ದರುಶನವ ನೀಡು ರಾಜರಾಜೇಶ್ವರಿ

(ಜಗನ್ಮಾತೆ ರಾಜರಾಜೇಶ್ವರಿಯನ್ನು ವರ್ಣಿಸುವ ಈ ಕೀರ್ತನೆಯ ಸುಮಧುರ ಗಾಯನ ಕೇಳಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ....

ಚೇತನಕೆ ಚೇತನವ ನೀಡಿ ಮಾಯವಾದೆಯಮ್ಮ
ದರುಶನವ ನೀಡೆನಗೆ ರಾಜರಾಜೇಶ್ವರೀ ಅಮ್ಮ ||ಪ||

ಮಾಯದಲಿ ನೀ ಆದಿಮಾಯೆ
ಮಾಯಾಲೋಕವ ಸೃಜಿಸಿದ ಮಾಯೆ
ಯೋಗನಿದಿರೆಯ ಕಮಲನಾಭನಲಿ
ಮಾಯೆಯಾಗಿ ಲೀನಳಾದೆಯಮ್ಮ ||೧||

ಕುಡಿ ನೋಟದ ಕಿಡಿ ಜ್ವಾಲೆಗೆ
ದುರುಳರೆಲ್ಲರ ದಹ ದಹಿಸಿ
ಲಯಹರನ ಕೆಂಡ ನಯನದಲಿ
ಕೆಂಡವಾಗಿ ಲೀನಳಾದೆಯಮ್ಮ ||೨||

ಮನದ ಸಂಕಲ್ಪ ಮಾತ್ರಕೇ
ಲೀಲೆಯಾಡುವ ಜಗನ್ಮಾತೃಕೇ
ಜೀವ ಸೃಜಿಪ ಬ್ರಹ್ಮ ಮಾನಸದಿ
ಮನವಾಗಿ ಲೀನಳಾದೆಯಮ್ಮ ||೩||

ಅಸುರಾರಿ ಹರಿಯ ಚಕ್ರದಲಿ
ಪ್ರಲಯಾಂತಕ ಹರನ ಶೂಲದಲಿ
ಚತುರ್ಮುಖ ಬ್ರಹ್ಮನ ದಂಡದಲಿ
ವಜ್ರವಾಗಿ ಲೀನಳಾದೆಯಮ್ಮ ||೪||

ಸೌಂದರ್ಯದ ಖನಿ ತ್ರಿಪುರಸುಂದರಿ
ನಿಧಿಗಳ ಗಣಿಯೆ ನೀನು ಶ್ರೀಲಲಿತೆ
ಸಂಪದದೊಡತಿ ಲಕುಮಿಯ ಸಂಪದಕೆ
ಭೂಷಣವಾಗಿ ಲೀನಳಾದೆಯಮ್ಮ ||೫||

ಕಾಳಿ ಚಾಮುಂಡಿ ಶಾಂಭವಿಯಾಗಿ
ಶುಂಭಾದಿ ಅಸುರಗಣವ ತರಿದು
ಶಂಭುವಿಗೆ ಸತಿಯಾಗಿ ಸತಿಯಲಿ
ಕಾಲವಾಗಿ ಲೀನಳಾದೆಯಮ್ಮ ||೬||

ಲೋಕದಲಿ ಸರ್ವಜ್ಞಾನಿ ಜ್ಞಾನರೂಪಿಣಿ
ಜಗಕೆ ವೇದಗಳ ಬೆಳಕಿತ್ತ ನಾರಾಯಣಿ
ಜ್ಞಾನಮಾತೆ ವೀಣಾಪಾಣಿ ಶಾರದೆಯಲಿ
ಜ್ಞಾನವಾಗಿ ಲೀನಳಾದೆಯಮ್ಮ ||೭||

ಗ್ರಹ ಗ್ರಹ ರವಿ ಚಂದ್ರರಲಿ
ತಾರೆ ತಾರೆ ಬ್ರಹ್ಮಾಂಡದಲಿ
ಸೆಳೆವ ಶಕ್ತಿ ತಾನಾಗಿ ಆದಿಶಕ್ತಿ
ಕಾಂತವಾಗಿ ಲೀನಳಾದೆಯಮ್ಮ ||೮||

ಉರಿವ ನೇಸರನ ಕಿರಣದಲಿ
ತಂಪೆರೆವ ಶಶಿಯ ತಿಂಗಳಲಿ
ಪ್ರಭೆಯ ತೇಜೋಪುಂಜ ಆದಿಮಾಯೆ
ಪ್ರಭೆಯಾಗಿ ಲೀನಳಾದೆಯಮ್ಮ ||೯||

ಬ್ರಹ್ಮಾಂಡವ್ಯಾಪಿನಿ ಜಗಜ್ಜನನಿ
ನೆಲ ಜಲ ಗಿರಿ ಶಿಖರ ಗಗನದಲಿ
ವಸುಂಧರೆಯ ಮಡಿಲ ಕಣ ಕಣದಲಿ
ಕಣವಾಗಿ ಲೀನಳಾದೆಯಮ್ಮ ||೧೦||

ಪವನ ಮಾರುತದ ವೇಗದಲಿ
ನದಿ ತೊರೆ ಸಾಗರದ ಅಲೆಯಲಿ
ಜಗನ್ನಾಟಕ ಲೀಲಾವಿಲಾಸಿನಿಯೇ
ಲೀಲೆಯಾಗಿ ಲೀನಳಾದೆಯಮ್ಮ ||೧೧||

ಹಸಿರಸಿರ ತರುಲತೆ ವನಸಿರಿಯಲಿ
ಖಗ ನರ ಪ್ರಾಣಿ ಕ್ರಿಮಿ ಕೀಟದಲಿ
ಉಸಿರು ಉಸಿರಿನಲಿ ಸರ್ವಾತ್ಮಿಕೆಯೇ
ಉಸಿರಾಗಿ ಲೀನಳಾದೆಯಮ್ಮ ||೧೨||

ಶಬ್ದಾತ್ಮಿಕೆ ನಾದಾತ್ಮಿಕೆಯು ನೀನು
ಪದ ಪದದಲಿ ಭಾವ ಭಾವದಲಿ
ಪಯಣಿಗನ ಕಾವ್ಯದಲಿ ಕಾವ್ಯಕನ್ನಿಕೆಯಾಗಿ
ಅಕ್ಷರಕ್ಷರದಲಿ ಲೀನಳಾದೆಯಮ್ಮ ||೧೩||

- ಪ್ರಕಾಶ ಪಯಣಿಗ

Comments

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು