ಇಂಧನಕ್ಕಾಗಿ ಗಾಳಿಯಲ್ಲಿ ಗಣಿಗಾರಿಕೆ!
ಸಾಮಾನ್ಯ ಜನರು `ನೀರಿನಿಂದ ಗಾಡಿ ಓಡೋ ಹಾಗಾಗಬೇಕು. ಹಾಗಿದ್ದರೆ ಒಂದಲ್ಲ, ಎರಡೆರಡು ಗಾಡಿ ಬೇಕಾದರೂ ಇಟ್ಟುಕೊಳ್ಳಬಹುದು' ಎಂದು ಹೇಳುತ್ತಿದ್ದರು. ಜನ ಏನು ಅಪೇಕ್ಷೆ ಪಟ್ಟಿದ್ದರೋ ಅದು ಸಾಧ್ಯವಾಗುವ ದಿನ ಹತ್ತಿರ ಬಂದಿದೆ. ಅಂದರೆ ನೀರು ಮತ್ತು ಗಾಳಿಯಿಂದ (ಕಾರ್ಬನ್ ಡೈ ಆಕ್ಸೈಡ್) ಗಾಡಿ ಓಡುವ ದಿನ ಹತ್ತಿ ಬರುತ್ತಿದೆ. ಪೆಟ್ರೋಲಿಯಂ ಉತ್ಪನ್ನಗಳು ದಿನೇ ದಿನೇ ದುಬಾರಿಯಾಗುತ್ತಿವೆ. ಜೊತೆಗೆ ಈ ಸಂಪನ್ಮೂಲಗಳ ಆಗರ ಬರಿದಾಗುತ್ತಿದೆ. ಇಂಧನಗಳಿಲ್ಲದ ಬದುಕನ್ನು ಕಲ್ಪಸಿಕೊಳ್ಳುವುದಕ್ಕೂ ಸಾಧ್ಯವಿಲ್ಲದಂಥ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಏನಾದರೊಂದು ಮಾರ್ಗ ಕಂಡು ಹಿಡಿಯಲೇಬೇಕೆಂಬ ಪ್ರಯತ್ನಗಳು ವೈಜ್ಞಾನಿಕ ವಲಯದಲ್ಲಿ ಸತತವಾಗಿ ನಡೆಯುತ್ತಲೇ ಇದೆ. ಸೂರ್ಯನ ಶಕ್ತಿಯನ್ನು ವಿದ್ಯುತ್ತನ್ನಾಗಿ ಪರಿವರ್ತಿಸುವಂಥ ತಂತ್ರಜ್ಞಾನ ಇದೆಯಾದರೂ ಕ್ಷಮತೆ ಕಡಿಮೆ ಇರುವುದರಿಂದ ಹೂಡಿಕೆಯ ಪ್ರಮಾಣ ಹೆಚ್ಚು ಬೇಕಾಗುತ್ತದೆ. ಹೀಗಾಗಿ ಹೆಚ್ಚು ಕ್ಷಮತೆಯ ವಿಧಾನಕ್ಕಾಗಿ ಪ್ರಯತ್ನ ನಡೆಯುತ್ತಲೇ ಇದೆ. ಈ ಪ್ರಯತ್ನಗಳ ಸರಣಿಯಲ್ಲಿ ಒಂದು ಭರವಸೆಯ ಬೆಳಕು ಚಿಮ್ಮಿದ್ದು ಗಾಳಿಯಲ್ಲಿ. ಹಾಗಂತ ಇದು ಪವನ ವಿದ್ಯುತ್ ಉತ್ಪಾದನೆಯ ತಂತ್ರಜ್ಞಾನವಲ್ಲ. ಗಾಳಿಯಲ್ಲೇ ಗಣಿಗಾರಿಕೆ ಮಾಡುವಂಥ ತಂತ್ರಜ್ಞಾನ! ಹಾಂ, ಗಣಿಗಾರಿಕೆ ಎಂದ ತಕ್ಷಣ ನಮ್ಮ ಮನಸ್ಸು ಅಕ್ರಮ ಗಣಿಗಾರಿಕೆ, ಲೋಕಾಯುಕ್ತ ವರದಿ... ಮುಂತಾದ ವಿಚಾರಗಳತ್ತ ಸುಳಿದಾಡೀತು. ಇದು ಆ ಗಣಿಗಾರಿಕೆ ಅಲ್ಲ! ಗಾಳಿಯಲ್ಲಿರುವಂ...