ಜಯ ಜಯತು ಸುಬ್ರಹ್ಮಣ್ಯ

(ಈ ಕೀರ್ತನೆಯ ಸುಮಧುರ ಗಾನ ಕೇಳಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ....

ನೆಲವು ಬರಡಾಗಿದೆ ನೀನಿಲ್ಲದೇ ದೇವಸೇನಾಪತಿ
ಜಲನಿಧಿಯ ಚಿಲುಮೆಯ ಹರಿಸೋ ಶ್ರೀವಲ್ಲಿನಾಥ ||ಪ||

ತಾರಕನ ತಾರಕದ ಅಹಂಕಾರದುರಿಗೆ
ಲೋಕ ಲೋಕವೆಲ್ಲ ಬಸುಮವಾಗೆ
ಶಿವಶಿವೆಗೆ ಗಂಗೆಯೊಡಲಲಿ ಸುತನಾಗೆ
ತಾರಕಾಂತಕನಾಗಿ ಲೋಕ ಬೆಳಗಿದೆ ವಲ್ಲೀಶ ||೧||

ಸೊರಗಿದ್ದ ಕೃತ್ತಿಕೆಯರೆದೆಯಲಿ
ಒಲುಮೆಯುಕ್ಕಿ ಪಾಲ್ಗಡಲು ಹರಿಯೆ
ಅಮೃತವ ಕುಡಿದು ಆರು ಮುಖದಲಿ
ತಾಯ್ತನಕೆ ಹೊಳಹಾದೆ ನೀ ಕಾರ್ತಿಕೇಯ ||೨||

ಅಸುರರ ಅಟ್ಟಹಾಸಕೆ ಮಣಿದು
ಸುರಸೇನೆ ಬಲಹೀನವಾಗಿರಲು
ನಾಯಕನು ನೀನಾಗಿ ಛಲದಿ ಮೆರೆದು
ಶೂರತನದ ಕಿಚ್ಚೇಳಿಸಿದೆ ಸುರಸೈನ್ಯನಾಥ ||೩||

ದೇವಸೇನಾ ಶ್ರೀವಲ್ಲಿಯ ಕರಪಿಡಿದು
ಪ್ರೇಮಸಾಗರದಿ ಮಿಂದು ದಣಿದು
ಬಾಳಾಯ್ತು ಹಸಿರಸಿರ ನಂದನವನ
ನೀನಿರಲು ದೇವಾಸೇನಾಪತಿ ಶ್ರೀವಲ್ಲಿನಾಥ ||೪||

ಮನ ಮನ ಬನದ ಹಸಿರುಡುಗಿ
ಕಲ್ಲು ಕಲ್ಲಕಟ್ಟೆಯಲಿ ಬನವಡಗಿ
ನೀನಿಲ್ಲದೇ ಎನಿತು ಪೂಜಿಸಿ ಫಲವೇನು
ಮನ ಬನದಿ ಚಿಗುರು ಮೂಡಿಸೋ ಕುಮಾರ ||೫||

ಚಿತ್ತ ಚಿತ್ತವಿದು ಜ್ಞಾನದಾಹದ ಹುತ್ತ
ಹುತ್ತವೊಡೆದು ಕಲ್ಲುಕಡಿದು ಶಿಲೆಯನಿಡೆ
ಹಾಲ ಹೊಳೆ ಹರಿಸುವ ಮೂಢಮನಕೆ
ಜ್ಞಾನನಿಧಿಯ ಬೆಳಕ ತೋರೋ ವೇದನಿಧಿ ||೬||

ಮನೋಬುದ್ಧಿಗಳೆರಡು ಜೋಡೆತ್ತು ನೋಡು
ಚೇತನದ ಹೊಲವನು ಶ್ರದ್ಧೆಯಲಿ ಹೂಡು
ಬಕುತಿಯೋಣಿಯಲಿ ಭಾವ ಜಲವ ಸುರಿಯೆ
ಫಲವಾಗಿ ಹೊನ್ನ ಬೆಳೆ ನೀಡೋ ಅನಂತಾನಂತ ||೭||

ಸ್ಕಂದನೂ ನೀನು ಪಾರ್ವತೀಕಂದನೇ ಶರಣು
ಗುಹ ಷಣ್ಮುಖ ಮಯೂರವಾಹನನೇ ಶರಣು
ಕಲಾಧರ ಮಾಯಾಧರ ಶಕ್ತಿಧರನೇ ಶರಣು
ಶರಣರನು ಪೊರೆಯೋ ಭಕ್ತವತ್ಸಲ ಸುಬ್ರಹ್ಮಣ್ಯ ||೮||

ಕಾವ್ಯ ಶರಧಿಯಲಿ ಪುಟ್ಟ ತೊರೆಯಿದು
ಪದಮಾಲೆ ಅಕ್ಷರಾಭಿಷೇಕ ನಿನಗಿಹುದು
ಪಯಣಿಗನ ಭಾವವಿದು ನಿನಗೆ ಅಷ್ಟಾವಧಾನ
ಕರುಣದಿಂದಲಿ ಒಲಿಯೋ ಪಶುಪತಿನಂದನ ||೯||

- ಪ್ರಕಾಶ ಪಯಣಿಗ

Comments

  1. *ಜಯತು ಜಯತು ಕಶ್ಯಪಾದಿತಿಸುತ ಜನಿತ*🙏🏻🌹❤️😂🤣

    "ಮನ ಮನ ಬನದ ಹಸಿರುಡುಗಿ
    ಕಲ್ಲು ಕಲ್ಲಕಟ್ಟೆಯಲಿ ಬನವಡಗಿ
    ನೀನಿಲ್ಲದೇ ಎನಿತು ಪೂಜಿಸಿ ಫಲವೇನು?"
    nice phrase👆🏻👌🏻

    keep going🙏🏻

    ReplyDelete

Post a Comment

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು