ವೈಜ್ಞಾನಿಕ ಜಗತ್ತಿನಲ್ಲಿ ಸಣ್ಣ ಸಣ್ಣ ವಿಚಾರಕ್ಕೂ ಭಾರೀ ಕುತೂಹಲ , ಅದೊಂಥರಾ ಸೂಕ್ಷ್ಮ , ಅದೊಂದು ರೀತಿಯ ಗಾಂಭೀರ್ಯ , ಸ್ವಲ್ಪ ಅಚ್ಚರಿ , ಹೊಸ ಹೊಸ ಅನ್ವೇಷಣೆಗಳಿಗೆ ತುಡಿತ . ವಿಜ್ಞಾನವೇ ಹಾಗೆ , ಕ್ಷಣ ಕ್ಷಣಕ್ಕೂ ಬದಲಾಗುತ್ತಿರುತ್ತದೆ , ಒಂದು ಕ್ಷಣ ಹೊಸದೆನೆಸಿದ್ದು ಮರುಕ್ಷಣದಲ್ಲಿ ಹಳತಾಗುತ್ತದೆ , ಮತ್ತೊಂದು ಹೊಸ ವಿಚಾರ ಕಾಣಿಸಿಕೊಂಡಿರುತ್ತದೆ . ವೈಜ್ಞಾನಿಕ ವಲಯದಲ್ಲಿ ಅತಿ ಹೆಚ್ಚು ಕುತೂಹಲ ಮೂಡಿರುವಂಥದ್ದು ಭೂಮಿಯಲ್ಲಿ ಜೀವಸೃಷ್ಟಿ ಹೇಗಾಯ್ತು ಎಂಬ ವಿಚಾರದ ಸುತ್ತ . ಭೂಮಿಯಲ್ಲಿನ ಜೀವಸೃಷ್ಟಿ , ಜೀವಾಸ್ತಿತ್ವ ಮತ್ತು ಜೀವ ವಿಕಾಸದ ಬಗ್ಗೆ ಒಬ್ಬೊಬ್ಬ ವಿಜ್ಞಾನಿ ಮಂಡಿಸಿದ ಒಂದೊಂದು ಸಿದ್ಧಾಂತಗಳು ಒಂದೊಂದು ವಿಚಾರವನ್ನು ಪ್ರತಿಪಾದಿಸುತ್ತವೆ . ಅವುಗಳದ್ದೇ ಆದ ನೆಲೆಯಲ್ಲಿ ಯೋಚಿಸಿದರೆ ಆ ಎಲ್ಲ ಸಿದ್ಧಾಂತಗಳೂ ಸರಿ ಎಂದೆನಿಸುತ್ತವೆ . ಅವುಗಳ ವಿರುದ್ಧವಾಗಿ ಯೋಚಿಸದರೆ ಆ ಯೋಚನೆಯೂ ಸರಿಯಾಗಿಯೇ ಭಾಸವಾಗುತ್ತದೆ . ಯಾಕೆಂದರೆ ಜೀವಸೃಷ್ಟಿ ಹೀಗೇ ಆಯ್ತು ಎಂದು ಹೇಳುವುದಕ್ಕೆ ನಮ್ಮಲ್ಲಿ ಯಾವ ಆಧಾರವೂ ಇಲ್ಲ . ಇದೀಗ ಹೊಸದೊಂದು ಸಿದ್ಧಾಂತ ಮಂಡನೆಯಾಗಿದ್ದು , ಅದರ ಪ್ರಕಾರ ಭೂಮಿಯಲ್ಲಿ ಜೀವಸೃಷ್ಟಿಗೆ ಕಾರಣವಾದ ಒಂದು ಅಂಶ ಬಂದದ್ದು ಉಲ್ಕೆಗಳಿಂದ . ಅದು ಗಂಧಕದ ಅಂಶ .