ಬಾಹ್ಯಾಕಾಶದಿಂದ ಹಲವು ರಹಸ್ಯಗಳ ನಿರೀಕ್ಷೆ!


ಹಲವು ಕಾಲದ ಹಿಂದೆ ನಮ್ಮ ಭೂಮಿ ಎರಡು ಚಂದ್ರರನ್ನು ಹೊಂದಿದ್ದಿರಬೇಕು. ಕಾಲಾಂತರದಲ್ಲಿ ಮತ್ತೊಂದು ಚಂದ್ರ ಈಗಿರುವ ಚಂದ್ರನೊಂದಿಗೆ ಘರ್ಷಣೆಗೆ ಒಳಗಾಗಿ ಎರಡು ಚಂದ್ರರೂ ಒಂದಾಗಿರಬೇಕು. ಒಂದು ಕ್ಷುದ್ರಗ್ರಹ ಚಂದ್ರನ ಹಿಂದಿಂದೆಯೇ ನಮ್ಮ ಭೂಮಿಯನ್ನು ಪರಿಭ್ರಮಿಸುತ್ತಿದೆ.  ಇನ್ನು ಗುರು ಗ್ರಹದ ವಿಚಾರ. ಕಳೆದ ಶುಕ್ರವಾರ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ `ಜುನೋ' ಗಗನನೌಕೆಯನ್ನು ಉಡಾಯಿಸಿತು. 


ಕುತೂಹಲ ಎಂದರೆ ಹಾಗೆಯೇ. ಒಮ್ಮೆ ಮನಸ್ಸನ್ನು ಹೊಕ್ಕಿತು ಎಂದಾದರೆ ಅದು ಅಲ್ಲಿಂದ ಹೊರಟು ಹೋಗುವುದೇ ಇಲ್ಲ. ಭೂಮಿಯ ಮೇಲೆ ಇರುವಂಥ ವಸ್ತುಗಳ ಬಗ್ಗೆ ನಮ್ಮಲ್ಲಿ ಅಷ್ಟೊಂದು ಕುತೂಹಲ ಮೂಡುವುದಿಲ್ಲ. ಆದರೆ ಬಾಹ್ಯಾಕಾಶದಲ್ಲಿ ಏನಾದರೂ ಅಚ್ಚರಿಗಳು ಕಂಡರೆ ನಮ್ಮ ಕುತೂಹಲ ಹೆಚ್ಚುತ್ತಾ ಹೋಗುತ್ತದೆ. ಇನ್ನೂ ಏನೇನಿರಬಹುದು ಎಂಬುದನ್ನು ತಿಳಿದುಕೊಳ್ಳಲು ಹಾತೊರೆಯುತ್ತೇವೆ. ಬಾಹ್ಯಾಕಾಶದ ವಿಚಾರಗಳೇ ಹಾಗೆ, ತಿಳಿದುಕೊಂಡಷ್ಟೂ ಇನ್ನಷ್ಟು ಅನ್ವೇಷಣೆ ಮಾಡುವುದಕ್ಕೆ ಪ್ರೇರಣೆ ಸಿಗುತ್ತದೆ.
ಸದ್ಯಕ್ಕೆ ಇಂಥದ್ದೇ ಕುತೂಹಲದ ಘಟ್ಟದ ಸಮೀಪ ಬಂದಿದ್ದೇವೆ ಎನಿಸುತ್ತಿದೆ. ಇದಕ್ಕೆ ಕಾರಣಗಳು ಹಲವು- ಒಂದು ಮಂಗಳ ಗ್ರಹದಲ್ಲಿ ನೀರಿನ ಹರಿವು ಇರುವುದು ನಾಸಾದ ಸಂಶೋಧನೆಯಲ್ಲಿ ಸ್ಪಷ್ಟವಾಗಿ ತಿಳಿದುಬಂದಿದೆ. ಮಂಗಳಗ್ರಹದಲ್ಲಿ ಇನ್ನೂ ಎಂತಹ ವಿಸ್ಮಯಗಳು ಸಿಗಬಹುದು? ಜೀವಾಸ್ತಿತ್ವ ಇದೆಯೇ ಎಂಬ ಬಗ್ಗೆ ಸಂಶೋಧನೆ ನಡೆಯುತ್ತಿದೆ. ಮಂಗಳನ ಅಂಗಳದಲ್ಲಿ ನೀರಿನ ಆಗರವೇ ಇರುವ ಬಗ್ಗೆ ನಾಸಾ ಮೊದಲಿನಿಂದಲೂ ದಾಖಲೆಗಳನ್ನು ನೀಡುತ್ತಾ ಬಂದಿದೆ. ಮಂಗಳನಲ್ಲಿ ನೀರಿನ ಸಾಗರವೇ ಇರುವ ಬಗ್ಗೆಯೂ ದಾಖಲೆಗಳು ಸಿಕ್ಕಿವೆ. ಇನ್ನು ಗುರು ಗ್ರಹದ ವಿಚಾರ. ಕಳೆದ ಶುಕ್ರವಾರ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ `ಜುನೋ' ಗಗನನೌಕೆಯನ್ನು ಉಡಾಯಿಸಿತು. ಫ್ಲೋರಿಡಾದ ಕೇಪ್ ಕೆನವೆರಾಲ್ ವಾಯುನೆಲೆಯಿಂದ ಉಡ್ಡಯನಗೊಂಡಂಥ `ಜುನೋ' ಗುರುಗ್ರಹದ ರಹಸ್ಯಗಳನ್ನು ಭೇದಿಸುವಂಥ ಗುರುತರ ಜವಾಬ್ದಾರಿಯನ್ನು ಹೊತ್ತಿದೆ. 5 ವರ್ಷಗಳಲ್ಲಿ ಈ ಗಗನನೌಕೆ ಸುಮಾರು 280 ಕೋಟಿ ಕಿಲೋ ಮೀಟರ್ ಪ್ರಯಾಣಿಸಲಿದ್ದು, ನಂತರ ಗುರುಗ್ರಹದ ವಿಸ್ಮಯಗಳನ್ನು ಬಯಲು ಮಾಡಲಿದೆ ಎಂಬ ವಿಶ್ವಾಸ ವಿಜ್ಞಾನಿಗಳದ್ದು. 

ಇನ್ನೂ ಒಂದು ವಿಸ್ಮಯವೆಂದರೆ ಹಲವು ಕಾಲದ ಹಿಂದೆ ನಮ್ಮ ಭೂಮಿ ಎರಡು ಚಂದ್ರರನ್ನು ಹೊಂದಿದ್ದಿರಬೇಕು. ಕಾಲಾಂತರದಲ್ಲಿ ಮತ್ತೊಂದು ಚಂದ್ರ ಈಗಿರುವ ಚಂದ್ರನೊಂದಿಗೆ ಘರ್ಷಣೆಗೆ ಒಳಗಾಗಿ ಎರಡು ಚಂದ್ರರೂ ಒಂದಾಗಿರಬೇಕು ಎನ್ನುತ್ತಿದ್ದಾರೆ ವಿಜ್ಞಾನಿಗಳು. ಬಾಹ್ಯಾಕಾಶದಿಂದ ಧುಮ್ಮಿಕ್ಕಿ ಬಂದಂಥ ರಹಸ್ಯಗಳ ಪಟ್ಟಿ ಇಲ್ಲಿಗೇ ಮುಗಿದಿಲ್ಲ. ಬಾಹ್ಯಾಕಾಶ ವಿಜ್ಞಾನಿಗಳು ಇನ್ನೂ ಒಂದು ಅಚ್ಚರಿಯನ್ನು ಹೊರಗೆಡವಿದ್ದಾರೆ. ಅದು- ಭೂಮಿಯನ್ನು  ಚಂದ್ರ ಮಾತ್ರವಲ್ಲದೆ ಇನ್ನೂ ಒಂದು ಸಣ್ಣ ಆಕಾಶಕಾಯ ಪರಿಭ್ರಮಿಸುತ್ತಿರುವುದು! ಹೌದು, ಒಂದು ಕ್ಷುದ್ರಗ್ರಹ ಚಂದ್ರನ ಹಿಂದಿಂದೆಯೇ ನಮ್ಮ ಭೂಮಿಯನ್ನು ಪರಿಭ್ರಮಿಸುತ್ತಿದೆ. ಆದರೆ ಅದು ಗಾತ್ರದಲ್ಲಿ ಚಂದ್ರನಿಗಿಂತ ತೀರಾ ಚಿಕ್ಕದಾಗಿರುವ ಕಾರಣ ಸಾಮಾನ್ಯ ದೃಷ್ಟಿಗೆ ಗೋಚರಿಸುವುದಿಲ್ಲ. ಅಲ್ಲದೆ, ದೂರದರ್ಶಕಕ್ಕೂ ಸುಲಭಕ್ಕೆ ಸಿಗುವುದಿಲ್ಲ. ಆದರೆ ಭೂಮಿಯಿಂದ ಹೊರಗೆ ನಿಂತು, ಅರ್ಥಾತ್ ಬಾಹ್ಯಾಕಾಶ ನಿಲ್ದಾಣದಲ್ಲಿ ನಿಂತು ನೋಡಿದಾಗ ಇದು ಸ್ಪಷ್ಟವಾಗಿ ಕಾಣಿಸುತ್ತದೆಯಂತೆ. ಹೀಗಾಗಿ ಭೂಮಿಗೆ ಗೆಳೆಯ ಅಂತ ಇರುವುದು ಒಬ್ಬನೇ ಎಂದು ಬೇಸರಿಸಿಕೊಳ್ಳಬೇಕಾದ ಅಗತ್ಯವಿಲ್ಲ ನೋಡಿ. ಈ ಕ್ಷುದ್ರಗ್ರಹದ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸುವ ಯೋಜನೆಯಲ್ಲಿದ್ದಾರೆ ವಿಜ್ಞಾನಿಗಳು.

