ಸೃಷ್ಟಿ ರಹಸ್ಯದ ಬೆನ್ನು ಹತ್ತಿ...

ಒಂದು ವಸ್ತುವನ್ನು ಅಥವಾ ಶಕ್ತಿಯನ್ನು ಸೃಷ್ಟಿಸುವುದಕ್ಕೂ ಸಾಧ್ಯವಿಲ್ಲ ಮತ್ತು ನಾಶ ಮಾಡುವುದಕ್ಕೂ ಸಾಧ್ಯವಿಲ್ಲ. ಕೇವಲ ರೂಪಾಂತರಗೊಳಿಸಬಹುದು. ಇದು ಭೌತಶಾಸ್ತ್ರದ ಮೂಲತತ್ತ್ವ. ವೇದ, ಉಪನಿಷತ್ತುಗಳ ಮೂಲತತ್ತ್ವವೂ ಇದೇ. ಇಲ್ಲಿ ವ್ಯಾಖ್ಯಾನ ಮಾತ್ರ ಸ್ವಲ್ಪ ಭಿನ್ನವಾಗುತ್ತದೆ. ಪರಮಾತ್ಮ ಅಥವಾ ಈ ಜಗತ್ತಿನ ಸೃಷ್ಟಿಕರ್ತನನ್ನು ಸೃಷ್ಟಿಸುವುದಕ್ಕೂ, ನಾಶಪಡಿಸುವುದಕ್ಕೂ ಸಾಧ್ಯವಿಲ್ಲ ಎಂಬುದಾಗಿ ವೇದಗಳ ಮೂಲತತ್ತ್ವವನ್ನು ವ್ಯಾಖ್ಯಾನಿಸಬಹುದು. ಸೃಷ್ಟಿ ಮೂಲವನ್ನು ಹುಡುಕಬೇಕು ಎಂದಾದರೂ ನಾವು ಅಣುಗಳನ್ನು, ಪರಮಾಣುಗಳನ್ನು ವಿಭಜಿಸುತ್ತಾ ಹೋಗುವುದಲ್ಲ. ಅವುಗಳನ್ನು ಒಟ್ಟುಮಾಡುತ್ತಾ ಏಕವಾಗಿಸುತ್ತಾ ಹೋಗಬೇಕು. ಸರ್ವವನ್ನೂ ಒಂದಾಗಿಸಿ ನೋಡಬೇಕು. ಅದುವೇ ಸೃಷ್ಟಿ ಮೂಲ. 

ಸೃಷ್ಟಿ ಹೇಗಾಗಿರಬಹುದು? ಇಷ್ಟು ದೊಡ್ಡ ಪ್ರಪಂಚವನ್ನು ನಾವು ಕಾಣುತ್ತಿದ್ದೇವೆ. ಇದು ಹುಟ್ಟಿದ ರೀತಿಯ ಬಗ್ಗೆ ಕೌತುಕಪಡುತ್ತೇವೆ. ತಾಯಿಯ ಗರ್ಭದಲ್ಲಿ ಬೆಳೆದ ಮಗುವೊಂದು ಮೆಲ್ಲಗೆ ಜಾರಿ ಭೂಮಿಗೆ ಬಂದಂತೆಯೇ ಪ್ರಪಂಚದ ಸೃಷ್ಟಿಯಾಯಿತೇ?
ಸೃಷ್ಟಿಯನ್ನು ಅರಿಯಬೇಕೆಂದು ಋಷಿಮುನಿಗಳು ತಪಸ್ಸು ಮಾಡಿದರಂತೆ. ನಾವೂ ಪದ್ಮಾಸನ ಹಾಕಿ ಕಣ್ಣುಮುಚ್ಚಿ ಕುಳಿತು ಧ್ಯಾನಸ್ಥರಾದರೆ ಸೃಷ್ಟಿ ರಹಸ್ಯ ಗೊತ್ತಾಗಿಬಿಡುತ್ತದೆಯೇ? ವಿಜ್ಞಾನಿಗಳು ಲಾರ್ಜ್ ಹ್ಯಾಡ್ರಾನ್ ಕೊಲೈಡರ್ ನಿರ್ಮಿಸಿ ಅಲ್ಲಿ ಅಣುಗಳನ್ನು ಪರಮಾಣುಗಳನ್ನಾಗಿ, ಅವುಗಳನ್ನು ಇನ್ನೀ ಚಿಕ್ಕ, ಮತ್ತೂ ಚಿಕ್ಕ ಕಣಗಳನ್ನಾಗಿ ವಿಭಜಿಸಿ ಆ ಮೂಲಕ ಸೃಷ್ಟಿಯ ಮೂಲವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅದೆಷ್ಟು ಚಿಕ್ಕ ಕಣದಿಂದ ಈ ವಿಶ್ವ ಸೃಷ್ಟಿಯಾಗಿರಬಹುದು? ಎಂಬ ಚಿಂತನೆಯಲ್ಲಿ ಅವರಿದ್ದಾರೆ. ಸೂಕ್ಷ್ಮದತ್ತ ಚಲಿಸುತ್ತಾ ಹೋದರೆ ಸೃಷ್ಟಿಯ ಮೂಲಕ್ಕೆ ತಲುಪುವುದಕ್ಕೆ ಸಾಧ್ಯವಿದೆ ಎಂದು ಅನ್ನಿಸುವುದಿಲ್ಲ ಎಂಬ ಭಾವನೆ ಬಹುತೇಕ ಜನರ ಮನಸ್ಸಿನಲ್ಲಿ ಮೊಳಕೆಯೊಡೆದಿರಬಹುದು. ವಿಜ್ಞಾನಿಗಳಿಗೆ ಸೃಷ್ಟಿ ಮೂಲ ಸಿಕ್ಕೇ ಸಿಗುತ್ತೆ, ಏನನ್ನೇ ಕಂಡುಹಿಡಿಯಬೇಕಾದರೂ ವೈಜ್ಞಾನಿಗಕ ಪ್ರಯತ್ನ ಬೇಕು ಎಂಬ ಭಾವವನ್ನು ಇನ್ನೆಷ್ಟೇ ಜನ ತಮ್ಮ ಮನಸ್ಸಿಗೆ ಆವಾಹಿಸಿಕೊಂಡಿರಬಹುದು. ನಾವು ಮಾಡುವ ಪ್ರಯತ್ನ ವೈಜ್ಞಾನಿಕವಾಗಿಯೇ ಇರಬೇಕು ನಿಜ. ಅಲ್ಲಿಗೆ ವೈಜ್ಞಾನಿಕ ಎಂದರೇನೆಂಬ ಪ್ರಶ್ನೆಯ ಉತ್ಪತ್ತಿಯಾಗುತ್ತದೆ. ವೇದ ಕಾಲದಲ್ಲಿ ನಡೆದ ಪ್ರಯತ್ನಗಳು ವೈಜ್ಞಾನಿಕವಾಗಿರಲಿಲ್ಲವೇ ಎಂಬ ಪ್ರಶ್ನೆಯೂ ಕಾಡಬಹುದು.
ಸೃಷ್ಟಿಯನ್ನು ಸುಲಭವಾಗಿ ಅರ್ಥೈಸಿಕೊಳ್ಳುವ ಪ್ರಯತ್ನವನ್ನು ಹಲವು ದಿಶೆಗಳಿಂದ ಮಾಡಬಹುದು. ಈಗಿನ ವಿಜ್ಞಾನದ ಆಧಾರವನ್ನಿಟ್ಟುಕೊಂಡೇ ಸೃಷ್ಟಿಯ ಮೂಲವನ್ನು ಕೆದಕಬಹುದು. ಒಂದು ವಸ್ತುವನ್ನು ಅಥವಾ ಶಕ್ತಿಯನ್ನು ಸೃಷ್ಟಿಸುವುದಕ್ಕೂ ಸಾಧ್ಯವಿಲ್ಲ ಮತ್ತು ನಾಶ ಮಾಡುವುದಕ್ಕೂ ಸಾಧ್ಯವಿಲ್ಲ. ಕೇವಲ ರೂಪಾಂತರಗೊಳಿಸಬಹುದು. ಇದು ಭೌತಶಾಸ್ತ್ರದ ಮೂಲತತ್ತ್ವ. ಜಗತ್ತಿನೆಲ್ಲಡೆಯ ವಿಜ್ಞಾನಿಗಳ ವಲಯದಲ್ಲಿ ಸೃಷ್ಟಿಯ ಬಗ್ಗೆ, ಪ್ರಸ್ತುತ ಜಗತ್ತಿನ ಮೂಲದ ಬಗ್ಗೆ ಪ್ರಶ್ನೆಗಳು ಎದ್ದಿರುವಾಗ ಮತ್ತು ಆ ಮೂಲದ ಹುಡುಕಾಟಕ್ಕೆ ಪ್ರಯತ್ನಗಳು ನಡೆದಿರುವಾಗ ಭೌತಶಾಸ್ತ್ರದ ಈ ಮೂಲತತ್ತ್ವವನ್ನು ನೆನಪಿಸಿಕೊಳ್ಳಲೇಬೇಕಾಗುತ್ತದೆ. ನಮ್ಮ ವೇದ, ಉಪನಿಷತ್ತುಗಳ ಮೂಲತತ್ತ್ವವೂ ಇದೇ. ಇಲ್ಲಿ ವ್ಯಾಖ್ಯಾನ ಮಾತ್ರ ಸ್ವಲ್ಪ ಭಿನ್ನವಾಗುತ್ತದೆ. ಪರಮಾತ್ಮ ಅಥವಾ ಈ ಜಗತ್ತಿನ ಸೃಷ್ಟಿಕರ್ತನನ್ನು ಸೃಷ್ಟಿಸುವುದಕ್ಕೂ, ನಾಶಪಡಿಸುವುದಕ್ಕೂ ಸಾಧ್ಯವಿಲ್ಲ ಎಂಬುದಾಗಿ ವೇದಗಳ ಮೂಲತತ್ತ್ವವನ್ನು ವ್ಯಾಖ್ಯಾನಿಸಬಹುದು. ಇರಲಿ, ಯಾವುದಕ್ಕೂ ವೈಜ್ಞಾನಿಕ ವಲಯದಲ್ಲಿ ಸೃಷ್ಟಿಯ ಮೂಲವನ್ನು ಕಂಡುಕೊಳ್ಳುವುದಕ್ಕಾಗಿ ನಡೆಯುತ್ತಿರುವ ಪ್ರಯತ್ನಗಳನ್ನು ಮತ್ತು ವೇದಗಳಲ್ಲಿ, ಉಪನಿಷತ್ತುಗಳಲ್ಲಿ ವಿವರಿಸಲಾದ ಸೃಷ್ಟಿಯ ರಹಸ್ಯವನ್ನು ಒಂದು ತುಲನಾತ್ಮಕ ದೃಷ್ಟಿಯಿಂದ ಯಾಕೆ ನೋಡಬಾರದು?

ವಿಜ್ಞಾನದ ಪ್ರಯತ್ನಗಳು
ಸೃಷ್ಟಿ ಹೇಗಾಗಿರಬಹುದು ಎಂಬ ಬಗ್ಗೆ ವೈಜ್ಞಾನಿಕ ವಲಯ ಹಲವು ಶತಮಾನಗಳಿಂದಲೇ ತಲೆಕೆಡಿಸಿಕೊಂಡಿದೆ. ಅದನ್ನು ಅರಿತುಕೊಳ್ಳುವ ಪ್ರಯತ್ನವನ್ನೂ ನಡೆಸುತ್ತಿದೆ. ಲಾರ್ಜ್ ಹ್ಯಾಡ್ರಾನ್ ಕೊಲೈಡರ್ ಸ್ಥಾಪಿಸಿ ಆ ಮೂಲಕ ಸೃಷ್ಟಿಯ ಮೂಲವನ್ನು ಅರ್ಥಾತ್ ಈ ಜಗತ್ತಿನ ಮೂಲ ವಸ್ತುವನ್ನು ಹುಡುಕುವ ಅದನ್ನು ನೋಡುವ ಪ್ರಯತ್ನವನ್ನು ಮಾಡುತ್ತಿದೆ. ಸೃಷ್ಟಿಯ ಮೂಲದಲ್ಲಿ ಈ ಜಗತ್ತು ದ್ರವಸ್ವರೂಪದಲ್ಲಿ ಇದ್ದಿರಬಹುದು ಎಂಬ ಯೋಚನೆಯನ್ನೂ ಇದು ಮುಂದಿಡುತ್ತದೆ. ತಾರೆಗಳೆರಡು ಕೂಡುವುದನ್ನು ಈ ಜಗತ್ತು ನೋಡಿದೆ, ತಾರೆಯೊಂದು ಮಹಾಸ್ಫೋಟಕ್ಕೆ ಒಳಗಾಗಿ ಹಲವು ಸಹಸ್ರ ಚೂರುಗಳಾಗುವುದನ್ನೂ! ತಾರೆಗಳಿಂದ ಬರುವ ಪ್ರಕಾಶದ ಹಿಂದೆ ಏನಿರಬಹುದೆಂಬ ಕುತೂಹಲಕ್ಕೆ ಉತ್ತರವೆದೆ. ಆ ಉತ್ತರವಾದ ಹೈಡ್ರೋಜನ್ ಮತ್ತು ಹೀಲಿಯಂನ ಗರ್ಭ ತಾರೆಗಳಲ್ಲಿ ಎಲ್ಲಿಂದ ಬಂತು ಎಂಬ ಪ್ರಶ್ನೆ ಮತ್ತೆ ಮತ್ತೆ ಕಾಡುತ್ತಿದೆ.
ತಾರೆಯೊಂದು ಮಹಾಸ್ಫೋಟಕ್ಕೆ ಒಳಗಾಗುವುದೇ ಇನ್ನೊಂದು ತಾರೆಯ ಸೃಷ್ಟಿಗೆ ಕಾರಣವೇ? ಜಗತ್ತಿನ ಸೃಷ್ಟಿಗೆ ಇದುವೇ ಮೂಲವೇ?... ಎಂಬೆಲ್ಲ ಅನುಮಾನಗಳನ್ನು ವೈಜ್ಞಾನಿಕ ಜಗತ್ತು ತನ್ನೊಳಗೆ ಹುಳದಂತೆ ಬಿಟ್ಟುಕೊಂಡಿದೆ. ಕೃಷ್ಣಕುಹರಗಳನ್ನು (ಬ್ಲ್ಯಾಕ್ಹೋಲ್ಸ್) ಗುರುತಿಸುವಲ್ಲಿ ವೈಜ್ಞಾನಿಕ ಜಗತ್ತು ಯಶಸ್ವಿಯಾಗಿದೆ. ಈ ಕೃಷ್ಣಕುಹರಗಳ ಆಕರ್ಷಣೆಗೆ ಸಿಕ್ಕ ಎಲ್ಲವೂ ಅದರ ಗರ್ಭ ಸೇರುತ್ತವೆ ಎಂಬ ವಿಚಾರವನ್ನು ಬಹಳ ಹಿಂದೆಯೇ ವೈಜ್ಞಾನಿಕ ಲೋಕ ಅರಿತುಕೊಂಡಿದೆ. ಈ ಕೃಷ್ಣಕುಹರಗಳೇ ಸೃಷ್ಟಿ ಮೂಲಗಳೋ ಎಂಬ ಅನುಮಾನವೂ ಇದೆಯಾದರೂ ಅದನ್ನು ನಿರೂಪಿಸಲು ಆಧಾರಗಳಿಲ್ಲದೆ ತಡಕಾಡುತ್ತಿದೆ. ಕೃಷ್ಣಕುಹರಗಳಲ್ಲಿ ಎಂತಹ ಪರಿಸ್ಥಿತಿ ಇದೆ ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆಯಾದರೂ ಈ ಕೃಷ್ಣಕುಹರಗಳು ತಮ್ಮ ಒಳಗುಟ್ಟನ್ನು ಸಂಪೂರ್ಣವಾಗಿ ಬಿಟ್ಟುಕೊಟ್ಟಿಲ್ಲ ಎಂದೇ ಹೇಳಬೇಕು.
ಸಮಯದ ಲೆಕ್ಕಾಚಾರವನ್ನು ಹಿಡಿದುಕೊಂಡು ಸೃಷ್ಟಿಯ ಮೂಲವನ್ನು ಕೆದಕುವ ಪ್ರಯತ್ನಗಳೂ ನಡೆದಿವೆ. ಮಹಾಸ್ಫೋಟದ ತದ್ರೂಪನ್ನು ಸೃಷ್ಟಿಸುವ ಮೂಲಕ ಸಮಯ ಚಲಿಸಿದ ಕಾಲವನ್ನು ಲೆಕ್ಕ ಹಾಕಿ ಆ ಮೂಲಕ ವಿಶ್ವದ ಸೃಷ್ಟಿ ಎಷ್ಟು ವರ್ಷಗಳ ಹಿಂದಾಯಿತು ಎಂಬುದನ್ನು ಗಣನೆ ಮಾಡಲು ಸಾಧ್ಯವಿಲ್ಲ ಎಂಬ ಮಾತುಗಳೂ ವೈಜ್ಞಾನಿಕ ವಲಯದಿಂದ ತೇಲಿಬಂದಿವೆ. ನಕ್ಷತ್ರಗಳ ಕಾಸ್ಮಿಕ್ ಶಕ್ತಿಯೇ ಹೊಸ ನಕ್ಷತ್ರಗಳ ಸೃಷ್ಟಿಗೆ ಕಾರಣ. ಹೊಸ ಜಗತ್ತಿನ ಸೃಷ್ಟಿಗೆ ಇದುವೇ ಯಾಕೆ ಕಾರಣವಿರಬಾರದು ಎಂಬ ಚಿಂತನೆಗಳು ಕೂಡ ನಡೆದಿವೆಯಾದರೂ ಈ ಯಾವ ಚಿಂತನೆಗಳು, ಪ್ರಯೋಗಗಳು ಫಲ ಕೊಟ್ಟಿಲ್ಲ. ಹೊಸ ಹೊಸ ರೀತಿಯ ವೈಜ್ಞಾನಿಕ ಪ್ರಯೋಗಗಳು ನಡೆಯುತ್ತಿದ್ದು ಸೃಷ್ಟಿಯ ಮೂಲವನ್ನು ಕೆದಕುವ ಪ್ರಯತ್ನ ನಡೆಯುತ್ತಿದೆ. ಯಾವುದೇ ಪ್ರಯೋಗವು ನಿರೀಕ್ಷಿತ ಫಲಿತಾಂಶಗಳನ್ನು ಕೊಡುತ್ತಿಲ್ಲ ಯಾಕೆ ಎಂಬ ಚಿಂತೆ ಮೂಡುವುದು ಸಹಜ. ಇದಕ್ಕೆ ವೇದ, ಉಪನಿಷತ್ತುಗಳನ್ನು ಆಧಾರವಾಗಿಟ್ಟುಕೊಂಡು ಉತ್ತರ ಹುಡಕಹೊರಟರೆ ಖಂಡಿತವಾಗಿಯೂ ಯಶಸ್ಸು ಸಿಗುತ್ತದೆ. ಸೃಷ್ಟಿಯ ಮೂಲವನ್ನು ಸುಲಭವಾಗಿಯೇ ಅರ್ಥ ಮಾಡಿಕೊಳ್ಳಬಹುದು. ಹಾಗಿದ್ದರೆ ವೇದ, ಉಪನಿಷತ್ತುಗಳಲ್ಲಿ ಸೃಷ್ಟಿಯ ಬಗ್ಗೆ ಏನು ಹೇಳಲಾಗಿದೆ.

ವೇದ, ಉಪನಿಷತ್ತುಗಳಲ್ಲಿನ ಸತ್ಯಗಳು
ಇಲ್ಲಿ ಭೌತವಿಜ್ಞಾನದ ಮೂಲತತ್ತ್ವದಿಂದಲೇ ಶುರು ಮಾಡೋಣ. ಯಾವುದೇ ವಸ್ತುವನ್ನು, ಶಕ್ತಿಯನ್ನು ಸೃಷ್ಟಿಸುವುದಕ್ಕಾಗಲೀ ನಾಶಮಾಡುವುದಕ್ಕಾಗಲೀ ಸಾಧ್ಯವಿಲ್ಲ, ರೂಪಾಂತರಗೊಳಿಸಬಹುದು. ಹಾಗಿದ್ದರೆ ಮಾನವನ ಸೃಷ್ಟಿ ಹೇಗಾಯಿತು? ಮಾನವ ಜೀವಿ ಎನ್ನಬಹುದು. ಜೀವ ಇದ್ದ ಕಾರಣದಿಂದಲೇ ಅಲ್ಲವೇ ಜೀವಿ ಎನ್ನುವ ಹೆಸರು ಬಂದದ್ದು. ಜೀವ ಹೋದ ಮೇಲೆ? ಉಳಿಯುವ ಶರೀರವೊಂದು ವಸ್ತುವೇ. ಹಾಗಾಗಿ ಶರೀರವನ್ನು ಸೃಷ್ಟಿಸುವುದಕ್ಕೆ ಸಾಧ್ಯವಿಲ್ಲ. ರೂಪಾಂತರಗೊಳಿಸಬಹುದು. ಹೆಣ್ಣಿನ ದೇಹದಲ್ಲಿರು ಅಂಡಾಣು ಮತ್ತು ಪುರುಷನ ದೇಹದಲ್ಲಿನ ವೀರ್ಯಾಣುಗಳು ಸಂಯೋಜನೆಗೊಂಡು ರೂಪುಗೊಳ್ಳುವ ಸಂಯುಕ್ತವೇ ರೂಪಾಂತರಕ್ಕೊಳಕ್ಕಾಗಿ ನಿಧಾನಕ್ಕೆ ಭ್ರೂಣವಾಗಿ ಮಾರ್ಪಡುತ್ತದೆ. ಈ ರೀತಿ ಮಾರ್ಪಟ್ಟ ಭ್ರೂಣವು ಶರೀರವಾಗುತ್ತದೆ. ಆ ಶರೀರಕ್ಕೆ ಜೀವದ ಆಗಮನವಾದರಷ್ಟೇ ಅದು ಜೀವಿ ಎಂದೆನಿಸಿಕೊಳ್ಳುತ್ತದೆ. ಹಾಗಾಗಿಯೇ ಆತ್ಮವೊಂದೇ ಶಾಶ್ವತ ಎಂದು ವೇದಗಳಲ್ಲಿ ಹೇಳಿರುವುದು. ಐತರೇಯ ಉಪನಿಷತ್ತಿನಲ್ಲಿ ಜೀವಿಗಳ ದೇಹವನ್ನು ಅಪೋಲೋಕ ಎಂದಿದ್ದಾರೆ. ಹೀಗಾಗಿ ವೇದಗಳು ಶರೀರವನ್ನು ಭೌತಕಾಯ ಎಂದೇ ಪರಿಗಣಿಸಿವೆ. 
ಒಂದು ಲೋಕಕ್ಕೆ ಆ ಲೋಕದ ಅಧಿದೇವತೆಗಳಿರುತ್ತಾರೆ. ಅಗ್ನಿ, ಸೂರ್ಯ, ದಿಗ್ದೇವತೆಗಳು, ವಾಯು, ಪರ್ಜನ್ಯ ದೇವತೆಗಳು, ಮೃತ್ಯು, ಸೋಮ, ವರುಣ ಎಂಬ ಎಂಟು ದೇವತೆಗಳು ಒಂದೊಂದು ಲೋಕದಲ್ಲಿವೆ. ಅದೇ ದೇವತೆಗಳ ಸ್ವರೂಪಗಳು ಪ್ರತಿ ಜೀವಿಯ ದೇಹದಲ್ಲಿ ಇರುತ್ತವೆ. ಅಂದರೆ ಮಾನವನ ದೇಹವೇ ಒಂದು ಲೋಕ ಎಂದಂತಾಯಿತು. ಇದೇ ವಾದವನ್ನು ಪ್ರತಿಯೊಂದು ಲೋಕಕ್ಕೂ ಅನ್ವಯಿಸಬಹುದು. ಈ ಲೋಕಗಳನ್ನು ಅಶ್ವಗಳು ಎಂದು ಕರೆದಿದೆ ಬೃಹದಾರಣ್ಯಕ ಉಪನಿಷತ್ತು. ಒಂದೊಂದು ನಕ್ಷತ್ರವೂ ಒಂದೊಂದು ಅಶ್ವವೇ. ಇಂಥ ಕೋಟ್ಯಂತರ ಲೋಕಗಳು ಸೇರಿದರೆ ಬ್ರಹ್ಮಾಂಡ. ಆ ಬ್ರಹ್ಮಾಂಡದ ಮೂಲವೇ ಬ್ರಹ್ಮತತ್ತ್ವ ಅಥವಾ ಪರಮಾತ್ಮ. ವೈಜ್ಙಾನಿಕವಾಗಿ ಹೇಳುವುದಾದರೆ ಇದುವೇ ಸೃಷ್ಟಿಯ ಮೂಲ.
ಅಂದರೆ ಈ ಜಗತ್ತಿನಲ್ಲಿ ಏನೆಲ್ಲ ಇದೆಯೋ ಅವನ್ನೆಲ್ಲ ಒಟ್ಟು ಸೇರಿಸಿದಾಗ ಸಿಗುವಂಥ ಮೂಲವೇ ಸೃಷ್ಟಿಯ ಮೂಲ. ಅಂದರೆ ಸೃಷ್ಟಿಯ ಮೂಲದಲ್ಲಿ ಇದ್ದದ್ದು ಬ್ರಹ್ಮತತ್ತ್ವ ಮಾತ್ರ. ಈ ಬ್ರಹ್ಮತತ್ತ್ವವೆಂದರೆ ಅದು ಸಮಗ್ರತೆ. ಎಲ್ಲದರ ಒಟ್ಟು ಮೊತ್ತ. ಆ ಬ್ರಹ್ಮತತ್ತ್ವವನ್ನು ಅರ್ಕಸಾಗರವೆಂದೂ ಕರೆಯಲಾಗುತ್ತದೆ. ಇದರ ಬಗ್ಗೆ ಉಪನಿಷತ್ತುಗಳು, ವೇದ ಏನು ಹೇಳಿದೆ ಎಂಬುದನ್ನು ಚಿಂತಕ ಯು. ಪದ್ಮನಾಭ ಭಟ್ಟರು ಸೊಗಸಾಗಿ ವಿವರಿಸಿದ್ದಾರೆ. 
ಅರ್ಕಸಾಗರದಲ್ಲಿ ಅಥವಾ ಬ್ರಹ್ಮತತ್ತ್ವದ ಶ್ರದ್ಧಾಯಾಗದ ಫಲವಾಗಿ ಈ ಜಗತ್ತು ಸೃಷ್ಟಿಯಾಯಿತು. ಶ್ರದ್ಧೆ ಎಂದರೆ ಬಯಕೆ ಅಥವಾ ಕಾಮನೆ ಎಂದರ್ಥ. ಇನ್ನು ಯಾಗವೆಂದರೆ ನಾವು ಇಷ್ಟಪಟ್ಟು ಮಾಡುವ ಯಾವುದೇ ಕಾರ್ಯ. ಹೀಗೆ ಬ್ರಹ್ಮತತ್ತ್ವವೂ ಒಂದು ಬಾರಿ ತಾನು ಎರಡಾಗಬೇಕು ಎಂದು ಬಯಸಿತು. ತೈತ್ತೀರಿಯ ಉಪನಿಷತ್ ಹೇಳುವಂತೆ `ಸೋ..ಕಾಮಯತ ಬಹುಸ್ಯಾಂ ಪ್ರಜಾಯೇಯೇತಿ' ಎಂದು ಬ್ರಹ್ಮತತ್ತ್ವವು ಬಯಸಿತು. ಆಗ ಅಲ್ಲಿ ಶ್ರದ್ಧಾತರಂಗಗಳ ಸೃಷ್ಟಿಯಾಯಿತು. ಇದರ ಫಲವಾಗಿ ಉಂಟಾದ ಉದ್ಘೀತ ಮಹಾಕಂಪನದ ಪರಿಣಾಮ ಜಗತ್ತು ವಿಕಾಸವಾಯಿತು. ಬೃಹದಾರಣ್ಯಕ ಉಪನಿಷತ್ ಎರಡಾಗಬೇಕು ಎಂದು ಬಯಸಿದ ಬ್ರಹ್ಮತತ್ತ್ವದ ಬಗ್ಗೆ ಇನ್ನೊಂದು ಮಗ್ಗುಲನ್ನು ಕೊಡುತ್ತದೆ. `ಯಥಾ ಸ್ತ್ರೀ ಪುಮಾಂಸೌ ಸಂಪರಿಷ್ವಕ್ತೌ ಸ ಇಮಮೇವಾ ತ್ಯಾನಂ ದ್ವೇಧಾಪಾತಯತ್, ತ್ವತಃ ಪತಿಶ್ಚ ಪತ್ನೀ ಚಾಭವತಾಂ' ಎನ್ನುತ್ತದೆ ಈ ಉಪನಿಷತ್. ಈ ಜಗತ್ತು ಸೃಷ್ಟಿಯಾದ ಆದಿಯಲ್ಲಿ ಇದ್ದದ್ದು `ಅಹಸ್' ಎಂಬ ಸ್ತ್ರೀರೂಪಿ ದ್ರವ್ಯವೂ `ಆತ್ಮತತ್ತ್ವ'ವೆಂಬ ಪುರುಷರೂಪಿಯೂ. ಈ ಎರಡೂ ಶಕ್ತಿಗಳ ಮೂಲ ಒಂದೇ. ಆ ಮೂಲವೇ ಪರಮಾತ್ಮ. ಇಂಥ ಮೂಲಶಕ್ತಿಯೇ ತನ್ನೊಳಗೆ ಉತ್ಪತ್ತಿಯಾದಂಥ ಉದ್ಘೀತ ಮಹಾಕಂಪನವೆಂಬ ಶ್ರದ್ಧಾತರಂಗಗಳ ಮೂಲಕ ತನ್ನನ್ನೇ ಎರಡಾಗಿ ಸೀಳಿಕೊಂಡು ಒಂದು ಪುರುಷರೂಪಿ ಪತಿಯಾಯಿತು. ಇನ್ನೊಂದು ಸ್ತ್ರೀರೂಪಿ ಪತ್ನಿಯಾಯಿತು. ಇದುವೇ ಮುಂದುವರಿದು ಬ್ರಹ್ಮಾಂಡ ವಿಸ್ತಾರವಾಯಿತು. ನಮ್ಮ ಆತ್ಮವೂ ಈ ಮೂಲ ತತ್ತ್ವದ ಅಂದರೆ ಪರಮಾತ್ಮನ ಪ್ರತೀಕ. ವಿಸ್ತಾರವಾಗುವ ಉದ್ದೇಶದಿಂದ ಹೊರಟರೆ ಜನನ ಮಜಣದ ಚಕ್ರದಲ್ಲಿ ಸಿಲುಕಿ ಹಲವು ಜನ್ಮಗಳನ್ನು ಪಡೆಯುತ್ತಲೇ ಇರಬೇಕಾಗುತ್ತದೆ. ಮುಕ್ತಿ ಬೇಕೆಂದಾದಲ್ಲಿ ಹೃದಯದಲ್ಲಿ ಪ್ರತಿಶ್ರದ್ಧಾತರಂಗಗಳು ಏಳಬೇಕು. ಅರ್ಥಾತ್ ಏಕಗೊಳ್ಳುವ ಉದ್ದೇಶ ಹೊಂದಿರಬೇಕು. ಸೃಷ್ಟಿ ಮೂಲವನ್ನು ಹುಡುಕಬೇಕು ಎಂದಾದರೂ ನಾವು ಅಣುಗಳನ್ನು, ಪರಮಾಣುಗಳನ್ನು ವಿಭಜಿಸುತ್ತಾ ಹೋಗುವುದಲ್ಲ. ಅವುಗಳನ್ನು ಒಟ್ಟುಮಾಡುತ್ತಾ ಏಕವಾಗಿಸುತ್ತಾ ಹೋಗಬೇಕು. ಸರ್ವವನ್ನೂ ಒಂದಾಗಿಸಿ ನೋಡಬೇಕು. ಅದುವೇ ಸೃಷ್ಟಿ ಮೂಲ.

ಹಾಗಾದರೆ ಅಂತ್ಯವೇ ಇಲ್ಲವೆ?
ಖಂಡಿತಕ್ಕೂ ಅಂತ್ಯ ಇಲ್ಲ. ಆದಿಯೂ ಇಲ್ಲ. ಇಲ್ಲಿ ಹುಟ್ಟು ಸಾವುಗಳನ್ನು ರೂಪಾಂತರಗಳೆನ್ನನುವುದು ಉತ್ತಮ. ಈ ಜಗತ್ತು ಒಂದು ವೇಳೆ ಅಂತ್ಯವಾಯಿತು ಎಂದು ಹೇಳುವಂಥ ಸಂದರ್ಭ ಬಂದರೂ ಅದನ್ನು ರೂಪಾಂತರ ಎಂದೇ ಅರ್ಥೈಸಿಕೊಳ್ಳಬೇಕು. ಪ್ರಸ್ತುತ ಸ್ಥಿತಿಯಲ್ಲಿರುವ ಜಗತ್ತು ಇನ್ನೊಂದು ರೂಪವನ್ನು ಪಡೆದು, ಅಲ್ಲಿ ವಿಕಾಸವಾಗುತ್ತಾ ಸಾಗುತ್ತದೆ. ಮಾನವನ ದೇಹದಲ್ಲಿ ಪ್ರತಿಕ್ಷಣವೂ ಲಕ್ಷಾಂತರ ಜೀವಕೋಶಗಳು ಹುಟ್ಟುತ್ತವೆ, ಲಕ್ಷಾಂತರ ಜೀವಕೋಶಗಳು ಸಾಯುತ್ತವೆ. ಹಾಗಂತ ಮನುಷ್ಯನಿಗೆ ತನ್ನ ಆಯಸ್ಸು ಮುಗಿಯುವವರೆಗೆ ಏನಾದರೂ ಸಮಸ್ಯೆಯಾಗುತ್ತದೆಯೇ? ಹಾಗೆಯೇ ಈ ಜಗತ್ತು. ತನ್ನ ಆಯಸ್ಸು ಮುಗಿಯುವವರೆಗೆ ತನ್ನೊಳಗೆ ಹಲವು ಹುಟ್ಟುಗಳನ್ನು, ಹಲವು ಸಾವುಗಳನ್ನು ಕಾಣುತ್ತಿರುತ್ತದೆ. ತನ್ನ ಆಯಸ್ಸು ಮುಗಿದಾಗ ತಾನೂ ಸಾಯುತ್ತದೆ ಅರ್ಥಾತ್ ರೂಪಾಂತರಗೊಳ್ಳುತ್ತದೆ. ಆದರೆ ಆತ್ಮಕ್ಕೆ ಸಾವಿಲ್ಲ. ಆತ್ಮದ ಮೂಲಸ್ವರೂಪವಾದ ಪರಬ್ರಹ್ಮಕ್ಕೂ ಸಾವಿಲ್ಲ. ಅದನ್ನೇ ವೇದಗಳು ಓಂಕಾರದೊಳಗಡೆ ಬಂಧಿಸಿವೆ. ಸೃಷ್ಟಿ, ಸ್ಥಿತಿ, ಲಯ ಮೂರನ್ನೋ ಒಳಗೊಂಡಂಥದ್ದೇ ಸೃಷ್ಟಿಯ ಮೂಲ. ಅರ್ಥಾತ್ ಎಲ್ಲವನ್ನೂ ಒಟ್ಟಾಗಿ ನೋಡಿದರಷ್ಟೇ ಸೃಷ್ಟಿಯ ಮೂಲ ಸಿಗುತ್ತದೆ ಎಂಬ ಸತ್ಯವನ್ನು `ಓಂ' ಒಂದೇ ಹೇಳುತ್ತದೆ. ಈ ಓಂಕಾರ ಸ್ವರೂಪವಾದಂಥ ಪರಬ್ರಹ್ಮವೇ ಸೃಷ್ಟಿಗೆ ಆದಿ. ಇಂತಹ ಆದಿಯನ್ನು ಸೃಷ್ಟಿಸುವುದಕ್ಕಾಗಲೀ, ನಾಶಪಡಿಸುವುದಕ್ಕಾಗಲೀ ಸಾಧ್ಯವಿಲ್ಲ. ಇದು ಯಾರಿಂದಲೂ ಹುಟ್ಟಲಿಲ್ಲ, ಯಾರಿಂದಲೂ ಸಾಯುವುದೂ ಇಲ್ಲ. ನಜಾಯತೇ ಮ್ರಿಯತೇ ವಾ ವಿಹಶ್ಚಿ| ನ್ನಾಯಂ ಕುತಶ್ಚಿನ್ನ ಬಬೂವ ಕಶ್ಚಿತ್| ಅಜೋ ನಿತ್ಯಃ ಶಾಶ್ವತೋ..ಯಂ ಪುರಾಣೋ| ನ ಹನ್ಯತೇ ಹನ್ಯಮಾನೇ ಶರೀರೇ||

Comments

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು