ಸಾಗರದಾಳದಲ್ಲಿ ಜಲಜನಕ: ಇಂಧನಕ್ಕೊಂದು ಮಾರ್ಗ


ವಿಜ್ಞಾನಿಗಳಿಗೆ ಕಾಣಸಿಕ್ಕಿದ್ದು ಜೀವಂತ ಶಕ್ತಿಕೋಶಗಳು! ಅಂದರೆ ಹೈಡ್ರೋಜನ್ ಅನಿಲವನ್ನೇ ತುಂಬಿಕೊಂಡಿರುವ ಬ್ಯಾಕ್ಟೀರಿಯಾಗಳು. ಈ ಶಕ್ತಿಯನ್ನು ಹೊರತೆಗೆದು ಮಾನವನ ಅನುಕೂಲಕ್ಕೆ ಬಳಸಿಕೊಳ್ಳುವಂಥ ಪ್ರಕ್ರಿಯೆಯಲ್ಲಿ ಆ ಜೀವಿಗಳಿಗೂ ಅನ್ಯಾಯವಾಗಬಾರದಲ್ಲ? ಈ ಭೂಮಿಯಲ್ಲಿ ಬದುಕುವುದಕ್ಕೆ ಮಾನವನಿಗೆ ಎಷ್ಟು ಹಕ್ಕಿದೆಯೋ ಇತರ ಜೀವಿಗಳಿಗೂ ಅಷ್ಟೇ ಹಕ್ಕಿದೆ. 

ಪರ್ಯಾಯ ಇಂಧನಕ್ಕಾಗಿ ನಡೆಯುತ್ತಿರುವ ಒಂದು ಪ್ರಯತ್ನ, ಅಂದರೆ ಗಾಳಿಯಲ್ಲಿರುವ ಇಂಗಾಲದ ಡೈ ಆಕ್ಸೈಡನ್ನು ಪ್ರತ್ಯೇಕಿಸುವ ತಂತ್ರಜ್ಞಾನದ ಬಗ್ಗೆ ಕಳೆದವಾರ ಇದೇ ಅಂಕಣದಲ್ಲಿ ಬರೆದಿದ್ದೆ. ಪರ್ಯಾಯ ಇಂಧನ ಮೂಲಗಳು, ಅದರಲ್ಲೂ ಮುಖ್ಯವಾಗಿ ನೈಸರ್ಗಿಕ ಮೂಲಗಳ ಬಗ್ಗೆ ಹಲವಾರು ಸಂಶೋಧನೆಗಳು ನಡೆಯುತ್ತಲೇ ಇವೆ. ಯಾವೆಲ್ಲ ಮೂಲಗಳಿಂದ ಇಂಧನಗಳನ್ನು ಸಂಗ್ರಹಿಸಿ ನಮ್ಮಲ್ಲಿನ ಇಂಧನ ಕೊರತೆಯನ್ನು ನೀಗಿಸಬಹುದು ಎಂಬ ಚಿಂತನೆ ಕ್ಷಿಪ್ರಗತಿಯನ್ನು ಪಡೆದಿದೆ. ಇಂತಿರುವಾಗ ಇಂಧನಕ್ಕೆ ಇನ್ನೂ ಒಂದು ಮೂಲವನ್ನು ಸಂಶೋಧಕರು ಕಂಡುಕೊಂಡಿದ್ದಾರೆ. ಅದು- ಸಾಗರದ ಆಳದಲ್ಲಿ ಸಮೃದ್ಧವಾಗಿರುವ ಜಲಜನಕ!
ಸಾಗರದ ನೀರಿನಿಂದ (ಎಚ್2ಒ) ಜಲಜನಕವನ್ನು ಬೇರ್ಪಡಿಸುವ ಪ್ರಯತ್ನವಂತೂ ಇದಲ್ಲ. ಹಾಗಿದ್ದರೆ ಸಾಗರದ ಆಳದಲ್ಲಿ ಜಲಜನಕದ ಮೂಲ ಏನಿರಬಹುದು? ಕುತೂಹಲ ಖಂಡಿತ ಇದ್ದೇ ಇರುತ್ತದೆ.

ದಿ ಮ್ಯಾಕ್ಸ್ ಪ್ಲಾಂಕ್ ಇನ್ ಸ್ಟಿಟ್ಯೂಟ್ ಆಫ್ ಮೆರೈನ್ ಮೈಕ್ರೋಬಯಾಲಜಿ ಮತ್ತು ದಿ ಕ್ಲಸ್ಟರ್ ಆಫ್ ಏಕ್ಸೆಲೆನ್ಸ್ ಮರುಮ್ ನ ಸಂಶೋಧಕರು ಏನನ್ನಾದರೂ ಸಾಧಿಸಬೇಕು ಎಂಬ ಛಲದಲ್ಲಿದ್ದರು. ಇಂಧನ ಸಂಪನ್ಮೂಲದ ಕೊರತೆಯ ಬಗ್ಗೆ ಆತಂಕಗೊಂಡಿರುವ ಜಗತ್ತಿಗೆ ಹೊಸ ಮೂಲವನ್ನು ಪರಿಚಯಿಸಬೇಕು ಎಂಬ ತುಡಿತದೊಂದಿಗೆ ಸಾಗರದಲ್ಲಿ ಸಂಶೋಧನೆ ಶುರು ಮಾಡಿದರು. `ಯುರೇಕಾ.... ಯುರೇಕಾ'! ಏನು ಸಾಧಿಸಬೇಕೆಂದು ಹೊರಟಿದ್ದರೋ ಅದು ತಮ್ಮ ಕಣ್ಣ ಮುಂದೆಯೇ ಕಂಡಾಗ ಸಂಶೋಧಕರು ನಿಜಕ್ಕೂ ಚಕಿತಗೊಂಡರು. ಆವರಿಗೆ ಕಾಣಸಿಕ್ಕಿದ್ದು ಜೀವಂತ ಶಕ್ತಿಕೋಶಗಳು! ಅಂದರೆ ಹೈಡ್ರೋಜನ್ ಅನಿಲವನ್ನೇ ತುಂಬಿಕೊಂಡಿರುವ ಬ್ಯಾಕ್ಟೀರಿಯಾಗಳು.

ಏಕಕೋಶ ಜೀವಿಗಳಿರಬಹುದು, ಬಹುಕೋಶ ಜೀವಿಗಳಿರಬಹುದು. ಯಾವುದೇ ಜೀವಿ ಇರಲಿ ಅವುಗಳಿಗೆ ಯಾವುದಾದರೊಂದು ಶಕ್ತಿಯ ಮೂಲ ಬೇಕೇ ಬೇಕು. ಈ ಶಕ್ತಿ ಮೂಲವಿಲ್ಲದೆ ಅವು ಬದುಕಲಾರವು. ಸಾಗರದ ಆಳದಲ್ಲಿರುವ ಬ್ಯಾಕ್ಟೀರಿಯಾಗಳು ಅಲ್ಲಿ ಸಿಗಬಹುದಾದಂಥ ಶಕ್ತಿಯ ಮೂಲಗಳನ್ನೇ ಬಳಸಿಕೊಳ್ಳುವುದು ಅನಿವಾರ್ಯ. ಅದೆಷ್ಟೋ ಬಾರಿ ಅನಿವಾರ್ಯತೆಯೇ ನಮ್ಮನ್ನು ಹೊಸ ಹೊಸ ಅನ್ವೇಷಣೆಗೆ ಎಡೆಮಾಡಿಕೊಡುತ್ತದೆ. ಬದುಕಿನ ಅನಿವಾರ್ಯತೆ ಹೊಸ ಮಾರ್ಗದ ಸೃಷ್ಟಿಗೆ ಸ್ಫೂರ್ಥಿ ನೀಡುತ್ತದೆ. ಗಾಳಿಯಲ್ಲಿರುವಂಥ ಬ್ಯಾಕ್ಟೀರಿಯಾಗಳಿಗೆ ಗಾಳಿಯಲ್ಲೇ ಸಂಪನ್ಮೂಲಗಳು ಸಿಗುವ ಕಾರಣ ಅವುಗಳಿಗೆ ಹೆಚ್ಚು ಸಮಸ್ಯೆಯಾಗುವುದಿಲ್ಲ. ಸಾಗರದಲ್ಲಿರುವ ಬ್ಯಾಕ್ಟೀರಿಯಾಗಳಿಗೆ ಗಾಳಿ ನೇರವಾಗಿ ಸಿಗುವುದಿಲ್ಲ. ಅದಕ್ಕಾಗಿಯೇ ಅವುಗಳು ಜಲಜನಕ ಅಥವಾ ಹೈಡ್ರೋಜನ್ ಅನ್ನು ತಮ್ಮ ಶಕ್ತಿ ಮೂಲವಾಗಿ ಬಳಸಿಕೊಳ್ಳುತ್ತವೆ.

ಜಲಜನಕ ಹೇಗೆ ಸಿಗುತ್ತೆ?
ಈ ಬ್ಯಾಕ್ಟೀರಿಯಾಗಳಿಗೆ ಜಲಜನಕ ಸುಲಭವಾಗಿ ಸಿಗುವುದಿಲ್ಲ. ಭೂಗರ್ಭದಲ್ಲಿ ಭೂತಟ್ಟೆಗಳಿರುತ್ತವೆ. ಈ ತಟ್ಟೆಗಳು ಒಂದಕ್ಕೊಂದು ಜೋಡಿಕೊಂಡಿರುವಂಥ ಸ್ಥಳಗಳಲ್ಲಿ ಭೂಮಿ ಉಬ್ಬಿರುತ್ತದೆ. ಇವೇ ಪರ್ವತಗಳು. ಹಲವು ಕಡೆ ಈ ಭೂತಟ್ಟೆಗಳು ಒಂದರಿಂದೊಂದು ದೂರ ಸರಿದಿರುತ್ತವೆ. ಇಂಥ ಸ್ಥಳಗಳು ಸಾಗರದಾಳದಲ್ಲಿ ಮತ್ತಷ್ಟು ಆಳದ ಕುಳಿಗಳಾಗುತ್ತವೆ (ಪರ್ವತವನ್ನು ತಲೆಕೆಳಗಾಗಿಸಿದಂತೆ!). ಇಂಥ ಸಾಗರದರ್ಭದಲ್ಲಿ ಕರಗಿದ ಕಲ್ಲುಗಳು, ಘನವಸ್ತುಗಳು (ಈ ಸಂಯುಕ್ತವನ್ನು ಮ್ಯಾಗ್ಮಾ ಎನ್ನುತ್ತಾರೆ) ಲಾವಾದೊಂದಿಗೆ ಸೇರಿಕೊಂಡು ಕುದಿಯುತ್ತಿರುತ್ತವೆ. ಇದರಿಂದಾಗಿ ಆ ಪ್ರದೇಶದಲ್ಲಿನ ಉಷ್ಣತೆ ಅಧಿಕವಾಗುತ್ತದೆ. ಈ ಸಂಯುಕ್ತದೊಂದಿಗೆ ಸೇರುವಂಥ ಲವಣಗಳು ಕೂಡಾ ಕರಗುತ್ತವೆ. ಸಾಗರದಾಳದಲ್ಲಿನ ಇಂಥ ಸ್ಥಳಗಳೇ ಹೈಡ್ರೋಥರ್ಮಲ್ ವೆಂಟ್ ಗಳು ಅಂದರೆ ಅಧಿಕ ತಾಪದ ಜಲಜನಕವನ್ನು ಹೊರಸೂಸುವಂಥ ಕಿಂಡಿಗಳು.

ಈ ಕಿಂಡಿಗಳಲ್ಲಿ ಸುಮಾರು 400 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ರಾಸಾಯನಿಕ ಕ್ರಿಯೆಗೆ ಒಳಗಾಗುವಂಥ ಮ್ಯಾಗ್ಮಾ ಮತ್ತು ಲಾವಾಗಳು ಕಡುಕಪ್ಪನೆಯ ಹೊಗೆಯನ್ನು ಹೆರಸೂಸುತ್ತವೆ. ಈ ಹೊಗೆ ಸಮುದ್ರದ ತಣ್ಣೀರಿನೊಂದಿಗೆ ಸೇರಿದಾಗ ಮತ್ತೆ ರಾಸಾಯನಿಕ ಕ್ರಿಯೆಗೆ ಒಳಗಾಗಿ ಹೈಡ್ರೋಜನ್ ಸಲ್ಫೈಡ್, ಅಮೋನಿಯಮ್, ಮೀಥೇನ್, ಕಬ್ಬಿಣ ಮತ್ತು ಜಲಜನಕದಂಥ ವಸ್ತುಗಳನ್ನು ಉತ್ಪತ್ತಿ ಮಾಡಿ ಸಾಗರ ಸೇರಿಸುತ್ತವೆ. ಹೈಡ್ರೋಥರ್ಮಲ್ ವೆಂಟ್ ಗಳ ಸನಿಹದಲ್ಲೇ ವಾಸಿಸುತ್ತಿರುವಂಥ ಬ್ಯಾಕ್ಟೀರಿಯಾಗಳು ಈ ಎಲ್ಲ ವಸ್ತುಗಳನ್ನು ಉತ್ಕರ್ಷಣ ಕ್ರಿಯೆಗೆ (ಅಂದರೆ ಆಮ್ಲಜನಕದೊಂದಿಗಿನ ರಾಸಾಯನಿಕ ಕ್ರಿಯೆ, ಆಕ್ಸಿಡೈಸೇಶನ್) ಒಳಪಡಿಸುತ್ತವೆ. ಈ ಉತ್ಕರ್ಷಣ ಕ್ರಿಯೆಯಿಂದ ಪಡೆದಂಥ ಶಕ್ತಿಯನ್ನು ಕಾರ್ಬನ್ ಡೈ ಆಕ್ಸೈಡ್ನಿಂದ ಸಾವಯವ ಉತ್ಪನ್ನಗಳನ್ನು ಉತ್ಪಾದಿಸುವುದಕ್ಕಾಗಿ ಈ ಬ್ಯಾಕ್ಟೀರಿಯಾಗಳು ಬಳಸಿಕೊಳ್ಳುತ್ತವೆ.

ಭೂಮಿಯ ಮೇಲಾದರೆ ಸೂರ್ಯನ ಬೆಳಕಿನಿಂದ ಇವುಗಳಿಗೆ ಶಕ್ತಿ ಸಿಗುತ್ತದೆ. ಭೂಮಿಯಾಳದಲ್ಲಿ ಹಾಗಾಗುವುದಿಲ್ಲ. ಭೂಮಿಯ ಮೇಲೆ ದ್ಯುತಿ ಸಂಶ್ಲೇಷಣೆ (ಫೋಟೋಸಿಂತೆಸಿಸ್) ಕ್ರಿಯೆ ನಡೆದರೆ ಸಾಗರದಾಳದಲ್ಲಿ ರಾಸಾಯನಿಕ ಸಂಶ್ಲೇಷಣೆ (ಕೀಮೋಸಿಂತೆಸಿಸ್) ಕ್ರಿಯೆ ನಡೆಯುವ ಮೂಲಕ ಶಕ್ತಿ ಉತ್ಪತ್ತಿಯಾಗುತ್ತದೆ. ಸಾಗರದಾಳದಲ್ಲಿರುವ ಬಹುತೇಕ ಜೀವಿಗಳು ಈ ಶಕ್ತಿಯನ್ನೇ ಬಳಸಿಕೊಂಡು ಬದುಕು ಸಾಗಿಸುತ್ತವೆ.
ಕೆರೆಬಿಯನ್ ಮತ್ತು ಕೇಪ್ ವೆರ್ಡ್ ದ್ವೀಪಗಳ ನಡುವೆ, ಅಟ್ಲಾಂಟಿಕ್ ಸಾಗರದಾಳದಲ್ಲಿ (ಸುಮಾರು 3000 ಕಿಲೋ ಮೀಟರ್ ಆಳದಲ್ಲಿ) ಈ ಸಂಶೋಧನೆ ನಡೆಸಲಾಗಿದ್ದು, ಹೈಡ್ರೋಥರ್ಮಲ್ ವೆಂಟ್ ಗಳಲ್ಲಿರುವ ಅಧಿಕ ಪ್ರಮಾಣದ ಜಲಜನಕದ ನಿಕ್ಷೇಪ ಸಂಶೋಧಕರನ್ನು ಚಕಿತಗೊಳಿಸಿದೆ. ಇದುವರೆಗೆ ಮೀಥೇನ್ ಉತ್ಕರ್ಷಣ ಕ್ರಿಯೆಯಿಂದ ಶಕ್ತಿ ಪಡೆಯುವುದು ನಮಗೆ ಗೊತ್ತಿತ್ತು. ಸಲ್ಫೈಡ್ ಉತ್ಕರ್ಷಣ ಕ್ರಿಯೆಯಿಂದಲೂ ಶಕ್ತಿಯನ್ನು ಉತ್ಪಾದಿಸುವ ವಿಧಾನ ನಮಗೆ ಗೊತ್ತಿತ್ತು. ಈಗ ಹೊಸದೊಂದು ವಿಧಾನ ಗೋಚರವಾಗುತ್ತಿದೆ. ಅದು ಜಲಜನಕದ ಉತ್ಕರ್ಷಣೆ! ಈ ವಿಧನವು ಮೀಥೇನ್ ಉತ್ಕರ್ಷಣೆ ವಿಧಾನಕ್ಕಿಂತ 7 ಪಟ್ಟು ಮತ್ತು ಸಲ್ಪೈಡ್ ಉತ್ಕರ್ಷಣೆ ವಿಧಾನಕ್ಕಿಂತ ಸುಮಾರು 18 ಪಟ್ಟು ಅಧಿಕ ಶಕ್ತಿ ಉತ್ಪತ್ತಿ ಮಾಡುತ್ತದೆ. ಈ ಬ್ಯಾಕ್ಟೀರಿಯಾಗಳು ಪ್ರತಿ ಗಂಟೆಗೆ ಸುಮಾರು 5000 ಲೀಟರ್ ಜಲಜನಕವನ್ನು ಸೇವಿಸುತ್ತವೆ ಎನ್ನುತ್ತದೆ ಸಂಶೋಧನೆ.

ಹೊಸ ಭರವಸೆ, ಹೊಸ ಅಪಾಯ!
ಈ ಬ್ಯಾಕ್ಟೀರಿಯಾಗಳು ಉತ್ಪಾದಿಸುವ ಶಕ್ತಿಯನ್ನು ಬಳಸಿಕೊಳ್ಳುವ ಯೋಚನೆ ಸಂಶೋಧಕರದ್ದು. ಜಲಜನಕ ಸಿಕ್ಕಿದರೂ ಸಾಕು ನಮಗೆ ಬೇಕಾದಷ್ಟು ಶಕ್ತಿ ಸಂಪನ್ಮೂಲ ಸಿಕ್ಕಂತೆಯೇ ಸರಿ. ಈ ಬ್ಯಾಕ್ಟೀರಿಯಾಗಳು ಉತ್ಪಾದಿಸುವಂಥ ಶಕ್ತಿಯನ್ನು ನಮಗೆ ಬೇಕಾದ ರೂಪಕ್ಕೆ ಪರಿವರ್ಥಿಸುವುದಕ್ಕೆ ಸಾಧ್ಯವಾದರಂತೂ ಅದು ಒಂದು ಪ್ರಮುಖ ಸಂಶೋಧನೆಯಾಗುತ್ತದೆ. ಜಗತ್ತಿನ ಇಂಧನ ಕೊರತೆಯೂ ಬಹುಪಾಲು ಕಡಿಮೆಯಾಗುತ್ತದೆ.
ಇಂಥ ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಚಿಂತನೆಯೇನೋ ಉತ್ತಮವೆಂದು ಕಾಣುತ್ತದೆ. ಆದರೆ ಇಲ್ಲೂ ಏನಾದರೂ ನಿಸರ್ಗಕ್ಕೆ ಅಪಾಯ ಎದುರಾಗಬಹುದೇ ಎಂಬ ಚಿಂತೆ ಕಾಡುತ್ತಿದೆ. ಇಂಧನ ಬೇಕು ಎಂಬ ಕಾರಣಕ್ಕೆ ಭೂಮಿಯನ್ನೇ ಕೊರೆದು, ಆ ಒಡಲನ್ನು ಬರಿದು ಮಾಡುತ್ತಾ ಬಂದವರು ನಾವೇ. ಉರುವಲು ಬೇಕು, ಮನೆ ಕಟ್ಟುವುದಕ್ಕೆ ಜಾಗ ಬೇಕು ಎಂದು ಕಾಡನ್ನು ಕಡಿದು ನಾಡನ್ನು ಬರಡಾಗಿಸಿದ್ದೂ ನಾವೇ. ಮಿತಿಮೀರಿದ ಬಳಕೆಯಿಂದಾಗಿ ಪ್ರಕೃತಿಯನ್ನು ಮಲಿನಗೊಳಿಸಿದ್ದೂ ಮಾನವನೇ. ಈ ಕೊಳೆಯನ್ನು ತೆಗೆದು, ಇಳೆಯನ್ನು ಮತ್ತೆ ಶುಚಿಗೊಳಿಸಬೇಕೆಂದು ಕೂಗುತ್ತಿರುವುದೂ ಅವನೇ. ಯಾವುದೇ ಸಂದರ್ಭದಲ್ಲಿ ನೋಡಿದರೂ ನಿಸರ್ಗದ ಮೇಲೆ ತನ್ನ ಅತಿಕ್ರಮಣವನ್ನು ನಡೆಸುತ್ತಲೇ ಬಂದಿದ್ದಾನೆ ಮಾನವ.

ಈಗ ಯಾಕೆ ಈ ಪ್ರಸ್ತಾಪ ಬಂತು ಅಂತೀರಾ? ಸಾಗರದಾಳದಲ್ಲಿನ ಜಲಜನಕದ ನಿಕ್ಷೇಪವನ್ನು ತನ್ನ ಉಪಯೋಗಕ್ಕಾಗಿ ಮಾನವ ಬಳಸುತ್ತಾ ಬಂದರೆ ಅಲ್ಲಿನ ಜೀವಿಗಳಿಗೆ ಇದರಿಂದ ತೊಂದರೆಯಾಗುವುದೋ ಎಂಬ ಆತಂಕವಿದೆ. ಸಾಗರದಾಳದಿಂದ ಜಲಜನಕವನ್ನು ತೆಗೆಯುವಂಥ ಪ್ರಕ್ರಿಯೆ ಅಥವಾ ಬ್ಯಾಕ್ಟೀರಿಯಾಗಳು ಉತ್ಪಾದಿಸಿದಂಥ ಶಕ್ತಿಯನ್ನು ಹೊರತೆಗೆದು ಮಾನವನ ಅನುಕೂಲಕ್ಕೆ ಬಳಸಿಕೊಳ್ಳುವಂಥ ಪ್ರಕ್ರಿಯೆ ಸಾಗರದ ಆಳದಲ್ಲಿ ವಾಸಿಸುವ ಜೀವಿಗಳಿಗೆ ಕಿರಿಕಿರಿ ಅನ್ನಿಸುವುದು ಖಂಡಿತ. ಆ ಜೀವಿಗಳಿಗೂ ಅನ್ಯಾಯವಾಗಬಾರದಲ್ಲ? ಈ ಭೂಮಿಯಲ್ಲಿ ಬದುಕುವುದಕ್ಕೆ ಮಾನವನಿಗೆ ಎಷ್ಟು ಹಕ್ಕಿದೆಯೋ ಇತರ ಜೀವಿಗಳಿಗೂ ಅಷ್ಟೇ ಹಕ್ಕಿದೆ. ಆದರೆ ಅವುಗಳು ತಮ್ಮ ಹಕ್ಕುಗಳ ಬಗ್ಗೆ ಯಾವತ್ತೂ ಮಾನವನ ವಿರುದ್ಧ ಭೂಮಿಯಲ್ಲಿರುವ ಯಾವುದೇ ನ್ಯಾಯಾಲಯದಲ್ಲಿ ದೂರು ದಾಖಲಿಸಿಲ್ಲ ಅಷ್ಟೆ!

Comments

Post a Comment

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು