ಎಚ್ಚರಾಗೆನ್ನ ಕೃಷ್ಣ

(ಆತ್ಮರೂಪಿ ಶ್ರೀಕೃಷ್ಣನನ್ನು ಜಾಗೃತಗೊಳಿಸಲು ಪ್ರಯತ್ನಿಸುವ ಈ ಕೀರ್ತನೆಯ ಸುಮಧುರ ಗಾಯನ ಕೇಳಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ...

ಜ್ಞಾನನೇಸರನು ಹೊಂಗಿರಣ ಬೀರಿಹನು
ನಿದ್ದೆ ತಿಳಿದೇಳು ತಡವೇಕೆ ಕೃಷ್ಣ ||ಪ||

ಮನೋ ಮಂದಿರದ
ಹೊನ್ನ ಪಲ್ಲಂಗದಲಿ
ಕಪಟ ನಿದಿರೆ ಸಾಕಿನ್ನು
ಎಚ್ಚರಾಗೆನ್ನ ಕೃಷ್ಣ ||೧||

ಜಗವ ಪಾಲಿಪ ಹರಿಯೆ
ಗುಡಿಯ ಬಾಗಿಲು ತೆರೆಯೆ
ಸುಪ್ರಭಾತವು ನಿನಗೆ
ಎಚ್ಚರಾಗೆನ್ನ ಕೃಷ್ಣ ||೨||

ವಿಷಮೊಲೆಯ ಕುಡಿದವನೆ
ಬಕುತಿ ಸುಧೆಯ ನೀಡುವೆನು
ಸ್ವೀಕರಿಸಿ ಹರಸಲು ಬೇಗ
ಎಚ್ಚರಾಗೆನ್ನ ಕೃಷ್ಣ ||೩||

ಘೋರ ಮಳೆ ಸುರಿಯೆ
ಗಿರಿಯ ಬೆರಳಲಿ ಎತ್ತಿ
ಗೋಕುಲವ ಕಾಯಲು ಬೇಗ
ಎಚ್ಚರಾಗೆನ್ನ ಕೃಷ್ಣ ||೪||

ಕಾಲಿಯನ ಗರ್ವ ಮುರಿದು
ಯಮುನೆ ಒಡಲ ತೊಳೆದು
ಜೀವ ಜಗದಿ ನಲಿಯೆ
ಎಚ್ಚರಾಗೆನ್ನ ಕೃಷ್ಣ ||೫||

ಕಂಸಾದಿ ಅಸುರರ ಬಡಿದು
ಹಿಂಸಾದಿಗಳೆಲ್ಲವ ಕಳೆದು
ಮಂದಿರದ ದೀಪ ಬೆಳಗೆ
ಎಚ್ಚರಾಗೆನ್ನ ಕೃಷ್ಣ ||೬||

ಗಡಿಗೆ ಗಡಿಗೆ ಬಕುತಿ
ಹಾಲು ಮೊಸರು ಬೆಣ್ಣೆ
ಪಾಲು ಮಾಡದೆ ಕೊಡುವೆ
ಎಚ್ಚರಾಗೆನ್ನ ಕೃಷ್ಣ ||೭||

ಬಂಧನದ ಕತ್ತಲೆಯು
ಕಂದನನು ಕಾಡಿಹುದು
ಬೆಳಕ ಲೋಕ ತೋರಲು
ಎಚ್ಚರಾಗೆನ್ನ ಕೃಷ್ಣ ||೮||

ನೀ ನೆಲೆಸಿಹ ಚೇತನ
ಹಸಿರು ನಂದನವನ
ಮುರಲಿ ಗಾನಕೆ ಕಾದಿಹುದು
ಎಚ್ಚರಾಗೆನ್ನ ಕೃಷ್ಣ ||೯||

ಗೀತ ಗಾಯನ ಮಾಡಿ
ಹೊಳೆಯೆ ಆತ್ಮ ಮಣಿ
ವಿಶ್ವರೂಪದ ಲೀಲೆಯಾಡಲು
ಎಚ್ಚರಾಗೆನ್ನ ಕೃಷ್ಣ ||೧೦||

ಕಾವ್ಯ ಕನ್ನಿಕೆಯ ಲಾಸ್ಯಕೆ
ಪದ ಪುಂಜಗಳ ತಾಳಕೆ
ಪಯಣಿಗನ ಅಕ್ಷರ ನಲಿಯೆ
ಎಚ್ಚರಾಗೆನ್ನ ಕೃಷ್ಣ ||೧೧||

- ಪ್ರಕಾಶ ಪಯಣಿಗ

Comments

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು