Posts

ಸಂಸ್ಕೃತಿಯ ಮೂಲ ಹವಾಮಾನ ವೈಪರೀತ್ಯ!

Image
ಮಾನವ ವಿಶಿಷ್ಟವಾದ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಬಂದಿದ್ದಾನೆ . ಜಗತ್ತಿನ ಒಂದೊಂದು ಭಾಗದಲ್ಲಿ ಒಂದೊಂದು ಸಂಸ್ಕೃತಿ ಮನೆಮಾಡಿದೆ . ದೇಶ - ದೇಶಗಳ ಸಂಸ್ಕೃತಿಯಲ್ಲಿ ಬಹಳಷ್ಟು ವ್ಯತ್ಯಾಸವಿದೆ . ಒಂದು ಜಿಲ್ಲೆಯೇ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ರೀತಿಯ ಸಂಸ್ಕೃತಿ ಬೆಳೆದು ಬಂದಿರುವಂಥ ಸ್ಥಿತಿಯನ್ನೂ ಕಾಣಬಹುದು . ಆದರೆ ಇಂದಿನ ಯುಗದ ಮಾನವ ಬೆಳೆಸಿಕೊಂಡು ಬಂದಿರುವ ಈ ಸಂಸ್ಕೃತಿಗೆ ಕಾರಣವೇನು ಗೊತ್ತೇ ? ಹವಾಮಾನದಲ್ಲಾದಂಥ ವೈಪರೀತ್ಯ ! ಅಚ್ಚರಿಯಾಗುತ್ತದೆ ನಿಜ , ಹವಾಮಾನ ವೈಪರೀತ್ಯಕ್ಕೂ ಸಂಸ್ಕೃತಿಗೂ ಎತ್ತಣಿಂದೆತ್ತ ಸಂಬಂಧ ? ತಾಪಮಾನ ತೀವ್ರಗತಿಯಲ್ಲಿ ಏರಿಳಿತಗೊಳ್ಳುವುದರಿಂದ ಸಂಸ್ಕೃತಿಯಲ್ಲೇನಾದರೂ ಬದಲಾವಣೆಯಾಗುತ್ತದೆಯೇ ? ಹೌದು ಎನ್ನುತ್ತಿದ್ದಾರೆ ಬ್ರಿಟನ್‌ನ ಸಂಶೋಧಕರು . ಕಾರ್ಡಿಫ್ ಯೂನಿವರ್ಸಿಟಿಯ ಸ್ಕೂಲ್ ಆಫ್ ಅರ್ಥ್ ಅಂಡ್ ಓಶಿಯನ್ ಸೈನ್ಸಸ್ , ಲಂಡನ್‌ನ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ಮತ್ತು ಯೂನಿವರ್ಸಿಟಿ ಆಫ್ ಬಾರ್ಸಿಲೋನಾದ ಸಂಶೋಧಕರ ತಂಡ ನಡೆಸಿದ ಅಧ್ಯಯನದ ಪ್ರಕಾರ ಸಂಸ್ಕೃತಿಯಲ್ಲಿ ಮಹತ್ತರ ಬದಲಾವಣೆಯಾಗುವುದಕ್ಕೆ ಕಾರಣವಾದದ್ದು ಹವಾಮಾನದಲ್ಲಾದ ಹಠಾತ್ ವೈಪರೀತ್ಯ .

ಚರ್ಮಕೋಶದಿಂದ ಕಾಂಡಕೋಶ

Image
ದೇಹದ ಯಾವುದೇ ಭಾಗದ ಜೀವಕೋಶಗಳು ಅಭಿವೃದ್ಧಿಯಾಗುವುದು ಭ್ರೂಣದಲ್ಲಿರುವ ಶಿಶು ಹೊಂದಿರುವ ಕಾಂಡಕೋಶದಿಂದ . ಮಗು ಜನಿಸಿದ ತಕ್ಷಣ ಹೊಕ್ಕುಳಬಳ್ಳಿಯಿಂದ ಕಾಂಡಕೋಶವನ್ನು ತೆಗೆದು ಸಂಸ್ಕರಿಸಿಟ್ಟು , ಭವಿಷ್ಯದಲ್ಲಿ ದೇಹದ ಯಾವುದಾದರೂ ಭಾಗದ ಜೀವಕೋಶಗಳನ್ನು ಅಭಿವೃದ್ಧಿಪಡಿಸುವ ತಂತ್ರಜ್ಞಾನವನ್ನು ಈಗಾಗಲೇ ವೈಜ್ಞಾನಿಕ ಜಗತ್ತು ಅಭಿವೃದ್ಧಿಪಡಿಸಿದೆ . ಕಾಂಡಕೋಶದ ಮಹತ್ವವನ್ನು ಅರ್ಥ ಮಾಡಿಕೊಂಡಿರುವ ವಿಜ್ಞಾನಿಗಳು ಪ್ರಬುದ್ಧ ಮಾನವನ ದೇಹದಲ್ಲಿರುವ ಜೀವಕೋಶಗಳಿಂದ ಕಾಂಡಕೋಶವನ್ನು ಅಭಿವೃದ್ಧಿಪಡಿಸುವ ಪ್ರಯತ್ನವನ್ನು ಬಹಳ ವರ್ಷಗಳಿಂದ ಮಾಡುತ್ತಲೇ ಬಂದಿದ್ದರು . ಆ ಪ್ರಯತ್ನ ಈಗ ಸಾಕಾರಗೊಂಡಿದೆ . ಚರ್ಮದ ಕೋಶಗಳಿಂದ ಕಾಂಡಕೋಶ ಅಭಿವೃದ್ಧಿಪಡಿಸುವಲ್ಲಿ ಅಮೆರಿಕದ ಓರೆಗಾನ್ ಹೆಲ್ತ್ ಅಂಡ್ ಸೈನ್ಸ್ ಯೂನಿವರ್ಸಿಟಿ ಮತ್ತು ಓರೆಗಾನ್ ನ್ಯಾಷನಲ್ ಪ್ರೈಮೇಟ್ ರಿಸರ್ಚ್ ಸೆಂಟರ್‌ನ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ . ದೇಹದ ಯಾವುದೇ ಭಾಗ ಊನಗೊಂಡರೂ ಕಾಂಡಕೋಶ ಚಿಕಿತ್ಸೆಯ ಮೂಲಕ ಅದನ್ನು ಸರಿಪಡಿಸಬಹುದು . ಹೀಗಾಗಿ ಪ್ರಸ್ತುತ ನಡೆದಿರುವ ಸಂಶೋಧನೆ ವೈದ್ಯಕೀಯ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ಎಂದೇ ಹೇಳಬೇಕು .

ನಕ್ಷತ್ರ ಕಳೇಬರದಲ್ಲಿ ಗ್ರಹಕಸ!

Image
ಸೃಷ್ಟಿ , ಸ್ಥಿತಿ , ಲಯಗಳು ಜೀವಿಗಳ ಪಾಲಿಗೆ ಹೇಗೆ ಸಹಜ ಕ್ರಿಯೆಯೋ ಅದೇ ರೀತಿ ನಕ್ಷತ್ರಗಳ ಬದುಕಿನಲ್ಲೂ ಇವು ಸಾಮಾನ್ಯ ಸಂಗತಿಗಳು . ಒಂದು ನಕ್ಷತ್ರ ಹುಟ್ಟಿದ ಆರಂಭದಿಂದ ಮಹಾಸ್ಫೋಟವೆಂಬ ಕೊನೆಯ ಉಸಿರಿನವರೆಗೆ ನಕ್ಷತ್ರಜೀವನದಲ್ಲಿ ಎಂತೆಂಥ ಘಟನೆಗಳು ಸಂಭವಿಸುತ್ತವೆ ಎಂಬುದನ್ನು ವೈಜ್ಞಾನಿಕ ವಲಯ ಈಗಾಗಲೇ ಅರ್ಥ ಮಾಡಿಕೊಂಡಿದೆ . ಆದರೆ ನಕ್ಷತ್ರವೊಂದು ಮಹಾಸ್ಫೋಟಕ್ಕೆ ಒಳಗಾಗಿ ಕಪ್ಪುರಂಧ್ರವಾಗಿ ಮಾರ್ಪಟ್ಟ ಬಳಿಕ ಏನಾಗುತ್ತದೆ ? ಒಂದು ನಕ್ಷತ್ರ ಸಂಪೂರ್ಣ ಸತ್ತುಹೋದಾಗ ಏನಾಗುತ್ತದೆ ? ನಕ್ಷತ್ರಗಳ ಸಾವು ಎಂದರೇನು ? ಎಂಬೆಲ್ಲ ಪ್ರಶ್ನೆಗಳನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನವನ್ನು ವೈಜ್ಞಾನಿಕ ಜಗತ್ತು ನಿರಂತರವಾಗಿ ನಡೆಸುತ್ತಲೇ ಬಂದಿದೆ . ಅಚ್ಚರಿ ಎಂದರೆ , ಒಂದು ನಕ್ಷತ್ರ ಮಹಾಸ್ಫೋಟದೊಂದಿಗೆ ಕಪ್ಪುರಂಧ್ರವಾಗಿ ಬದಲಾಗುತ್ತದೆ . ಅಲ್ಲಿಗೆ , ಆ ನಕ್ಷತ್ರದಿಂದ ಬರುವ ಬೆಳಕು ಸ್ಥಗಿತಗೊಳ್ಳುತ್ತದೆ . ಇದು ನಕ್ಷತ್ರ ಸಂಪೂರ್ಣಸಾವಿನ ಸ್ಥಿತಿ ಎನ್ನಬಹುದು . ಆದರೆ ಈ ಹಂತಕ್ಕೂ ಒಂದೆರಡು ಹಂತ ಮೊದಲೇ ನಕ್ಷತ್ರ ವಿಚಿತ್ರಮರಣವನ್ನಪ್ಪುತ್ತದೆ . ಅದುವೇ ಶ್ವೇತಕುಬ್ಜ ಸ್ಥಿತಿ . ಕೆಂಪುದೈತ್ಯವಾಗಿ ಬೆಳೆದ ನಕ್ಷತ್ರವೊಂದು ತನ್ನ ಹೊರಕವಚವನ್ನು ಕಳಚಿಕೊಂಡು , ಗಾತ್ರದಲ್ಲಿ ಸಣ್ಣದಾಗಿ , ರಾಶಿಯಲ್ಲಿ ಭಾರವಾಗುವ ಸ್ಥಿತಿಯೇ ಶ್ವೇತಕುಬ್ಜಾವಸ್ಥೆ . ಇದು ಒಂದು ರೀತಿಯಲ್ಲಿ ನಕ್ಷತ್ರದ ಸಾವೇ ಸರಿ !

ಹೂಗಳಿಗೆ ಆಕಾರ ಕೊಡುವವರಾರು?

Image
ಗುಲಾಬಿ ಹೂವಿನ ದಳಗಳು ಚೂಪಾಗಿರುತ್ತವೆ , ಸಂಪಿಗೆಯ ದಳಗಳೂ ಕತ್ತಿಯ ಅಲಗಿನಂತಿರುತ್ತವೆ , ದಾಸವಾಳದ ದಳಗಳದ್ದು ದುಂಡನೆಯ ಆಕಾರ .... ಇದೆಲ್ಲ ನಿಜ , ಆದರೆ ಇವುಗಳಿಗೆ ಇಂಥದ್ದೇ ಆಕಾರಗಳು ಬಂದದ್ದಾದರೂ ಹೇಗೆ ? ಆಕಾರ ಕೊಟ್ಟವರು ಯಾರು ? ಮೇಲ್ನೋಟಕ್ಕೆ ಅತ್ಯಂತ ಸರಳ , ಕ್ಷುಲ್ಲಕ ವಿಚಾರ ಎನಿಸಿದರೂ ವೈಜ್ಞಾನಿಕ ಕ್ಷೇತ್ರದಲ್ಲಿ ಮಹತ್ವದ ಸಂಶೋಧನೆಯೊಂದಕ್ಕೆ ಇದು ಕಾರಣೀಭೂತವಾಗಿದೆ . ಮೊಗ್ಗು ಬೆಳೆಯುವ ಹಂತದಲ್ಲೇ ಅದರಳೊಗೆ ವಿಶೇಷ ಬಯೋಲಾಜಿಕಲ್ ಮ್ಯಾಪ್ ( ಜೈವಿಕ ನಕಾಶೆ ) ಇರುತ್ತದಂತೆ . ಈ ಕಾರಣದಿಂದಾಗಿ ಹೂವಿನ ದಳಗಳಿಗೆ ನಿಗದಿತ ಆಕಾರ ಬರುತ್ತದೆ . ಬ್ರಿಟನ್‌ನ ಜಾನ್ ಇನ್ನೆಸ್ ಸೆಂಟರ್ ಮತ್ತು ಯೂನಿವರ್ಸಿಟಿ ಆಫ್ ಈಸ್ಟ್ ಏಂಜಲಿಯಾದ ವಿಜ್ಞಾನಿಗಳು ಈ ಸಂಶೋಧನೆ ನಡೆಸಿದ್ದು , ಹೂವಿನ ದಳಗಳು ಮಾತ್ರವಲ್ಲದೆ , ಎಲೆಗಳು ಕೂಡಾ ನಿಗದಿಜ ಜೈವಿಕ ನಕಾಶೆಯಿಂದಲೇ ನಿಯಂತ್ರಿಸಲ್ಪಡುತ್ತವೆ ಎಂಬುದನ್ನು ಕಂಡುಕೊಂಡಿದ್ದಾರೆ .

ಬುವಿಯೊಳಗೆ ಜೀವಸೃಷ್ಟಿ ಎಲ್ಲಾಯ್ತು?

Image
ಭೂಮಿಯಲ್ಲಿ ಜೀವಜಗತ್ತು ಸೃಷ್ಟಿಯಾಗಿ , ಬೆಳೆಯುತ್ತಿದೆ ಎಂಬುದು ಗೊತ್ತು . ಯಾವುದೇ ಒಂದು ಕಾಲದಲ್ಲಿ ಇಲ್ಲಿ ಸೃಷ್ಟಿ ಕಾರ್ಯ ಶುರುವಾಗಿದೆ ಎಂಬುದೂ ಗೊತ್ತು . ಆದರೆ ಸೃಷ್ಟಿಕಾರ್ಯ ಶುರುವಾದದ್ದು ಎಲ್ಲಿ ? ಹೇಗೆ ಶುರುವಾಯ್ತು ? ಎಲ್ಲಾ ಜೀವಿಗಳೂ ಒಟ್ಟಿಗೇ ಸೃಷ್ಟಿಯಾದವೇ ? ಅಥವಾ ವಿಕಾಸದ ಪಥದಲ್ಲಿ ಒಂದು ಜೀವಿ ಇನ್ನೊಂದಾಗಿ ರೂಪಾಂತರಗೊಂಡಿತೇ ? ವೈಜ್ಞಾನಿಕ ಜಗತ್ತಿನಲ್ಲಿ ಇವುಗಳು ಮಿಲಿಯನ್ ಡಾಲರ್ ಪ್ರಶ್ನೆಗಳು . ಸೃಷ್ಟಿಯ ಬಗ್ಗೆ ಒಬ್ಬೊಬ್ಬರದು ಒಂದೊಂದು ವಾದ ; ಸೃಷ್ಟಿ ರಹಸ್ಯವನ್ನು ಪರಿಪೂರ್ಣವಾಗಿ ತೆರೆದಿಡುವುದಕ್ಕೆ ಯಾವ ವಾದಕ್ಕೂ ಸಾಧ್ಯವಾಗಿಲ್ಲ . ಅಪಾರವಾದ ಜಲರಾಶಿಯಲ್ಲಿ ಅರ್ಥಾತ ಅತಿಯಾದ ತಾಪಮಾನದಿಂದ ಕೂಡಿದ್ದ ಸಮುದ್ರತಟದಲ್ಲಿ ಜೀವಕುಡಿ ಸೃಷ್ಟಿಯಾಯಿತು ಎಂದು ಇದುವರೆಗಿನ ವೈಜ್ಞಾನಿಕ ಸಿದ್ಧಾಂತಗಳು ಪ್ರತಿಪಾದಿಸುತ್ತಾ ಬಂದಿದ್ದವು . ಆದರೆ ಈಗ ಇದು ಸರಿಯಾದ ವಾದವಲ್ಲ , ಸಾಗರದ ತಟದಲ್ಲಿ ಜೀವಜಗತ್ತಿನ ಉದಯವಾಗಿಲ್ಲ . ಬದಲಾಗಿ ಹಿಮಾವೃತಗೊಂಡಿರುವ ಧ್ರುವಪ್ರದೇಶಗಳಲ್ಲಿ ಜೀವಿಗಳು ಸೃಷ್ಟಿಯಾದವು ಎಂದು ಹೊಸ ಸಂಶೋಧನೆಯೊಂದು ಹೇಳಿದೆ . ಭೂಮಿಯ ಧ್ರುವಪ್ರದೇಶಗಳಲ್ಲಿ ಸಾಗರಮುಖಿಯಾಗಿ ಬೆಳೆದಿರುವ ಸಮುದ್ರ ನೀರ್ಗೋಲುಗಳು ( ಸೀ ಸ್ಟಾಲಕ್ಟೈಟ್ಸ್ ) ಅಥವಾ ಮಂಜಿನ ಕೊಳವೆಗಳಿರುವ ಪ್ರದೇಶದಲ್ಲಿ ಜೀವಜಗತ್ತು ಸೃಷ್ಟಿಯಾಯಿತು . ಉದ್ದಕ್ಕೆ ಮಂಜಿನರಾಶಿಯ ಅಡಿಯಲ್ಲಿ ನೂರಾರು ಯಾರ್ಡ್‌ಗಳಷ್ಟು ಉದ್ದಕ್ಕೆ ಬೆಳೆಯಬಲ್ಲ ನೀರ್ಗೋಲುಗಳನ್ನು...

ಏರುತಿದೆ ಸಾಗರದ ಮಟ್ಟ...

Image
ಅದ್ಯಾಕೋ ಜಗತ್ತು ಅಭಿವೃದ್ಧಿ , ಅಭಿವೃದ್ಧಿ ಎಂದು ಒಂದೇ ಮಂತ್ರ ಜಪಿಸುತ್ತಿದೆ . ಆದರೆ ಈ ಅಭಿವೃದ್ಧಿಯ ಜತೆಯಲ್ಲೇ ಇರಬೇಕಾದ ಪರಿಸರ ಸಂರಕ್ಷಣೆಯ ಮಂತ್ರವನ್ನು ಯಾರೂ ಜಪಿಸುತ್ತಿಲ್ಲ . ಅಂದರೆ ಅಭಿವೃದ್ಧಿ ಎಂಬುದನ್ನು ನಾವು ಸರಿಯಾಗಿ ಅರ್ಥೈಸಿಕೊಂಡಿಲ್ಲ ಎಂಬುದು ದಿಟ . ಚೆಂದ ಚೆಂದದ ಮುಗಿಲೆತ್ತರದ ಕಟ್ಟಡಗಳು , ಕಾರ್ಖಾನೆಗಳು , ನುಣುಪಾದ ರಸ್ತೆಗಳು , ಎಸಿ ಕೋಣೆಗಳು ... ಇವೆಲ್ಲ ನಮ್ಮ ದೃಷ್ಟಿಕೋನದಲ್ಲಿ ಅಭಿವೃದ್ಧಿ ಕಾರ್ಯಗಳು . ಆದರೆ ಇವೆಲ್ಲ ಸಾಧ್ಯವಾಗಬೇಕಾದರೆ ಪ್ರಕೃತಿಯ ಮೇಲೆ ನಾವೆಂಥ ಪ್ರಹಾರ ಮಾಡುತ್ತಿದ್ದೇವೆ ; ಇದರಿಂದಾಗಿ ನಮ್ಮ ಮುಂದಿನ ಪೀಳಿಗೆ ಎಂಥ ಆಪತ್ತಿನಲ್ಲಿ ಸಿಲುಕಿಕೊಳ್ಳಬೇಕಾದೀತು ಎಂಬುದನ್ನು ಯೋಚಿಸುವ ಗೊಡವೆಗೇ ಹೋಗುವುದಿಲ್ಲ ! ಹೌದು , ವೈಜ್ಞಾನಿಕ ವಲಯದಲ್ಲಿ ಎಚ್ಚರಿಕೆಯ ಗಂಟೆಯೊಂದು ಮೊಳಗಿದೆ . ಮಾನವನಿಂದಾಗಿ ಆಗುತ್ತಿರುವ ಪರಿಸರ ಮಾಲಿನ್ಯವನ್ನು ನಿಯಂತ್ರಿಸದೇ ಇದ್ದಲ್ಲಿ ಮುಂದೊಂದು ದಿನ ಸಮುದ್ರದ ಮಟ್ಟ ಹೆಚ್ಚಿ , ಬಹುಪಾಲು ಭೂಮಿ ಸಾಗರ ಪಾಲಾಗುತ್ತದೆ . ಆಗ ಮಾನವ ಸಂಕುಲ ಉಳಿದುಕೊಳ್ಳಲು ಜಾಗಕ್ಕಾಗಿ ಪರದಾಡಬೇಕಾಗುತ್ತದೆ !

ಸಾವಿನ ನಂತರ ಮುಂದೇನು?

Image
ಹುಟ್ಟಿದ ಜೀವಿ ಸಾಯಲೇಬೇಕು . ಸತ್ತ ನಂತರ ? ಪುನರ್ಜನ್ಮ ಎಂಬುದು ಬಹುತೇಕರು ಕೊಡುವ ಉತ್ತರ . ಪುನರ್ಜನ್ಮದ ಮೇಲೆ ನಂಬಿಕೆ ಇದೆಯೋ , ಇಲ್ಲವೋ ಅನ್ನೋದು ಪ್ರಶ್ನೆ ಅಲ್ಲ , ಮುಂದಿನ ಜನ್ಮದಲ್ಲಿ ಚೆನ್ನಾಗಿರೋಣ ಎಂಬ ಭಾವನೆ ಬಹಳಷ್ಟು ಮನಸುಗಳಲ್ಲಿ ಸುಳಿದಾಡುವುದು ಖಂಡಿತ . ವೈಜ್ಞಾನಿಕ ಜಗತ್ತು ನಿನ್ನೆ , ಮೊನ್ನೆಯವರೆಗೂ ಸಾವೇ ಕೊನೆ ; ಅಲ್ಲಿಂದ ಆಚೆಗೆ ಏನೂ ಇಲ್ಲ ಎಂದು ಹೇಳುತ್ತಿತ್ತು . ಇದೀಗ ಪ್ರಕಟವಾಗಿರುವ ಹೊಸ ಸಿದ್ಧಾಂತ ಹಳೆಯ ಸಿದ್ಧಾಂತವನ್ನು ಬುಡಮೇಲು ಮಾಡಿದ್ದು , ಸಾವು ಕೊನೆಯಲ್ಲ , ಕೊನೆಯೆಂಬುದೇ ಇಲ್ಲ , ಸಾವು ರೂಪಾಂತರದ ಒಂದು ಪ್ರಕ್ರಿಯೆ ಎಂದು ಪ್ರತಿಪಾದಿಸಿದೆ , ಏನಿದು ಸಿದ್ಧಾಂತ ?: ಸೈನ್ಸ್ ಜರ್ನಲ್‌ನಲ್ಲಿ ಪ್ರಕಟವಾಗಿರುವ ಈ ಸಿದ್ಧಾಂತದ ಹೆಸರು ಬಯೋಸೆಂಟ್ರಿಸಮ್ . ಕ್ವಾಂಟಮ್ ಫಿಸಿಕ್ಸ್‌ನಲ್ಲೊಂದು ಸಿದ್ಧಾಂತವಿದೆ ; ಶಕ್ತಿಯನ್ನು ಸೃಷ್ಟಿಸುವುದಕ್ಕೂ , ನಾಶಪಡಿಸುವುದಕ್ಕೂ ಸಾಧ್ಯವಿಲ್ಲ . ಒಂದು ಸ್ಥಿತಿಯಿಂದ ಇನ್ನೊಂದು ಸ್ಥಿತಿಗೆ ಅದನ್ನು ರೂಪಾಂತರಿಸಬಹುದಷ್ಟೇ ! ಇದೇ ಸಿದ್ಧಾಂತದ ಆಧಾರದಲ್ಲಿ ಜೀವಿಗಳ ಹುಟ್ಟು , ಸಾವಿನ ಬಗ್ಗೆ ಚಿಂತನಾತ್ಮಕ ಸಂಶೋಧನೆ ನಡೆಸಿದ ವಿಜ್ಞಾನಿ ಡಾ . ರಾಬರ್ಟ್ ಲಾಂಜಾ ಪ್ರತಿಯೊಂದು ಜೀವಿಯ ದೇಹವೂ ನಶ್ವರ , ಜೀವಿಗಳ ಎಲ್ಲ ಕ್ರಿಯೆಗಳೂ ನಡೆಯುವುದು ಅವುಗಳ ಒಳಗಿರುವ ಶಕ್ತಿ ಅಥವಾ ಆತ್ಮಚೈತನ್ಯದ ಪ್ರಭಾವದಿಂದಾಗಿ ಎಂಬುದನ್ನು ಕಂಡುಕೊಂಡಿದ್ದಾರೆ .