ಜುನೋ ಮೇಲೆ ಭರವಸೆ
ಉಳಿದೆಲ್ಲ ವಿಚಾರಗಳೂ ಒತ್ತಟ್ಟಿಗಿರಲಿ. ಸದ್ಯಕ್ಕೆ ಬಾಹ್ಯಾಕಾಶ ಪ್ರೇಮಿಗಳ ಮನಸ್ಸಿನಲ್ಲಿ ನಿರಿಕ್ಷೆಗಳ ಗೋಪುರವನ್ನೇ ಕಟ್ಟಿರುವಂಥದ್ದು ಜುನೋ. ಮಂಗಳ ಗ್ರಹದಲ್ಲಿನ ವಿಸ್ಮಯಗಳನ್ನು ನಾಸಾದ ರೋವರ್ ಗಗನನೌಕೆ ಬಯಲು ಮಾಡಿತು. ಈಗ ಗುರು ಗ್ರಹದ ರಹಸ್ಯಗಳನ್ನು ಜುನೋ ಬಯಲು ಮಾಡಲಿದೆ. ಭೂಮಿಯಿಂದ ಗುರುಗ್ರಹವನ್ನು ತಲುಪಬೇಕಾದರೆ ಜುನೋ 5 ವರ್ಷಗಳ ಕಾಲ ಪ್ರಯಾಣಿಸಬೇಕು. ಅಂದರೆ 2016ರ ವೇಳೆಗೆ ಜುನೋ ಗುರು ಗ್ರಹದ ಕಕ್ಷೆಯನ್ನು ತಲುಪಿ, ನಂತರ ಗುರುವನ್ನು ಪರಿಭ್ರಮಿಸಲಿದೆ. ಈ ಪರಿಭ್ರಮಣ ಶುರುವಾದ ಬಳಿಕ ಈ ನೌಕೆಯಲ್ಲಿರುವಂಥ ವೈಜ್ಞಾನಿಕ ಉಪಕರಣಗಳು ಗುರುವಿನ ಮಾಹಿತಿಗಳನ್ನು ಕಲೆ ಹಾಕುತ್ತವೆ.
ನಮ್ಮ ಸೌರಮಂಡಲದ ಅತ್ಯಂತ ದೊಡ್ಡ ಗ್ರಹ ಗುರು. ಇಲ್ಲಿ ಹಸಿರುಮನೆ ಪರಿಣಾಮ ಇರುವುದರಿಂದ ಮತ್ತು ಇದರಲ್ಲಿ ಅನಿಲಗಳ ಮೋಡಗಳು ದಟ್ಟವಾಗಿ, ಸಾಂಧ್ರವಾಗಿ ಆವರಿಸಿಕೊಂಡಿರುವುದರಿಂದಾಗಿ ಇದಕ್ಕೆ `ಅನಿಲದೈತ್ಯ' ಎಂಬ ಅನ್ವರ್ಥನಾಮ. ಅಲ್ಲಿನ ಅಧಿಕ ತಾಪಮಾನದಿಂದಾಗಿ ಅಲ್ಲಿ ಮಾನವ ಜೀವಿಸುವುದಕ್ಕೆ ಸಾಧ್ಯ ಇಲ್ಲ.  ಸದ್ಯಕ್ಕೆ ಗುರು ಗ್ರಹದ ಬಗ್ಗೆ ಇಷ್ಟು ಪ್ರಮುಖ ವಿಚಾರಗಳು ಬಿಟ್ಟರೆ ಹೆಚ್ಚಿನವು ನಮ್ಮ ಅರಿವಿಗೆ ಬಂದಿಲ್ಲ. ಇಂತಿರುವಾಗ ಜುನೋ ನಡೆಸುವಂಥ ಅನ್ವೇಷಣೆಗಳು, ಅದರಿಂದ ತಿಳಿದು ಬರುವಂಥ ವಿಚಾರಗಳು ಅತ್ಯಂತ ಮಹತ್ವಪೂರ್ಣ ಎಂಬುದರಲ್ಲಿ ಯಾವುದೇ ಸಂಶಯ ಇಲ್ಲ. ಮುಖ್ಯವಾಗಿ ಗುರುಗ್ರಹದ ವಾತಾವರಣ, ಅದರ ವಿನ್ಯಾಸ, ಅಲ್ಲಿನ ಕಾಂತವಲಯ, ಇವೆಲ್ಲಕ್ಕಿಂತ ಮುಖ್ಯವಾಗಿ  ಗುರುವಿನ ಗರ್ಭದಲ್ಲಿ ಏನಿದೆ ಎಂಬೆಲ್ಲ ಮಾಹಿತಿಗಳನ್ನು ಜುನೋ ಕಲೆ ಹಾಕಿದ್ದೇ ಆದಲ್ಲಿ ಗುರುಗ್ರಹದ ಬಗ್ಗೆ ಬಹಳಷ್ಟು ಮಾಹಿತಿಗಳು ನಮಗೆ ಸಿಕ್ಕವು ಎಂದೇ ಹೇಳಬಹುದು. ಅಲ್ಲಿ ಜೀವಾಸ್ತಿತ್ವ ಇರುವಂಥ ಸಾಧ್ಯತೆಯಂತೂ ತೀರಾ ಕಡಿಮೆ. ಹೀಗಿರುವಾಗ ಆ ಬಗ್ಗೆ ಹೆಚ್ಚಿನ ಗಮನ ಹರಿಯುವುದು ಕಷ್ಟ.
ಬಹುಶಃ ಈ ಬ್ರಹ್ಮಾಂಡ ಅಥವಾ ಯೂನಿವರ್ಸ್ ನ ಯಾವುದೇ ಆಕಾಶಕಾಯದಲ್ಲಿಯೂ ಜೀವಾಸ್ತಿತ್ವ ಸಾಧ್ಯತೆಯನ್ನು ಸಾರಾಸಗಟು ತಳ್ಳಿ ಹಾಕುವುದಕ್ಕೆ ಸಾಧ್ಯ ಇಲ್ಲ. ಆಲ್ಲಿನದೇ ವಾತಾವರಣಕ್ಕೆ ಹೊಂದಿಕೊಂಡಂಥ ಆದರೆ ಮಾನವನ ಅನುಭವಕ್ಕೆ ಸಿಗದಂಥ ಜೀವಿಗಳು ಇದ್ದರೂ ಇರಬಹುದು.

ಇನ್ನಷ್ಟು ವಿಸ್ಮಯಗಳು ಸಿಗಬಹುದು
ಬಾಹ್ಯಾಕಾಶದಲ್ಲಿನ ಒಂದೊಂದೇ ಕಾಯದ ಬಗ್ಗೆಯೂ ಇದೇ ರೀತಿ ಸಂಶೋಧನೆಗಳನ್ನು ನಡೆಸಬೇಕಾದ ಅಗತ್ಯವಿದೆ. ಅದಾದ ಪಕ್ಷದಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿನ ಇನ್ನಷ್ಟು ರಹಸ್ಯಗಳು ಸ್ಫೋಟಿಸುವುದು ಖಂಡಿತ. ಈಗಾಗಲೇ ನೀರಿನ ಸಾಗರವೇ ಇರುವಂಥ ಕ್ವಸ್ಸಾರ್ ಪತ್ತೆಯಾಗಿದೆ. ಭೂಮಿಯನ್ನೇ ಹೋಲುವಂಥ ಗ್ರಹಗಳೂ ಪತ್ತೆಯಾಗಿವೆ. ಜೀವಾಸ್ತಿತ್ವವನ್ನು, ಅರ್ಥಾತ್ ಅನ್ಯಗ್ರಹ ಜೀವಿಗಳನ್ನು ಹುಡುಕುವುದೇ ಈ ಅನ್ವೇಷಣೆಯ ಗುರಿಯಾಗಬಾರದು. ಆದರೆ ಅಮೆರಿಕ ನಡೆಸುತ್ತಿರುವ ಪ್ರಯೋಗಗಳ ಪ್ರಮುಖ ಉದ್ದೇಶ ಇದೇ ಆಗಿರುವಂತಿದೆ. ಇರಲಿ, ಇದರಿಂದಲೂ ಸಾಕಷ್ಟು ಮಾಹಿತಿಗಳು ಲಭಿಸುತ್ತವೆ, ಅದನ್ನು ತಳ್ಳಿ ಹಾಕುವಂತಿಲ್ಲ. ಅನ್ವೇಷಣೆ ಒಂದು ದಿನದ್ದಲ್ಲ. ಅದಕ್ಕಾಗಿ ಅವಿರತ ಶ್ರಮ ಬಾಕಾಗುತ್ತದೆ. ಬಾಹ್ಯಾಕಾಶದಲ್ಲಿನ ರಹಸ್ಯಗಳ ಬೆನ್ನು ಹಿಡಿದು ಈಗಾಗಲೇ ಹಲವಾರು ವಿಜ್ಞಾನಿಗಳು ಹೊರಟಿದ್ದಾರೆ. ನಾಸಾದಂಥ ಸಂಸ್ಥೆಗಳ ಬೆಂಬಲ ಅವರಿಗಿದೆ. ಇಂಥ ಅನ್ವೇಷಣೆಗಳು ಹೆಚ್ಚಿ, ಸಾಮಾನ್ಯ ಜನರಲ್ಲಿಯೂ ಬಾಹ್ಯಾಕಾಶದ ಬಗ್ಗೆ ಇರುವಂಥ ಕುತೂಹಲವನ್ನು ಸ್ವಲ್ಪ ಮಟ್ಟಿಗಾದರೂ ತಗ್ಗಿಸಲಿ ಎಂದು ಖಂಡಿತವಾಗಿಯೂ ಆಶಿಸಬಹುದು.

Comments

  1. thmuba channgaidhe erithya rashaya ede antha gothiralilla

    ReplyDelete

Post a Comment

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು