ಇಂಧನಕ್ಕಾಗಿ ಗಾಳಿಯಲ್ಲಿ ಗಣಿಗಾರಿಕೆ!


ಸಾಮಾನ್ಯ ಜನರು `ನೀರಿನಿಂದ ಗಾಡಿ ಓಡೋ ಹಾಗಾಗಬೇಕು. ಹಾಗಿದ್ದರೆ ಒಂದಲ್ಲ, ಎರಡೆರಡು ಗಾಡಿ ಬೇಕಾದರೂ ಇಟ್ಟುಕೊಳ್ಳಬಹುದು' ಎಂದು ಹೇಳುತ್ತಿದ್ದರು. ಜನ ಏನು ಅಪೇಕ್ಷೆ ಪಟ್ಟಿದ್ದರೋ ಅದು ಸಾಧ್ಯವಾಗುವ ದಿನ ಹತ್ತಿರ ಬಂದಿದೆ. ಅಂದರೆ ನೀರು ಮತ್ತು ಗಾಳಿಯಿಂದ (ಕಾರ್ಬನ್ ಡೈ ಆಕ್ಸೈಡ್) ಗಾಡಿ ಓಡುವ ದಿನ ಹತ್ತಿ ಬರುತ್ತಿದೆ. 

ಪೆಟ್ರೋಲಿಯಂ ಉತ್ಪನ್ನಗಳು ದಿನೇ ದಿನೇ ದುಬಾರಿಯಾಗುತ್ತಿವೆ. ಜೊತೆಗೆ ಈ ಸಂಪನ್ಮೂಲಗಳ ಆಗರ ಬರಿದಾಗುತ್ತಿದೆ. ಇಂಧನಗಳಿಲ್ಲದ ಬದುಕನ್ನು ಕಲ್ಪಸಿಕೊಳ್ಳುವುದಕ್ಕೂ ಸಾಧ್ಯವಿಲ್ಲದಂಥ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಏನಾದರೊಂದು ಮಾರ್ಗ ಕಂಡು ಹಿಡಿಯಲೇಬೇಕೆಂಬ ಪ್ರಯತ್ನಗಳು ವೈಜ್ಞಾನಿಕ ವಲಯದಲ್ಲಿ ಸತತವಾಗಿ ನಡೆಯುತ್ತಲೇ ಇದೆ. ಸೂರ್ಯನ ಶಕ್ತಿಯನ್ನು ವಿದ್ಯುತ್ತನ್ನಾಗಿ ಪರಿವರ್ತಿಸುವಂಥ ತಂತ್ರಜ್ಞಾನ ಇದೆಯಾದರೂ ಕ್ಷಮತೆ ಕಡಿಮೆ ಇರುವುದರಿಂದ ಹೂಡಿಕೆಯ ಪ್ರಮಾಣ ಹೆಚ್ಚು ಬೇಕಾಗುತ್ತದೆ. ಹೀಗಾಗಿ ಹೆಚ್ಚು ಕ್ಷಮತೆಯ ವಿಧಾನಕ್ಕಾಗಿ ಪ್ರಯತ್ನ ನಡೆಯುತ್ತಲೇ ಇದೆ. ಈ ಪ್ರಯತ್ನಗಳ ಸರಣಿಯಲ್ಲಿ ಒಂದು ಭರವಸೆಯ ಬೆಳಕು ಚಿಮ್ಮಿದ್ದು ಗಾಳಿಯಲ್ಲಿ.

ಹಾಗಂತ ಇದು ಪವನ ವಿದ್ಯುತ್ ಉತ್ಪಾದನೆಯ ತಂತ್ರಜ್ಞಾನವಲ್ಲ. ಗಾಳಿಯಲ್ಲೇ ಗಣಿಗಾರಿಕೆ ಮಾಡುವಂಥ ತಂತ್ರಜ್ಞಾನ! ಹಾಂ, ಗಣಿಗಾರಿಕೆ ಎಂದ ತಕ್ಷಣ ನಮ್ಮ ಮನಸ್ಸು ಅಕ್ರಮ ಗಣಿಗಾರಿಕೆ, ಲೋಕಾಯುಕ್ತ ವರದಿ... ಮುಂತಾದ ವಿಚಾರಗಳತ್ತ ಸುಳಿದಾಡೀತು. ಇದು ಆ ಗಣಿಗಾರಿಕೆ ಅಲ್ಲ! ಗಾಳಿಯಲ್ಲಿರುವಂಥ ಹಲವಾರು ವಿಧದ ಅನಿಲಗಳ ರಾಶಿಯಿಂದ ಇಂಗಾಲದ ಡೈ ಆಕ್ಸೈಡನ್ನು ಪ್ರತ್ಯೇಕಿಸಿ, ಅದನ್ನು ಇಂಧನ ರೂಪದಲ್ಲಿ ಬಳಸುವಂಥದ್ದು. ಹೌದು, ಇಂಥದ್ದೊಂದು ತಂತ್ರಜ್ಞಾನವನ್ನು ಕೊಲಂಬಿಯಾ ವಿಶ್ವವಿದ್ಯಾಲಯದ ದಿ ಅರ್ಥ್ ಇನ್ ಸ್ಟಿಟ್ಯೂಟ್ ನ ಕಾರ್ಬನ್ ಸೈನ್ಸ್ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ಗಾಳಿಗೆ ಸೇರಿಸುವ ಬದಲು ಗಾಳಿಯಿಂದಲೇ ಕಾರ್ಬನ್ ಡೈ ಆಕ್ಸೈಡನ್ನು ಪ್ರತ್ಯೇಕಿಸುವ ಕಾರಣದಿಂದಾಗಿ `ಕಾರ್ಬನ್ ನೆಗೆಟಿವ್' ತಂತ್ರಜ್ಞಾನ ಎಂದು ಇದಕ್ಕೆ ನಾಮಕರಣ ಮಾಡಲಾಗಿದ್ದು, ಭವಿಷ್ಯದಲ್ಲಿ ಇಂಧನ ಕೊರತೆಯನ್ನು ನೀಗಿಸುವಂಥ ಭರವಸೆ ಮೂಡಿಸಿದೆ.

ಕಾರ್ಬನ್ ಡೈ ಆಕ್ಸೈಡ್ ಬೆಂಕಿಯನ್ನು ನಂದಿಸುತ್ತದೆ. ಹಾಗಿದ್ದರೆ ಅದನ್ನು ಇಂಧನವಾಗಿ ಬಳಸುವ ಬಗೆ ಹೇಗೆ ಎಂಬ ಪ್ರಶ್ನೆ ಮೂಡಬಹುದು. ಕೇವಲ ಕಾರ್ಬನ್ ಡೈ ಆಕ್ಸೈಡನ್ನು ಇಂಧನವಾಗಿ ಬಳಸುವುದಲ್ಲ. ಇದನ್ನು ನೀರಿನ ಜೊತೆಗೆ ರಾಸಾಯನಿಕ ಕ್ರಿಯೆಗೆ ಒಳಪಡಿಸಲಾಗುತ್ತದೆ. ಈ ರೀತಿ ರಾಸಾಯನಿಕ ಕ್ರಿಯೆ ನಡೆದಾಗ ಕಾರ್ಬನ್ ಡೈ ಆಕ್ಸೈಡ್ ನಲ್ಲಿಯ ಕಾರ್ಬನ್ ಮತ್ತು ನೀರಿನಲ್ಲಿರುವ ಹೈಡ್ರೋಜನ್ ಸಂಯೋಜನೆಗೊಂಡು ಹೈಡ್ರೋಕಾರ್ಬನ್ ಗಳು ಉತ್ಪತ್ತಿಯಾಗುತ್ತವೆ ಎಂಬುದು ವೈಜ್ಞಾನಿಕ ವಲಯ ಹಲವು ಶತಕಗಳ ಹಿಂದೆಯೇ ತಿಳಿದಿದ್ದಂಥ ಸತ್ಯ. ಗ್ಯಾಸೋಲಿನ್ ಕೂಡಾ ಒಂದು ಹೈಡ್ರೋಕಾರ್ಬನ್. ಅಂದರೆ ಕಾರ್ಬನ್ ಡೈ ಆಕ್ಸೈಡ್ ಮತ್ತು ನೀರನ್ನು ರಾಸಾಯನಿಕ ಕ್ರಿಯೆಗೆ ಒಳಪಡಿಸುವ ಮೂಲಕ ಕಾರ್ಬನ್ ಸೈನ್ಸ್ ವಿಜ್ಞಾನಿಗಳು ಗ್ಯಾಸೋಲಿನ್ ಉತ್ಪಾದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನೀರು, ಗಾಳಿಗೆ ಗಾಡಿ ಓಡುತ್ತೆ
ವಾಹನಗಳ ಸಂಖ್ಯೆ ಪ್ರಪಂಚದಾದ್ಯಂತ ಹೆಚ್ಚುತ್ತಿದೆ. ಪ್ರತಿಯೊಂದು ವಾಹನಕ್ಕೂ ಇಂಧನ ಪೂರೈಸುವುದು ಸುಲಭದ ವಿಚಾರವಲ್ಲ. ಪೆಟ್ರೋಲಿಯಂ ಇಂಧನಕ್ಕಾಗಿ ಇದುವರೆಗೆ ಸಮಸ್ತ ಜಗತ್ತು ಅವಲಂಭಿಸಿದ್ದದ್ದು ಭೂಮಿಯನ್ನು. ಭೂಮಿಯಾಳಕ್ಕೆ ಕೊಳವೆ ಬಾವಿಗಳನ್ನು ಕೊರೆದು ತೈಲ ನಿಕ್ಷೇಪಗಳಿಂದ ಕಚ್ಚಾ ತೈಲವನ್ನು ತೆಗೆದು ಬಳಿಕ ಅದನ್ನು ಶುದ್ಧೀಕರಿಸಿ ವಿವಿಧ ಪಟ್ರೋಲಿಯಂ ಉತ್ಪನ್ನಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಎಷ್ಟು ದಿನ ಅಂತ ಭೂಮಿಯನ್ನು ಅವಲಂಬಿಸಿರಬಹುದು. ನಿಕ್ಷೇಪಗಳಲ್ಲಿ ತೈಲ ಸಿಗುವಲ್ಲಿಯವರೆಗೆ! ಅಲ್ಲಿಂದ ನಂತರ? ಇದೇ ಪ್ರಶ್ನೆ ಬಹಳ ವರ್ಷಗಳಿಂದ ಕಾಡುತ್ತಿದೆ. ಪರ್ಯಾಯ ಇಂಧನದ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಕಾರ್ಬನ್ ಸೈನ್ಸ್ ವಿಜ್ಞಾನಿಗಳು ಗಾಳಿಯಲ್ಲೇ ಇರುವಂಥ ಇಂಗಾಲವನ್ನು ಬಳಸಿಕೊಳ್ಳುವುದಕ್ಕೆ ಸಾಧ್ಯವಾದರೆ ಹೇಗೆ ಎಂದು ಚಿಂತಿಸಿದರು. ಆ ಚಿಂತನೆಯ ಫಲವೇ ಗಾಳಿಯಲ್ಲಿ ಗಣಿಗಾರಿಕೆ.

ಭೂಮಿಯಲ್ಲಿ ಗಣಿಗಾರಿಕೆ ಮಾಡಿ ತೈಲ ನಿಕ್ಷೇಪಗಳನ್ನು ಹುಡುಕಿ, ಅಲ್ಲಿಂದ ತೈಲವನ್ನು ತೆಗೆಯುವುದು ಕಷ್ಟದ ವಿಚಾರವೂ ಹೌದು. ತಾತ್ಕಾಲಿಕವೂ ಹೌದು. ಆದರೆ ಗಾಳಿಯಲ್ಲಿ ಇಂಗಾಲ ಹಾಗಲ್ಲ. ಜೀವಿಗಳು ಉಸಿರಾಡುತ್ತಿರುವವರೆಗೆ, ಕೈಗಾರಿಕೆಗಳು ಕೆಲಸ ಮಾಡುವಲ್ಲಿಯವರೆಗೆ, ವಾಹನಗಳು ಚಲಿಸುತ್ತಿರುವಲ್ಲಿಯವರೆಗೆ ಕಾರ್ಬನ್ ಡೈ ಆಕ್ಸೈಡ್, ಕಾರ್ಬನ್ ಮೋನಾಕ್ಸೈಡ್ ಗಾಳಿಗೆ ಸೇರುತ್ತಲೇ ಇರುತ್ತದೆ. ಗಾಳಿಯಲ್ಲಿ ಕಾರ್ಬನ್ ಇರುವವರೆಗೆ ಅದನ್ನು ಬಳಸಿಕೊಳ್ಳುತ್ತಲೇ ಇರಬಹುದು. ಜೊತೆಗೆ ಗಾಳಿಯಲ್ಲಿ ಇಂಗಾಲದ ಪ್ರಮಾಣ ತೀರಾ ಅಪಾಯಕಾರಿಯಾಗಿ ಹೆಚ್ಚುವುದನ್ನೂ ತಪ್ಪಿಸಬಹುದು.
ಈ ತಂತ್ರಜ್ಞಾನದ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುವಂಥ ಕಾರ್ಬನ್ ಸೈನ್ಸ್ ವಿಜ್ಞಾನಿ ಬೈರನ್ ಎಲ್ಟನ್ ಮಾರ್ಮಿಕವಾಗಿ ಒಂದು ಮಾತು ಹೇಳುತ್ತಾರೆ- `ಸಾಮಾನ್ಯವಾಗಿ ಯಾರನ್ನೇ ಆದರೂ `ಈ ಅಪಾಯಕಾರಿ ಕಾರ್ಬನ್ ಡೈ ಆಕ್ಸೈಡನ್ನು ಏನು ಮಾಡೋಣ?' ಎಂದು ಕೇಳಿ ನೋಡಿ. ಎಲ್ಲರೂ ಅದನ್ನು ಸಂಕುಚಿಸಿ ಅಲ್ಲಾದರೂ ಅಡಗಿಸಿಡಿ ಎಂದು ಹೇಳುತ್ತಾರೆ. ಆದರೆ ನಾವು ಹೇಳ್ತಾ ಇದ್ದೇವೆ ಈ ಕಾರ್ಬನ್ ಡೈ ಆಕ್ಸೈಡನ್ನು ನಮಗೆ ಕೊಡಿ. ನಾವದನ್ನು ಮರುಬಳಕೆ ಮಾಡಿಕೊಂಡು ವಾಹನಗಳಿಗೆ ಇಂಧನವಾಗಬಲ್ಲ ಗ್ಯಾಸೋಲಿನ್ ಉತ್ಪಾದಿಸುತ್ತೇವೆ.'

ಈ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಗಗನಾಭಿಮುಖಿಯಾಗುವುದಕ್ಕೆ ಶುರು ಮಾಡಿದ ದಿನದಿಂದಲೇ ಸಾಮಾನ್ಯ ಜನರು `ನೀರಿನಿಂದ ಗಾಡಿ ಓಡೋ ಹಾಗಾಗಬೇಕು. ಹಾಗಿದ್ದರೆ ಒಂದಲ್ಲ, ಎರಡೆರಡು ಗಾಡಿ ಬೇಕಾದರೂ ಇಟ್ಟುಕೊಳ್ಳಬಹುದು' ಎಂದು ಹೇಳುತ್ತಿದ್ದರು. ಬೆಲೆಯೇರಿಕೆಯ ನೋವು ಅವರ ಧ್ವನಿಯಲ್ಲಿ ಮಾರ್ದನಿಸುತ್ತಿತ್ತು. ಈಗ ಭವಿಷ್ಯವನ್ನೊಮ್ಮೆ ಕಲ್ಪಿಸಿಕೊಳ್ಳಿ- ಜನ ಏನು ಅಪೇಕ್ಷೆ ಪಟ್ಟಿದ್ದರೋ ಅದು ಸಾಧ್ಯವಾಗುವ ದಿನ ಹತ್ತಿರ ಬಂದಿದೆ. ಅಂದರೆ ನೀರು ಮತ್ತು ಗಾಳಿಯಿಂದ (ಕಾರ್ಬನ್ ಡೈ ಆಕ್ಸೈಡ್) ಗಾಡಿ ಓಡುವ ದಿನ ಹತ್ತಿ ಬರುತ್ತಿದೆ.

ಇವೆಲ್ಲ ಹೈಡ್ರೋಕಾರ್ಬನ್ ಗಳು
ಸೂರ್ಯನ ಕಿರಣಗಳನ್ನು ಹಿಡಿದಿಡುವಂಥ ಸಸ್ಯಗಳು ಅವನ್ನು ಸಾವಯವ ಪೋಷಕಾಂಶಗಳ ರೂಪದಲ್ಲಿ ಶೇಖರಿಸಿಡುತ್ತವೆ. ಈ ಮರಗಳು ಸತ್ತ ಬಳಿಕ ಮಣ್ಣು ಸೇರುತ್ತವೆ. ಹಲವು ಮಿಲಿಯನ್ ವರ್ಷಗಳ ಕಾಲ ಭೂಮಿಯೊಳಗಿನ ಒತ್ತಡ ಮತ್ತು ಶಾಖಕ್ಕೆ ಸಿಲುಕುವಂಥ ಮರಗಳ ಅವಶೇಷಗಳು ಹೈಡ್ರೋಕಾರ್ಬನ್ ಗಳಾಗಿ ಪರಿವರ್ತನೆಗೊಳ್ಳುತ್ತವೆ. ಈ ಹೈಡ್ರೋಕಾರ್ಬನ್ ಗಳೇ ಪೆಟ್ರೋಲಿಯಂ ತೈಲಗಳು, ನೈಸರ್ಗಿಕ ಅನಿಲ ಮತ್ತು ಕಲ್ಲಿದ್ದಲು. ಈ ಎಲ್ಲ ಪ್ರಕ್ರಿಯೆಗಳು ನಡೆಯುವುದು ಭೂಮಿಯ ಮೇಲೆ. ಒಂದು ವೇಳೆ ಭೂಮಿಯ ಮೇಲೆ ಭೂಮಿಯ ಆಳದಲ್ಲಿ ಇರುವಷ್ಟೇ ಪ್ರಮಾಣದ ಶಾಖ ಮತ್ತು ಒತ್ತಡವನ್ನು ಕೊಡಬೇಕಾಗುತ್ತದೆ.

ಹೀಗಾಗಿ ಈ ಪ್ರಕ್ರಿಯೆಯಲ್ಲಿರುವ ಒಂದೇ ಒಂದು ಸಮಸ್ಯೆ ಎಂದರೆ ಇಷ್ಟು ದೀರ್ಘವಾದ ಕ್ರಿಯೆಯ ಮೂಲಕ ಗ್ಯಾಸೋಲಿನ್ ಉತ್ಪಾದಿಸುವಾಗ ಅಧಿಕ ಪ್ರಮಾಣದ ಶಕ್ತಿ ಬೇಕಾಗುವುದು. ಜೊತೆಗೆ ವೆಚ್ಚವೂ ಸ್ವಲ್ಪ ಅಧಿಕವೇ! ಸಂಶೋಧನೆ ಇನ್ನಷ್ಟು ಬೆಳೆಯಬೇಕಾಗಿರುವುದರಿಂದ ಇದರ ಕ್ಷಮತೆಯನ್ನು ಹೆಚ್ಚಿಸುವ ಪ್ರಯತ್ನ ಮಾಡಬಹುದು. ಆದರೆ ಒಂದು ವೇಳೆ ಭೂಮಿಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳೇ ಸಿಗುವುದಿಲ್ಲ ಎಂದಾದಾಗ ಈ ವಿಧಾನವನ್ನು ಬಳಸಿಕೊಳ್ಳಬಹುದು ಎಂಬ ವಿಶ್ವಾಸವಂತೂ ಇದ್ದೇ ಇದೆ. ಅದರ ಜೊತೆಗೆ ಕಾರ್ಬನ್ ಡೈ ಆಕ್ಸೈಡ್ ಮತ್ತು ನೀರಿನ ನಡುವಿನ ರಾಸಾಯನಿಕ ಪ್ರಕ್ರಿಯೆಯನ್ನು ಹೆಚ್ಚು ಕ್ಷಮತೆಯಲ್ಲಿ ಮಾಡುವಂಥ ಉಪಕರಣಗಳು, ರಾಸಾಯನಿಕ ಎಂಜಿನ್ ಗಳನ್ನು ಅಭಿವೃದ್ಧಿಪಡಿಸಲು ವಿಜ್ಞಾನಿಗಳು ಪ್ರಯತ್ನಿಸುತ್ತಿದ್ದಾರೆ. ಯಶಸ್ವಿಯಾಗಿ, ಶೇ.100 ಕ್ಷಮತೆಯ ಸಮೀಪಕ್ಕೆ ಬರುವಲ್ಲಿ, ಅಂದರೆ ಸುಮಾರು ಶೇ. 80ಕ್ಕಿಂತ ಹೆಚ್ಚು ಕ್ಷಮತೆ ಸಿಕ್ಕಿದರೂ ಗ್ಯಾಸೋಲಿನ್ ಉತ್ಪಾದನೆಯ ಈ ವಿಧಾನ ಭಾರೀ ಯಶಸ್ಸು ಗಳಿಸುವುದು ಖಂಡಿತ. ಇದಲ್ಲದೇ ಇಂಧನದ ವಿವಿಧ ಮೂಲಗಳಿಗಾಗಿ ಇನ್ನೂ ಬಹಳಷ್ಟು ಸಂಶೋಧನೆಗಳು ನಡೆಯುತ್ತಿವೆ. ಭವಿಷ್ಯದಲ್ಲಿ ಇಂಧನ ಲಭ್ಯತೆಯ ಬಗ್ಗೆ ಒಂದು ಭರವಸೆ ಇಟ್ಟುಕೊಳ್ಳಲು ಅಡ್ಡಿ ಇಲ್ಲ.

Comments

  1. idu nijakku olleya belavanige......thanks for d info.....:)

    ReplyDelete
  2. Pramod Vasudev BhatAugust 18, 2011 at 4:54 PM

    Bharatada rajakarinigala black money horage badre petrol RS 25 ge sigatte but ega costly ede.
    costly erodrindane vijnanigalu e vidana kandu hididaru . e rajakarini galinda agio upayoga andre edu matra agirabahudu

    ReplyDelete
  3. @shruthi- thank you veru much,

    @pramod- neevandiddu nija. adra jotege petroleum utpannagalu shashvatha alla, ondalla ondu dina khali age agutte. heegagi paryaya indhanada hudukata anivarya.

    ReplyDelete

Post a Comment

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು