ಕ್ಯಾಂಡಲ್ ಬೆಳಕಿನಲ್ಲಿ ವಜ್ರವಿದೆ...!
ಈ ಕೆಇಬಿಯವ್ರು ಎಷ್ಟು ಹೊತ್ತಿಗೆ ಪವರ್ ಕಟ್ ಮಾಡ್ತಾರೋ ಹೇಳೋದಕ್ಕೆ ಬರೋದಿಲ್ಲ. ಏನ್ ಮಾಡೋದು, ಮನೆಯಲ್ಲಿ ಕ್ಯಾಂಡಲ್ಲೋ, ಸೀಮೆಣ್ಣೆ ದೀಪಾನೋ ರೆಡಿ ಇರ್ಲೇ ಬೇಕು. ಹೆಚ್ಚಿನವ್ರು ಕ್ಯಾಂಡಲ್ ತಂದಿಟ್ಕೊಳ್ಳೋದನ್ನೇ ಇಷ್ಟಪಡ್ತಾರೆ. ಯಾವ ಟೈಮಲ್ಲಿ ಕರೆಂಟ್ ಹೋದ್ರೂ ಸಹ ಛಕ್ಕಂತ ಕ್ಯಾಂಡಲ್ ಉರಿಸಿ ಮನೆಯನ್ನು ಬೆಳಗುತ್ತಾರೆ. ಅದೆಷ್ಟೋ ವಷ೯ಗಳಿಂದ ನಾವು ಕ್ಯಾಂಡಲ್ ಜೊತೆ ಅವಿನಾಭಾವ ನಂಟಿ ಬೆಸೆದುಕೊಂಡಿದ್ದೇವೆ. ಕ್ಯಾಂಡಲ್ ನಲ್ಲಿರೋ ಮಹಿಮೆ ಮಾತ್ರ ಈಗ ವೈಜ್ಞಾನಿಕ ಜಗತ್ತಿನಿಂದ ಬೆಳಕಿಗೆ ಬರುತ್ತಾ ಇದೆ.
ಏನಪ್ಪಾ ಅಂಥಾ ಮಹಿಮೆ ಅಂತ ನೀವು ಕೇಳ್ಬಹುದು. ವಜ್ರಗಳು, ಅದೇ ಡೈಮಂಡ್ಸ್! ಕ್ಯಾಂಡಲ್ ಮತ್ತು ವಜ್ರಕ್ಕೆ ಎತ್ತಣಿಂದೆತ್ತ ಸಂಬಂಧ? ಈ ಕ್ಯಾಂಡಲ್ಲೋ ಮೇಣ, ಸ್ವಲ್ಪ ಜಾಸ್ತಿ ಒತ್ತಿದ್ರೆ ಪುಡಿಯಾಗುವಂಥದ್ದು. ಆದ್ರೆ ವಜ್ರವನ್ನು ಪುಡಿ ಮಾಡುವುದಕ್ಕೆ ವಜ್ರವೇ ಆಗಬೇಕು. ಹಾಗಿರುವಾಗ ಕ್ಯಾಂಡಲ್ ಮತ್ತು ವಜ್ರಕ್ಕೆ ಸಂಬಂಧ ಇದೆ ಅಂತ ಹೇಳಿದ್ರೆ? ಪ್ರಶ್ನೆಗಳು ಸಹಜ, ಇದಕ್ಕೆ ಉತ್ತರ ಬೇಕೇ? ಮುಂದೆ ಓದಿ-
ಕ್ಯಾಂಡಲ್ ಉರಿಯುತ್ತಿರಬೇಕಾದರೆ ಅಸಂಖ್ಯಾತ ವಜ್ರದ ಕಣಗಳು ಸಿಡಿಯುತ್ತವೆ ಎಂಬ ಸತ್ಯವನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಪ್ರತಿ ಸೆಕೆಂಡಿಗೆ ಸುಮಾರು 15 ಲಕ್ಷ ವಜ್ರದ ಕಣಗಳು ಉರಿಯುತ್ತಿರುವ ಕ್ಯಾಂಡಲ್ ನಿಂದ ಸಿಡುಯುತ್ತವೆ. ಕ್ಯಾಂಡಲ್ ಬೆಳಕಿನಲ್ಲಿ ಏನಿದೆ ಎಂದು ಕುತೂಹಲದಿಂದ ಸಂಶೋಧನೆ ನಡೆಸಿದಂಥ ಸೇಂಟ್ ಆಂಡ್ರೂಸ್ ಯೂನಿವಸಿ೯ಟಿಯ ವಿಜ್ಞಾನಿಗಳು ಈ ಫಲಿತಾಂಶ ಕಂಡು ಸ್ವತಃ ಅಚ್ಚರಿಗೊಳಗಾಗಿದ್ದಾರೆ. ಮೋಂಬತ್ತಿಯ ಬೆಳಕಿನಲ್ಲಿ ಇಷ್ಟೊಂದು ರಹಸ್ಯಗಳಿವೆಯೇ ಎಂಬ ಅಚ್ಚರಿ ನಿಮಗೂ ಆಗಬಹುದು. ಈಗಲೇ ಮೊಂಬತ್ತಿ ಉರಿಸಿ ವಜ್ರಗಳನ್ನು ಹೆಕ್ಕಿಕೊಳ್ಳುತ್ತೇವೆ ಎಂದು ಹೊರಟಿರೋ ಕಾಮನಬಿಲ್ಲನ್ನು ಕೈಯಲ್ಲಿ ಹಿಡಿಯಲು ಪ್ರಯತ್ನಿಸಿದಂತಾದೀತು!
ಯಾಕೆಂದರೆ ಕಣ್ಣಿನ ರೆಪ್ಪೆ ಮಿಟುಕಿಸುವಷ್ಟರಲ್ಲಿ ಈ ವಜ್ರದ ಕಣಗಳು ಸಿಡಿಯು ಮಾಯವಾಗುತ್ತವೆ. ಅಷ್ಟೇ ಅಲ್ಲ, ಮೋಂಬತ್ತಿಯಿಂದ ಸಿಡಿಯುವ ವಜ್ರದ ಕಣಗಳು ಎಷ್ಟು ಸೂಕ್ಷ್ಮವಾಗಿರುತ್ತವೆ ಎಂದರೆ, ಸುಮಾರು 3 ಲಕ್ಷ ಕಣಗಳನ್ನು ಸೇರಿಸಿದರೆ ಸೂಜಿ ಮೊನೆಯಷ್ಟು ಗಾತ್ರದ ವಜ್ರ ಸಿಕ್ಕೀತು!
ಹಾಗಂತ ನಿರಾಶೆಗೊಳ್ಳಬೇಕಾಗಿಲ್ಲ. ಈ ವಜ್ರದ ಕಣಗಳನ್ನು ಹಿಡಿದಿಡುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ವಿಜ್ಞಾನಿಗಳು ಪ್ರಯತ್ನಿಸುತ್ತಿದ್ದಾರೆ. ಒಂದು ವೇಳೆ ಈ ಕಾಯ೯ದಲ್ಲಿ ಯಶಸ್ಸು ಸಿಕ್ಕಿದ್ದೇ ಆದಲ್ಲಿ ಆಫ್ರಿಕಾದಲ್ಲಿ ಗಣಿಗಾರಿಕೆಯ ಮೂಲಕ ಉತ್ಪಾದಿಸುತ್ತಿರುವಂಥ ಬ್ಲಡ್ ಡೈಮಂಡ್ ಗೆ ಇದು ಪಯಾ೯ಯವಾಗಲಿದೆ ಎಂಬುದು ವಿಜ್ಞಾನಿಗಳ ಅಂಬೋಣ.
1400 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಕ್ಯಾಂಡಲನ್ನು ಉರಿಸಿದಂಥ ವಿಜ್ಞಾನಿಗಳು ಆಗ ಸಿಕ್ಕಿದಂತಹ ಕಣಗಳನ್ನು ಸಂಗ್ರಹಿಸಿದರು. ನಂತರ ಆ ಕಣಗಳನ್ನು ಪರಿಶೀಲಿಸುವಾಗ ಅದರಲ್ಲಿ ವಜ್ರದ ಕಣಗಳಿದ್ದದ್ದು ಗೊತ್ತಾಯಿತು. ಸ್ನೇಹಿತನೊಬ್ಬ ಕ್ಯಾಂಡಲ್ ಬೆಳಕಿನಲ್ಲಿ ಏನಿದೆ ಎಂಬುದು ಯಾರಿಗೂ ಗೊತ್ತಿಲ್ಲ ಎಂದು ಹೇಳಿದ್ದೇ ಈ ಸಂಶೋಧನೆಗೆ ಪ್ರೇರಣೆಯಾಯಿತು ಎನ್ನುತ್ತಾರೆ ಯೂನಿವಸಿ೯ಟಿಯ ಪ್ರೊಫೆಸರ್ ವುಜಾಂಗ್ ಜೌ. ಕ್ಯಾಂಡಲ್ ಮೇಣ ಡೈಮಂಡ್, ಗ್ರಾಫೈಟ್ ಸೇರಿದಂತೆ ಶುದ್ಧ ಕಾಬ೯ನ್ನಿನ ನಾಲ್ಕೂ ವಿಧಗಳನ್ನು ಹೊಂದಿದೆ. ಈ ನಾಲ್ಕೂ ವಿಧದ ಕಾಬ೯ನ್ ಗಳು ರೂಪುಗೊಳ್ಳುವುದು ತೀರಾ ಭಿನ್ನವಾದಂಥ ವೈಜ್ಞಾನಿಕ ಸನ್ನಿವೇಶದಲ್ಲಿ. ಆದರೆ ಈ ನಾಲ್ಕೂ ವಿಧಗಳು ಮೋಂಬತ್ತಿಯೊಂದರಲ್ಲಿಯೇ ಇವೆ ಎಂಬುದು ನಿಜಕ್ಕೂ ಅಚ್ಚರಿಗೆ ಕಾರಣವಾಗಿದೆ. ಆದರೆ ಇಲ್ಲಿರುವಂಥ ಒಂದೇ ಒಂದು ಸಮಸ್ಯೆ ಎಂದರೆ ಮೋಂಬತ್ತಿ ಬೆಳಗುವಾಗ ವಜ್ರದ ಕಣಗಳು ಉರಿದು ಹೋಗಿ ಕಾಬ೯ನ್ ಡೈ ಆಕ್ಸೈಡ್ ಆಗಿ ಪರಿವತ೯ನೆಗೊಳ್ಳುತ್ತವೆ.
ಎಲೆಕ್ಟ್ರಿಸಿಟಿಯ ಜನಕ ಮೈಕೆಲ್ ಫ್ಯಾರಡೆ ಸುಮಾರು 150 ವಷ೯ಗಳ ಹಿಂದೆ ಒಂದು ಮಾತು ಹೇಳಿದ್ದ- ಮೋಂಬತ್ತಿಯ ಬೆಳಕು ಚಿನ್ನ, ಬೆಳ್ಳಿ, ರೂಬಿ, ಡೈಮಂಡ್ ಮೊದಲಾದ ಆಭರಣಗಳಂತೆಯೇ ಪ್ರಕಾಶಮಾನವಾದ ಸೌಂದಯ೯ ಹೊಂದಿದೆ. ಆದರೆ ಈ ಆಭರಣಗಳ ಹೊಳಪು ಮೋಂಬತ್ತಿಯ ಬೆಳಗಿಗೆ ಸರಿಸಮವೆನಿಸುವುದಿಲ್ಲ!
ಖಂಡಿತಕ್ಕೂ ಈ ಮಾತು ನಿಜ. ಇನ್ನು ಮುಂದೆ ನೀವು ಮೋಂಬತ್ತಿ ಬೆಳಗುವಂಥ ಸಂದಭ೯ ಬಂತು ಎಂದಾದಲ್ಲಿ ಒಂದು ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಿ- ನೀವು ಲಕ್ಷಾಂತರ ವಜ್ರದ ಕಣಗಳನ್ನು ಉರಿಸುತ್ತಿದ್ದೀರಿ, ನೀವು ಕಣ್ರೆಪ್ಪೆ ಮಿಟುಕಿಸುವಷ್ಟರಲ್ಲಿ ಅವು ಮಾಯವಾಗಿ ಹೋಗುತ್ತವೆ!
good info :)
ReplyDeletecandle light dinner is more romantic now...
ReplyDelete