ರೋಗಗಳ ಗೂಡಾಗುತ್ತಿದೆ ಯುವಶಕ್ತಿ
* 20 ವರ್ಷಕ್ಕೇ ಮಧುಮೇಹ, ಬೊಜ್ಜು, ಬಿಪಿ; ಆರೋಗ್ಯದ ಬಗ್ಗೆ ಕಾಳಜಿಯಿಲ್ಲ * ನಗರ ಪ್ರದೇಶದ ಯುವಕರಲ್ಲೇ ಹೆಚ್ಚು ಸಮಸ್ಯೆ; ಯುವತಿಯರಲ್ಲಿ ಬೊಜ್ಜಿನ ಪ್ರಮಾಣ ಅಧಿಕ ದೇಶದ ಜೀವಾಳ ಎಂದೇ ಪರಿಗಣಿಸಲ್ಪಡುವ ಯುಶಕ್ತಿ ರೋಗಗಳ ಗೂಡಾಗುತ್ತಿದೆ. ಸಾಮಾನ್ಯವಾಗಿ 40 ವರ್ಷದ ನಂತರ ಕಾಣಿಸಿಕೊಳ್ಳುತ್ತಿದ್ದ ಸಮಸ್ಯೆಗಳೆಲ್ಲ ಇಂದು 20 ವರ್ಷದ ಯುವಕರಲ್ಲೇ ಕಾಣಿಸಿಕೊಳ್ಳುತ್ತಿವೆ. ಮಧುಮೇಹ, ಬೊಜ್ಜು, ರಕ್ತದೊತ್ತಡ, ಮಾನಸಿಕ ಒತ್ತಡ ಮತ್ತಿತರ ಹಲವಾರು ಸಮಸ್ಯೆಗಳಿಂದ ದೇಶದ ಯುವಶಕ್ತಿ ನರಳುತ್ತಿದೆ. ಯುವಶಕ್ತಿಯಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಕಡಿಮೆಯಾಗುತ್ತಿದೆ. ಅಂದಹಾಗೆ ಇಂದು (ಆಗಸ್ಟ್ 12) ಅಂತಾರಾಷ್ಟ್ರೀಯ ಯುವ ದಿನ. ಭಾರತದಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನವಾದ ಜನವರಿ 12ರಂದು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತಿದೆ. ವಿಶ್ವಸಂಸ್ಥೆ ಮಾನ್ಯ ಮಾಡಿರುವಂಥ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಯುವದಿನವೆಂದು ಪರಿಗಣಿತವಾಗಿರುವುದು ಆಗಸ್ಟ್ 12. ಇಂತಹ ಸಮಯದಲ್ಲಿ ಯುವಶಕ್ತಿ ಹಾದಿ ತಪ್ಪುತ್ತಿರುವುದರ ಬಗ್ಗೆ ಯೋಚಿಸಲೇಬೇಕಾದ ಅನಿವಾರ್ಯತೆಯಿದೆ. ಈ ಹಿಂದಿನ ದಿನಗಳಲ್ಲಿ ದೇಶದಲ್ಲಿ ಬೊಜ್ಜಿನ ಪ್ರಮಾಣ ಶೇ.2ರಷ್ಟಾಗಿತ್ತು. ಆದರೆ ಈಗ ಇದು ಶೇ.20-25ಕ್ಕೆ ಏರಿಕೆಯಾಗಿದೆ. ಭಾರತದ ಶೇ..25ರಷ್ಟು ಯುವಕರು ಇಂದು ಬೊಜ್ಜಿನ ಸಮಸ್ಯೆಗೆ ಒಳಗಾಗಿದ್ದಾರೆ. ಅದರಲ್ಲೂ ನಗರ ಪ್ರದೇಶಗಳಲ್ಲಿನ ಯುವಕರಲ್ಲಿ ಈ ಸಮಸ್ಯೆ ಹೆಚ್ಚಾಗಿದೆ. ಪ್ರಾಯವ...