ಕೋತಿಗಳ ಸಾಮಾಜಿಕ ಸಂವಹನ...!

ಫೇಸ್‌ಬುಕ್, ಟ್ವಿಟರ್ ಅಂದಾಕ್ಷಣ ನಮ್ಮ ಮನಸು ಖುಷ್ ಖುಷ್ ಆಗುತ್ತೆ. ಸೋಶಿಯಲ್ ನೆಟ್‌ವರ್ಕಿಂಗ್ ಇರಲೇಬೇಕು, ಅದೇ ನಮ್ಮನ್ನು ಉಲ್ಲಸಿತರನ್ನಾಗಿ ಇರಿಸೋದು ಅಂತ ಮನಸು ಕೂಗಿ ಹೇಳುತ್ತೆ. ಹಾಗಂತ ಈ ಸಾಮಾಜಿಕ ಸಂಪರ್ಕ ತಾಣಗಳು ತಲತಲಾಂತರ ವರ್ಷಗಳಿಂದ ಮಾನವ ಜೀವನದ ಅವಿಭಾಜ್ಯ ಅಂಶವಾಗಿ ಬಂದದ್ದೇನೂ ಅಲ್ಲ. ಇಂಟರ್‌ನೆಟ್ ಯುಗದಲ್ಲಿ ಕಂಪ್ಯೂಟರ್ ಬಿಟ್ಟು ಕದಲುವುದಕ್ಕೇ ಸಾಧ್ಯವಿಲ್ಲದಷ್ಟು ಬ್ಯುಸಿಯಾಗಿರುವ ಮಾನವ ಜೀವಿಗಳ ನಡುವಿನ ಸಂಪರ್ಕದ ಕೊಂಡಿಯಾಗಿ ಈ ಅಂತರ್ಜಾಲ ತಾಣಗಳು ಬಳಕೆಯಾಗುತ್ತಿವೆ ಅಷ್ಟೆ! ಹಾಗಂತ ‘ಸಾಮಾಜಿಕ ಸಂವಹನ’ ಈಚೀಚೆಗಿನ ವಿಚಾರವೇನೂ ಅಲ್ಲ. ಮಾನವನ ಪೂರ್ವಜರೆನ್ನಿಸಿಕೊಂಡಿರುವ ಕೋತಿಗಳು ಸಾವಿರಾರು ವರ್ಷಗಳಿಂದ ಸಾಮಾಜಿಕ ಸಂವಹನ ನಡೆಸುತ್ತಿವೆ. ಇದರ ಮೂಲಕವೇ ಪರಸ್ಪರ ಕ್ಷಿಪ್ರ ಸಂವಹನ ಬೆಳೆಸಿಕೊಂಡು ಜೀವನ ಸಾಗಿಸುತ್ತವೆಯಂತೆ!
ಸೇಂಟ್ ಆ್ಯಂಡ್ರೂಸ್ ಯೂನಿವರ್ಸಿಟಿಯ ಆ್ಯಂಡ್ರೂ ವೈಟೆನ್ ನೇತೃತ್ವದ ಸಂಶೋಧಕರ ತಂಡ ಕೋತಿಗಳ ಸಾಮಾಜಿಕ ಸಂವಹನ ಕಲೆಯನ್ನು ಗುರುತಿಸಿದೆ. ಕೋತಿಗಳ ಜೀವನದ ಪ್ರತಿಯೊಂದು ಕ್ಷಣ, ಘಟ್ಟವೂ ಸಾಮಾಜಿಕ ಸಂವಹನಗಳನ್ನು ಆಧರಿಸಿರುತ್ತದೆ. ಅವುಗಳ ನಡತೆಯನ್ನೂ ಈ ಸಂವಹನವೇ ರೂಪಿಸುತ್ತದೆ. ಯಾವುದೇ ಒಂದು ಹೊಸ ಸಂಗತಿ ಒಂದು ಕೋತಿಯ ಗಮನಕ್ಕೆ ಬಂದರೂ ಅದು ತಕ್ಷಣವೇ ಕೋತಿಗಳ ಸಮೂಹದಲ್ಲಿ ಪಸರಿಸುತ್ತದೆ. ಇದು ಅವುಗಳಲ್ಲಿರುವ ಸಾಮಾಜಿಕ ಸಂವಹನದ ಪ್ರಭಾವ ಎಂಬುದು ಸಂಶೋಧಕರ ಅಂಬೋಣ.
ಕೃತಕ ಹಣ್ಣುಗಳನ್ನು ಸೃಷ್ಟಿಸಿ ವಿಜ್ಞಾನಿಗಳು ಅಧ್ಯಯನ ನಡೆಸಿದ್ದಾರೆ. ಮುಚ್ಚಳ ತೆಗೆಯುವ ಮತ್ತು ಕಿಂಡಿಯನ್ನು ಎತ್ತುವ ಮೂಲಕ ಹಣ್ಣನ್ನು ಒಡೆದು ಒಳಗಿನ ಫಲವನ್ನು ತಿನ್ನಲು ಅನುವಾಗುವಂತೆ ಕೃತಕ ಹಣ್ಣನ್ನು ರೂಪಿಸಿದ್ದರು. ಕೋತಿಗಳ ೨ ತಂಡಗಳನ್ನು ಸಿದ್ಧಪಡಿಸಿ, ಅವುಗಳನ್ನು ತಲಾ ಒಂದನ್ನು ಆಯ್ದುಕೊಂಡ ವಿಜ್ಞಾನಿಗಳು ಒಂದು ಕೋತಿಗೆ ಮುಚ್ಚಳ ತೆಗೆಯುವ ಮತ್ತು ಇನ್ನೊಂದಕ್ಕೆ ಕಿಂಡಿ ಎತ್ತುವ ಕಲೆಯನ್ನು ಕಲಿಸಿದರು. ನಂತರ ಅವುಗಳನ್ನು ಮತ್ತೆ ಅವುಗಳದ್ದೇ ತಂಡದಲ್ಲಿ ಬಿಟ್ಟು, ತಾವು ಕಲಿತುಕೊಂಡ ಕಲೆಯನ್ನು ಇತರ ಕೋತಿಗಳಿಗೆ ಅವು ಹೇಗೆ ಕಲಿಸುತ್ತವೆ ಎಂಬುದನ್ನು ಅಧ್ಯಯನ ಮಾಡಿದರು. ಆಗ ವಿಜ್ಞಾನಿಗಳಿಗೆ ಸಿಕ್ಕಿದ ವಿಚಾರ ಅಚ್ಚರಿಯದ್ದು-
ಕೋತಿಗಳ ಸಮೂಹದಲ್ಲಿನ ಸಾಮಾಜಿಕ ಸಂವಹನೆಗೆ ನೇರವಾಗಿ ಸ್ಪಂದಿಸುತ್ತಿದ್ದ ಕೋತಿಗಳು ತಕ್ಷಣವೇ ಹೊಸ ವಿಧಾನವನ್ನು ಕಲಿತುಕೊಂಡರೆ, ಆ ಸಮೂಹದಲ್ಲೇ ಇದ್ದ ಉಪಸಮೂಹದಲ್ಲಿನ ಕೋತಿಗಳು ಸ್ವಲ್ಪ ನಿಧಾನವಾಗಿ ಕಲಿತುಕೊಂಡವು. ಅರ್ಥಾತ್ ಫೇಸ್‌ಬುಕ್, ಟ್ವಿಟರ್‌ಗಳಲ್ಲಿ ಒಬ್ಬ ವ್ಯಕ್ತಿ ಅಪ್‌ಲೋಡ್ ಮಾಡಿದ ಫೋಟೋ, ಸ್ಟೇಟಸ್ ಮೆಸೇಜ್ ಆತನನ್ನು ನೇರವಾಗಿ ಫಾಲೋ ಮಾಡುತ್ತಿರುವ ವ್ಯಕ್ತಿಗೆ ತಕ್ಷಣವೇ ಸಿಕ್ಕಿಬಿಡುತ್ತದೆ. ಫಾಲೋ ಮಾಡದೇ ಇದ್ದರೆ ಸಿಗುವುದು ಕಷ್ಟ. ಯಾರಾದರೂ ಅದನ್ನು ತಮ್ಮ ಖಾತೆಯಲ್ಲಿ ಷೇರ್ 33u3233?ಿದರೆ ಅವರನ್ನು ಫಾಲೋ ಮಾಡುವವರಿಗೂ ಅದು ಸಿಗುತ್ತದೆ. ಇದೇ ರೀತಿಯ ತಂತ್ರಗಳೂ ಕೋತಿಗಳಲ್ಲಿ ಕಾಣಿಸಿದವು ಎನ್ನುತ್ತಾರೆ ವೈಟೆನ್.


Comments

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು