ದೇವರು ಕಾಣಲೇ ಇಲ್ಲ...!
ದೇವಕಣ ವಿಜ್ಞಾನಿಗಳನ್ನು ಪೇಚಿಗೆ ಸಿಕ್ಕಿಸಿದೆ. ಇದರ ರಾಶಿ ಇಷ್ಟೇ ಎಂದುಕೊಂಡಾಗ ಇನ್ನೂ ಅಧಿಕವಾಗಿರಬೇಕು ಎಂಬ ಚಿಂತನೆ ಮೂಡಿಸಿದೆ. ಇಲ್ಲ, ಇನ್ನೂ ಅಧಿಕ ರಾಶಿಯಿರಬೇಕು ಎಂದುಕೊಂಡಾಗ ತೀರಾ ಹಗುರಾಗಿ ರಾಶಿಯನ್ನೇ ಹೊಂದಿರದ ಕಣವೋ ಎಂಬ ಭ್ರಮೆ ಮೂಡಿಸಿದೆ. ಯಾವುದು ಸತ್ಯ ಎಂಬ ಸಂದಿಗ್ಧ ವಿಜ್ಞಾನಿಗಳ ಪಾಲಾಗಿದೆ.
ದೇವರನ್ನು ಅರ್ಥಾತ್ ದೇವಕಣವನ್ನು ಹುಡುಕಬೇಕು, ಈ ಸೃಷ್ಟಿಯ ಮೂಲ ಹೇಗಾಯಿತು ಎಂಬುದನ್ನು ಕಂಡುಕೊಳ್ಳಬೇಕು, ಬ್ರಹ್ಮಾಂಡ ಸೃಷ್ಟಿಯಾದ ಆರಂಭದಲ್ಲಿ ಜೀವಾಸ್ತಿತ್ವ ಹೇಗಿತ್ತು ಎಂಬುದನ್ನು ಅರಿತುಕೊಳ್ಳಬೇಕು ಎಂಬೆಲ್ಲ ಉತ್ಕಟಾಪೇಕ್ಷೆಯಲ್ಲಿದ್ದ ವಿಜ್ಞಾನಿಗಳು ಭ್ರಮನಿರಸನಗೊಂಡಿದ್ದಾರೆ. ಸೃಷ್ಟಿಯ ಮೂಲಕಣವೆಂದು ವೈಜ್ಞಾನಿಕ ಜಗತ್ತು ಪರಿಗಣಿಸಿರುವಂಥ ಹಿಗ್ಸ್ ಬೋಸಾನ್ಗಳನ್ನು ನೋಡಬೇಕು, ಅವುಗಳ ಸ್ವರೂಪವನ್ನು ಅರಿಯಬೇಕು ಎಂದು ನಿರ್ಧರಿಸಿದ್ದರು. ಅದಕ್ಕಾಗಿ ಸ್ವಿಜರ್ಲೆಂಡಿನ ಜಿನೇವಾ ಸಮೀಪದ ಸಿಇಆರೆನ್ ಎಂಬಲ್ಲಿ ಲಾರ್ಜ್ ಹ್ಯಾಡ್ರಾನ್ ಕೊಲೈಡರ್ ಸ್ಥಾಪಿಸಿದ್ದರು. ಈ ಮೂಲಕವಾಗಿ ದೇವಕಣವನ್ನು ಕಂಡುಕೊಳ್ಳುವ ಚಿಂತನೆಯಿತ್ತು. ಆದರೆ ಅದೀಗ ತಲೆಕೆಳಗಾಗಿದೆ.
ಯಾವ ದೇವಕಣವನ್ನು ಅಂದರೆ ಹಿಗ್ಸ್ ಬೋಸಾನನ್ನು ಕಾಣಬೇಕು ಎಂದು ವಿಜ್ಞಾನಿಗಳು ಬಯಸಿದ್ದರೋ ಆ ದೇವಕಣ ವಿಜ್ಞಾನಿಗಳ ಜೊತೆ ಕಣ್ಣಾಮುಚ್ಚಾಲೆಯಾಡಿದೆ. ದೇಬಕಣವನ್ನು ಕಂಡೆವು, ಇದೇ ದೇವಕಣ ಎಂದು ಗುರುತಿಸುವಷ್ಟು ಕಾಲಾವಕಾಶವನ್ನು ವಿಜ್ಞಾನಿಗಳಿಗೆ ಕೊಡಲಿಲ್ಲ ಈ ದೇವಕಣ. ಮಿಂಚಿನಂತೆ ಮಿಂಚಿ ಮರೆಯಾದ ಹಲವು ಕಣಗಳನ್ನು ಪರಿಶೀಲಿಸಿದ ವಿಜ್ಞಾನಿಗಳಿಗೆ ಆ ಕಣಗಳು ದೇವಕಣಗಳು ಎನಿಸಲಿಲ್ಲ. ವಾಸ್ತವದಲ್ಲಿ ಅವು ದೇವಕಣಗಳೂ ಆಗಿರಲಿಲ್ಲ. ಆದರೂ ಕಷ್ಟಪಟ್ಟಿದ್ದರು ವಿಜ್ಞಾನಿಗಳು. ಒಂದೇ ಒಂದು ಬಾರಿ ಆ ದೇವಕಣಗಳು ಕಂಡರೆ ನಂತರದ ಕೆಲಸಗಳನ್ನು ಅಂದರೆ ಸೃಷ್ಟಿಯ ಮೂಲವನ್ನು ಅರಿಯುವಂಥ ಕಾರ್ಯವನ್ನು ಸುಲಭವಾಗಿ ಮಾಡಬಹುದು ಎಂಬ ಚಿಂತನೆಯಲ್ಲಿದ್ದರು. ದೇವಕಣ ಅಷ್ಟು ಸುಲಭಕ್ಕೆ ಸಿಗುತ್ತದೆಯೇ? ಲಾರ್ಜ್ ಹ್ಯಾಡ್ರಾನ್ ಕೊಲೈಡರ್ಗಾಗಿ ಮಾಡಿದ ಖರ್ಚು ವ್ಯರ್ಥವಾಯಿತು ಎಂಬ ನೋವು ಹೃದಯದಾಳದಲ್ಲಿ ಮನೆ ಮಾಡಿದ್ದರೂ ಇನ್ನೂ ಒಂದಷ್ಟು ಪ್ರಯತ್ನಿಸೋಣ. ಇನ್ನೊಂದು ಆರು ತಿಂಗಳ ಪ್ರಯೋಗದಲ್ಲಿ ದೇವಕಣವನ್ನು ಅರಿಯುವುದಕ್ಕೆ ಪ್ರಯತ್ನಿಸಬಹುದು ಎಂಬ ಆಶಾಭಾವನೆಯನ್ನು ಮುಖದ ಮೇಲೆ ತೋರ್ಪಡಿಸುತ್ತಿದ್ದಾರೆ.
`ಲಾರ್ಜ್ ಹ್ಯಾಡ್ರಾನ್ ಕೊಲೈಡರ್ನಲ್ಲಿ ದೇವಕಣವನ್ನು ನೋಡುವ ಭರವಸೆ ಇಟ್ಟುಕೊಂಡಿದ್ದೆವು. ಆದರೆ ಸಿಗಲಿಲ್ಲ. ಹಾಗಂತ ಸಿಗುವುದೇ ಇಲ್ಲ, ದೇವಕಣವನ್ನು ಕಾಣುವುದಕ್ಕೇ ಸಾಧ್ಯ ಇಲ್ಲ ಎಂದು ಚಿಂತೆ ಮಾಡುವಂಥ ಸಮಯ ಬಂದಿಲ್ಲ. ಇನ್ನಷ್ಟು ಭರವಸೆಯಿದೆ' ಎಂದಿದ್ದಾರೆ ವಿಜ್ಞಾನಿಗಳು.
ದೇವಕಣ ಇರುವುದು ನಿಜವೇ?
ಹಿಗ್ಸ್ ಬೋಸಾನ್ ಅಥವಾ ದೇವಕಣದ ಬಗ್ಗೆ ಸದ್ಯಕ್ಕೆ ನಮಗಿರುವುದು ಥಿಯರಿಟಿಕಲ್ (ಊಹೆ ಮಾಡಿರುವಂಥ) ಜ್ಞಾನ ಮಾತ್ರ. ಈ ಕಣವನ್ನು ಪ್ರಾಯೋಗಿಕವಾಗಿ ನೋಡುವುದು ವಿಜ್ಞಾನಿಗಳ ಪ್ರಯತ್ನವಾಗಿತ್ತು. ಪ್ರಾಯೋಗಿಕವಾಗಿ ಈ ಕಣವನ್ನು ಕಾಣಲು ಸಾಧ್ಯವಾದರಷ್ಟೇ ಹಿಗ್ಸ್ ಬೋಸಾನ್ ಥಿಯರಿ ಸತ್ಯ ಎಂದು ಸಾಬೀತಾಗುತ್ತದೆ. ಇಲ್ಲದೇ ಹೋದಲ್ಲಿ ಈ ಥಿಯರಿಯೇ ಸುಳ್ಳು ಎನ್ನಬೇಕಾಗುತ್ತದೆ. ಒಂದು ವೇಳೆ, ಹಿಗ್ಸ್ ಬೋಸಾನ್ ಕಾಣಲೇ ಇಲ್ಲ ಎಂದಾದಲ್ಲಿ ಅದರ ಬದಲಾಗಿ ಇರುವಂಥ ದೇವಕಣವನ್ನು ಅಂದರೆ ಈ ಸೃಷ್ಟಿಯ ಬಿಲ್ಡಿಂಗ್ ಬ್ಲಾಕ್ಗಳನ್ನು ಕಂಡುಕೊಳ್ಳುವುದಕ್ಕೆ ಹೊಸ ಪ್ರಯತ್ನ ಮಾಡಬೇಕಾಗುತ್ತದೆ, ಅದಕ್ಕೊಂದು ಹೊಸ ಸಿದ್ಧಾಂತ, ವಾದ ಮಂಡಿಸಬೇಕಾಗುತ್ತದೆ.
2009ರಲ್ಲಿ ಲಾರ್ಜ್ ಹ್ಯಾಡ್ರಾನ್ ಕೊಲೈಡರ್ನಲ್ಲಿ ಪ್ರೋಟಾನ್ಗಳನ್ನು ಪರಸ್ಪರ ಅತಿ ವೇಗದಲ್ಲಿ ಘರ್ಷಣೆಗೆ ಒಳಪಡಿಸುವ ಪ್ರಕ್ರಿಯೆ ಶುರುವಾಗಿತ್ತು. ಒಂದೊಂದು ಪ್ರಮಾಣದ ವೇಗ, ಶಕ್ತಿ ಮತ್ತಿತರ ಸ್ಥಿರಾಂಕಗಳೊಂದಿಗೆ ಈ ಪ್ರಯೋಗ ನಡೆಸಿದಾಗಲೂ ಸಹ ದೇವಕಣವನ್ನು ಕಾಣುತ್ತೇವೆ ಎಂಬ ಭರವಸೆ ಇತ್ತು. ಒಂದು ಹಂತದ ಬಳಿಕ ಪ್ರಯೋಗ ಮೇಲಮೇಲಕ್ಕೆ ಹೋದಂತೆ ನಂಬಿಕೆ, ಭರವಸೆ ತಲೆಕೆಳಗಾಗುವುದಕ್ಕೆ ಶುರುವಾಯಿತು. ದೇವಕಣ ಅಡಗಿ ಕುಳಿತಿತು. ಈ ದೇವಕಣ 115ರಿಂದ 145 ಗಿಗಾಎಲೆಕ್ಟ್ರಾನ್ ವೋಲ್ಟ್ (ಜಿಇವಿ) ರಾಶಿ, ಅಂದರೆ ಪ್ರೋಟಾನಿನ ರಾಶಿಗಿಂತ 122ರಿಂದ 154 ಪಟ್ಟು ಅಧಿಕ ರಾಶಿ ಹೊಂದಿರಬಹುದು ಎಂಬುದು ವಿಜ್ಞಾನಿಗಳ ಈ ಹಿಂದಿನ ಊಹೆಯಾಗಿತ್ತು. ಆದರೆ ಈಗ ಶೆಕಡಾ 90ರಷ್ಟು ರಾಶಿಯನ್ನು ವಿಜ್ಞಾನಿಗಳು ತಿರಸ್ಕರಿಸಿದ್ದಾರೆ. ದೇವಕಣದ ರಾಶಿ ನಾವೆಣಿಸಿದಷ್ಟು ಇಲ್ಲ ಎಂಬ ಚಿಂತನೆಗೆ ಬಂದಿದ್ದಾರೆ. ಅಂದರೆ ಹಿಗ್ಸ್ ಬೋಸಾನ್ ಅಸ್ತಿತ್ವದಲ್ಲೇ ಇಲ್ಲ ಎಂಬ ಚಿಂತನೆ ಈಗ ವಿಜ್ಞಾನಿಗಳ ಮನಸ್ಸಿನಲ್ಲಿದೆ. ದೇವಕಣ ಅಥವಾ ಹಿಗ್ಸ್ ಬೋಸಾನ್ ಅಸ್ತಿತ್ವದಲ್ಲಿಯೇ ಇಲ್ಲ ಎಂದಾದರೆ ನಿಸರ್ಗದ ಅತಿಮಾನುಷ ಶಕ್ತಿಯ ಬಗ್ಗೆ ಚಿಂತನೆ ನಡೆಸಬೇಕಾಗುತ್ತದೆ ಎನ್ನುತ್ತಿದ್ದಾರೆ ಕೆಲವು ವಿಜ್ಞಾನಿಗಳು. `ದೇವಕಣದ ಹುಡುಕಾಟದ ಬಗ್ಗೆ ನಾವು ಅಷ್ಟೊಂದು ಗಮನ ಕೊಡಲೇ ಇಲ್ಲ. ಇದರಿಂದ ಯಾವುದಾದರೂ ಫಲಿತಾಂಶ ಸಿಗುವ ಬಗ್ಗೆ ನಮಗೆ ಅನುಮಾನವಿತ್ತು' ಎಂದು ಬಹಳಷ್ಟು ವಿಜ್ಞಾನಿಗಳು ಈಗ ಹೇಳುತ್ತಿದ್ದಾರೆ.
ಆದರೂ ವಿಜ್ಞಾನಗಳು ತಮ್ಮ ಪ್ರಯತ್ನ ನಿಲ್ಲಿಸುವ ಯೋಚನೆಯಲ್ಲಿಲ್ಲ. ಇನ್ನಷ್ಟು ಪ್ರಯೋಗಗಳನ್ನು ಮಾಡುತ್ತೇವೆ. ದೇವಕಣ ಸಿಕ್ಕೇ ಸಿಗುತ್ತೆ ಎಂದು ಹೇಳುತ್ತಿದ್ದಾರೆ. ಅವರ ಆತ್ಮವಿಶ್ವಾಸವನ್ನು ಮೆಚ್ಚಲೇಬೇಕು. ಒಂದಷ್ಟು ಜನ ಇದನ್ನು ಹುಂಬತನ ಎನ್ನಲೂಬಹುದು. ಅದೇನೇ ಇರಲಿ, ಪ್ರಯತ್ನವಂತೂ ಮುಂದುವರಿಯುತ್ತದೆ. ದೇವಕಣ ಈಗ ಎಣಿಸಿರುವುದಕ್ಕಿಂತ ಕಡಿಮೆ ರಾಶಿ ಹೊಂದಿರಬಹುದು. ಅಷ್ಟು ಕಡಿಮೆ ರಾಶಿಯ ಕಣವನ್ನು ತೋರಿಸುವುದಕ್ಕೆ ಲಾರ್ಜ್ ಹ್ಯಾಡ್ರಾನ್ ಕೊಲೈಡರ್ನಿಂದ ಸಾಧ್ಯವಾಗಲಿಕ್ಕಿಲ್ಲ. ಹೀಗಾಗಿ ಇದಕ್ಕೆ ಬೇರೇನಾದರೂ ವ್ಯವಸ್ಥೆ ಮಾಡಬೇಕು. ಆ ವ್ಯವಸ್ಥೆ ಹೇಗಿರಬೇಕು ಎಂಬ ಚಿಂತನೆಯಲ್ಲಿದ್ದಾರೆ ವಿಜ್ಞಾನಿಗಳು.
ಎಲ್ಲಾ ಆದಮೇಲೆ ಭಗವಂತ!
ದೇವಕಣ 145 ಜಿಇವಿಗಿಂತ ಅಧಿಕ ರಾಶಿಯುಳ್ಳದ್ದೆಂದು ವಿಜ್ಞಾನಿಗಳು ಭಾವಿಸಿರಲಿಲ್ಲ. ಯಾಕೆಂದರೆ, ಇದು ಸೃಷ್ಟಿಯ ಮೂಲ ಕಣವೇ ಆಗಿದ್ದಂಥ ಪಕ್ಷದಲ್ಲಿ ಇದರಿಂದ ಸೃಷ್ಟಿಯಾಗುವ ಕಣಗಳಿಗಿಂತ ಕಡಿಮೆ ಅಥವಾ ಅದಕ್ಕೆ ತತ್ಸಮಾನ ರಾಶಿಯುಳ್ಳದ್ದಾಗಿರಬೇಕು ಎಂಬುದಾಗಿ ವಿಜ್ಞಾನಿಗಳು ಚಿಂತಿಸಿದ್ದರು. ಆದರೆ ಈಗ ಈ ಚಿಂತನೆ ವಿಜ್ಞಾನಗಳನ್ನು ಪೇಚಿಗೆ ಸಿಲುಕಿಸಿದೆ. ಇದರ ರಾಶಿ ಇಷ್ಟೇ ಎಂದುಕೊಂಡಾಗ ಇನ್ನೂ ಅಧಿಕವಾಗಿರಬೇಕು ಎಂಬ ಚಿಂತನೆ ಮೂಡಿಸಿದೆ. ಇಲ್ಲ, ಇನ್ನೂ ಅಧಿಕ ರಾಶಿಯಿರಬೇಕು ಎಂದುಕೊಂಡಾಗ ತೀರಾ ಹಗುರಾಗಿ ರಾಶಿಯನ್ನೇ ಹೊಂದಿರದ ಕಣವೋ ಎಂಬ ಭ್ರಮೆ ಮೂಡಿಸಿದೆ. ಯಾವುದು ಸತ್ಯ ಎಂಬ ಸಂದಿಗ್ಧ ವಿಜ್ಞಾನಿಗಳ ಪಾಲಾಗಿದೆ. ದೇವಕಣವನ್ನು ಕಾಣಲು ಆರಂಭದಲ್ಲಿ ಲಾರ್ಜ್ ಎಲೆಕ್ಟ್ರಾನ್ ಪಾಸಿಟ್ರಾನ್ ಕೊಲೈಡರ್ ಮತ್ತು ಸ್ಟಾನ್ ಫರ್ಡ್ ಲೀನಿಯರ್ ಕೊಲೈಡರ್ಗಳಲ್ಲಿ ಪ್ರಯೋಗಗಳನ್ನು ಮಾಡಲಾಗಿತ್ತು. ಈ ಪ್ರಯೋಗದ ಫಲಿತಾಂಶದ ಪ್ರಕಾರ ದೇವಕಣ 120ರಿಂದ 130 ಜಿಇವಿ ರಾಶಿಯದ್ದಾಗಿರಬಹುದು ಎಂದು ಅಂದಾಜಿಸಲಾಗಿತ್ತು. ಅದರ ನಂತರ ನಡೆದಂಥ ಪ್ರಯೋಗಗಳು ದೇವಕಣದ ರಾಶಿ ಖಂಡಿತಕ್ಕೂ 130 ಜಿಇವಿಗಿಂತ ಅಧಿಕ ಎಂಬ ಚಿಂತನೆಯನ್ನನು ವಿಜ್ಞಾನಿಗಳ ಮನದಲ್ಲಿ ಹುಟ್ಟಿಸಿದವು. ಆದರೆ ಈಗ ಸಿಕ್ಕಿರುವಂಥ ಫಲಿತಾಂಶದ ಪ್ರಕಾರ ದೇವಕಣದ ರಾಶಿ ತೀರಾ ಅತ್ಯಲ್ಪ. ಅಂದರೆ 130 ಜಿಇವಿಯ ಶೇಕಡಾ 90ರಷ್ಟು ಕಡಿಮೆ ರಾಶಿಯಷ್ಟೇ ಇರಬಹುದು ಎನ್ನಲಾಗುತ್ತಿದೆ. ಇದರ ಜೊತೆಗೆ ಈ ದೇವ ಕಣ ಅತ್ಯಧಿಕ ರಾಶಿಯನ್ನು ಹೊಂದಿದ್ದು, ಅದು ವಿವಿಧ ಕಣಗಳಾಗಿ ಮಾರ್ಪಾಟಾಗುತ್ತಿದೆಯೇ ಎಂಬ ಅನುಮಾನವೂ ವಿಜ್ಞಾನಿಗಳಲ್ಲಿ ಬಂದಿದೆ. ಎಲ್ಲಾ ಫಲಿತಾಂಶಗಳನ್ನೂ ಗಮನಿಸಿರುವ ಕೆಲವು ವಿಜ್ಞಾನಿಗಳು ಇದೆಲ್ಲವೂ ನಿಸರ್ಗದ ಶಕ್ತಿ ಎಂಬಲ್ಲಿಗೆ ತಮ್ಮನ್ನು ಸ್ಥಿತಗೊಳಿಸಿದ್ದಾರೆ. ನಮ್ಮಲ್ಲೊಂದು ಮಾತಿದೆ- `ಎಲ್ಲಾ ಆದಮೇಲೆ ಭಗವಂತನಿಗೆ ಬಿಟ್ಟದ್ದು ಅಂದ್ರು' ಅಂತ!
ನಮ್ಮ ವೇದ, ಪುರಾಣಗಳು, ಉಪನಿಷತ್ತುಗಳ ಪ್ರಕಾರ ಸೃಷ್ಟಿಯ ಮೂಲ ಆದಿಶಕ್ತಿ. ಈ ಶಕ್ತಿಗೆ ನಾವು ಸ್ತ್ರೀರೂಪ ಕೊಟ್ಟಿದ್ದೇವೆ. ಈ ಶಕ್ತಿ ಆದಿ, ಅಂತ್ಯ ಇಲ್ಲದ್ದು ಎಂಬುದು ನಮ್ಮ ನಂಬಿಕೆ. ಈಗ ವಿಜ್ಞಾನಿಗಳು ಹುಡುಕುತ್ತಿರುವಂಥ ದೇವಕಣವನ್ನು ಕಾಣುವುದಕ್ಕೆ ನಮ್ಮ ವೇದ, ಉಪನಿಷತ್ತುಗಳು ಸಹಕಾರಿಯಾಗಬಲ್ಲವು ಎಂದೆನಿಸುತ್ತದೆ. ಅಂದರೆ ಸೃಷ್ಟಿ ಮೂಲ ಅನಂತವಾದದ್ದು. ವಸ್ತುಗಳನ್ನು ಒಡೆಯುತ್ತಾ, ಕಿರಿದಾಗಿಸುತ್ತಾ, ಮತ್ತೆ ಒಡೆಯುತ್ತಾ ಅನಂತದೆಡೆಗೆ ಹೋದರೆ ಅಲ್ಲಿ ಏನೇನೂ ಕಾಣಿಸಲಿಕ್ಕಿಲ್ಲ. ಒಂದೆದೇ ವಸ್ತುವನ್ನು ಕೂಡಿಸುತ್ತಾ, ಗ್ರಹ, ಸೌರಮಂಡಲ, ಇಂಥ ಅಸಂಖ್ಯಾತ ಸೌರಮಂಡಲಗಳು, ವಿಶ್ವ, ಅಂಥ ಅಸಂಖ್ಯಾತ ವಿಶ್ವಗಳು... ಹೀಗೆಯೇ ಕೂಡಿಸುತ್ತಾ ಹೋದರೂ ಸಹ ನಮಗೆ ಏನೂ ಕಾಣಿಸಲಿಕ್ಕಿಲ್ಲ. ಅಂದರೆ ಅಷ್ಟು ದೊಡ್ಡದಾದಂಥದ್ದನ್ನು, ಅದರ ಸ್ವರೂಪವನ್ನು ಕಲ್ಪಿಸಿಕೊಳ್ಳುವುದಕ್ಕೆ ನಮ್ಮಿಂದ ಸಾಧ್ಯವಿಲ್ಲ. ಅಖಂಡತೆಯೇ ಈ ಶಕ್ತಿ ಎಂಬುದು ನಮ್ಮ ನಂಬಿಕೆ.
ಹಾಗಾದರೆ ಸೃಷ್ಟಿ ಮೂಲ ಏನಿರಬಹುದು? ಸೃಷ್ಟಿ ಮೂಲವನ್ನು ಹುಡುಕುವಾಗ ಒಂದು ವಿಚಾರವನ್ನು ಮೊದಲು ಸ್ಪಷ್ಟಪಡಿಸಿಕೊಳ್ಳಬೇಕು. ಕಿರಿದಾಗುತ್ತಾ ಹೋದಂತೆ ಶೂನ್ಯಕ್ಕೆ ಹೋಗಿ ಅಲ್ಲಿಂದಲೂ ಮುಂದಕ್ಕೆ ಹೋಗುವುದು ಮತ್ತು ಹಿರಿದಾಗಿಸುತ್ತಾ ನಮ್ಮ ಕಲ್ಪನೆಗೆ ಎಟುಕದಷ್ಟು ಹಿರಿದಾಗುವಂಥದ್ದೆರಡರ ಸಮ್ಮಿಶ್ರಣವೇ ಸೃಷ್ಟಿ ಮೂಲವಾಗಿರಬೇಕು. ಅಂದರೆ ಅಖಂಡತೆಯೇ ಸೃಷ್ಟಿ ಮೂಲ ಎಂಬುದಂತೂ ಸ್ಪಷ್ಟ. ದೇವಕಣವನ್ನು ಕಂಡುಕೊಳ್ಳುವ ಪ್ರಯತ್ನವನ್ನು ತೀರಾ ಹತ್ತಿರದಿಂದ ಕಂಡಂಥ ಹಲವು ವಿಜ್ಞಾನಿಗಳು ಕೂಡಾ ಅಖಂಡತೆಯನ್ನೇ ಒಪ್ಪಿಕೊಳ್ಳುವ ಮನಃಸ್ಥಿತಿಗೆ ಬಂದಿದ್ದಾರೆ. ಆದಾಗ್ಯೂ, ಇನ್ನೊಂದು ತಂಡದ ವಿಜ್ಞಾನಿಗಳು ಪ್ರಯೋಗ ಮುಂದುವರಿಸುವ ಚಿಂತನೆಯಲ್ಲಿದ್ದಾರೆ. ಇನ್ನೂ ಏನೇನು ಫಲಿತಾಂಶ ಬರುತ್ತೋ ಕಾದು ನೋಡೋಣ!
Comments
Post a Comment