ನಾದ ಶ್ರೀಕಾರ ನಾದ ||೪||

ಪುರಜನರು ಮನಸಿನಲಿ
ಭಕ್ತಿ ಭಾವ ತುಂಬುತಲಿ
ಭಜಿಸಿ ಪ್ರಾರ್ಥನೆಯ ಮಾಡುತಿರೆ
ಕೃಪೆದೋರುವೆ ಓ ಜಗನ್ನಾಥನೇ ||೫||

ಅಗಣಿತ ಭಕ್ತರ ಸಲಹುತಲಿ
ಮಮತಾ ಸುಧೆ ಹರಿಸುತಲಿ
ತಂದೆ ನೀ ತಾಯಿ ನೀ ಬಳಗ ನೀ
ಜಗದೇಕ ಬಂಧು ಕರುಣಾ ಸಿಂಧು ||೬||

ಶರಣಾಗತರನು ಕಾಯುತಲಿ
ವಾಂಛಿತ ಫಲವೀಯುತಲಿ
ಭಕ್ತವತ್ಸಲ ನೀನಿರಲು
ದಾಸ ನಾ ನಿನಗೆ ಆದಿದೇವನೆ ||೭||

ಕರಮುಗಿದು ವಂದಿಪೆನು
ಹರಿ ನಿನ್ನ ಚರಣದಲಿ
ಕಾಪಾಡು ನೀ ಎನ್ನ ಮರುಕದಲಿ
ಮದುಸೂದನ ನಾರಾಯಣ ಲಕ್ಷ್ಮೀನಾರಾಯಣ ||೮||

ಬಾಲ ಭಾಷೆಯಲೀ ಕವನ
ನಾರಾಯಣನ ಗಾನ
ಕುಣಿಕುಣಿದು ಕೇಳಿ ಪಯಣಿಗನ
ಹರಸೋ ಕುಂಟಾರು ಪುರಾಧೀಶ ||೯||

- ಪ್ರಕಾಶ ಪಯಣಿಗ

Comments

Post a Comment

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು