ಸೋಲಾರನ್ನು ಪೇಂಟ್ ಮಾಡಿ

ಸೌರಕೋಶಗಳನ್ನು ದ್ರವರೂಪಕ್ಕೆ ಇಳಿಸಿದ್ದಾರೆ ವಿಜ್ಞಾನಿಗಳು. ಈ ದ್ರವರೂಪದ ಸೌರಕೋಶಗಳನ್ನು ಮನೆ ಗೋಡೆಗೆ, ಛಾವಣಿಗೆ ಪೇಂಟ್ ಮಾಡಿದ್ರಾಯ್ತು.
 
ಬೇಸಗೆ ಬಂತೆಂದ್ರೆ ಸಾಕು, ಪವರ್ ಕಟ್, ಲೋಡ್ ಶೆಡ್ಡಿಂಗ್, ಲೋ ವೋಲ್ಟೇಜ್... ಶಿವನಸಮುದ್ರದಲ್ಲಿ ನೀರಿಲ್ಲ, ವಿದ್ಯುತ್ ಖರೀದಿ ಸಾಮರ್ಥ್ಯ ನಮ್ಮಲ್ಲಿಲ್ಲ. ಕರೆಂಟ್ ಇಲ್ದೇ ಇರೋದನ್ನು ಸ್ವಲ್ಪ ಅಭ್ಯಾಸ ಮಾಡ್ಕೊಳ್ಳಿ... ಅನ್ನೋ ಧಾಟಿಯನ್ನೇ ಪ್ರತಿಧ್ವನಿಸುವಂತೆ ಹಣಕುತ್ತಾ ಕಣ್ಣಾಮುಚ್ಚಾಲೆಯಾಡುವ ಕರೆಂಟ್‌ಗೆ ಅದೆಷ್ಟು ಶಾಪ ಹಾಕ್ತೀವೋ ಗೊತ್ತಿಲ್ಲ. ಅಟ್‌ಲೀಸ್ಟ್ ಬೆಳಕಾದ್ರೂ ಇರ್‌ಲಿ ಅಂತ ಸೋಲಾರ್ ಹಾಕ್ಸೋಣ ಅಂದ್ಕೊಂಡ್ರೆ ಅದ್ರಲ್ಲಿ ಬರೋ ಬೆಳಕು ಸಾಲೇದೇ ಇಲ್ಲ. ಇನ್ನು ಮಿಕ್ಸಿ, ಗ್ರೈಂಡರ್, ಟಿವಿ, ಫ್ಯಾನು... ಎಲ್ಲ ಕೆಲ್ಸ ಮಾಡಬೇಕಾದರೆ ಮನೆ ಛಾವಣಿಯುದ್ದಕ್ಕೂ ಸೋಲಾರ್ ಪೆನಲ್‌ಗಳನ್ನು ಹಾಕಿಸಬೇಕಾಗಿ ಬರುತ್ತೆ. ಒಟ್ಟಿನಲ್ಲಿ ಸಮಸ್ಯೆ ಬಗೆಹರಿಯೋದೇ ಇಲ್ಲ ಅಂತ ಚಿಂತೆ! ಆದರೆ ವಿಜ್ಞಾನಿಗಳು ಈ ಚಿಂತೆಗೆ ಪರಿಹಾರ ಕಂಡುಕೊಂಡುಳ್ಳುವ ಮಹತ್ತರ ಸಂಶೋಧನೆ ಮಾಡಿದ್ದಾರೆ.
ಮನೆಯನ್ನೇ ಸೋಲಾರ್ ಪೆನಲ್ ಆಗಿ ಪರಿವರ್ತಿಸಬಹುದಾದ ಮಹಾನ್ ಸಂಶೋಧನೆಯಿದು. ಸೌರಕೋಶಗಳನ್ನು ದ್ರವರೂಪಕ್ಕೆ ಇಳಿಸಿದ್ದಾರೆ ವಿಜ್ಞಾನಿಗಳು. ಈ ದ್ರವರೂಪದ ಸೌರಕೋಶಗಳನ್ನು ಮನೆ ಗೋಡೆಗೆ, ಛಾವಣಿಗೆ ಪೇಂಟ್ ಮಾಡಿದ್ರಾಯ್ತು.

ಅಗ್ಗದ ದ್ರವ ಸೌರಕೋಶ
ದ್ರವ ರೂಪದ ಸೌರಕೋಶಗಳು ಅತ್ಯಂತ ಅಗ್ಗ, ಸ್ಥಿರ ಮತ್ತು ಅತ್ಯುತ್ತಮ ಕ್ಷಮತೆಯುಳ್ಳದ್ದಾಗಿವೆ. ಯುಎಸ್‌ಸಿ ಡಾರ್ನ್‌ಸೈಫ್ ಕಾಲೇಜ್ ಆಫ್ ಲೆಟರ್ಸ್, ಆರ್ಟ್ಸ್ ಮತ್ತು ಸೈನ್ಸ್ ಕಾಲೇಜಿನ ರಸಾಯನಶಾಸ್ತ್ರದ ಪ್ರೊಫೆಸರ್ ರಿಚರ್ಡ್ ಎಲ್. ಬ್ರೂಷೇ ಮತ್ತು ತಂಡ ಈ ಸಾಧನೆ ಮಾಡಿದೆ.

ಇದಕ್ಕೆ ಸಂಶೋಧಕರ ತಂಡ ಬಳಸಿಕೊಂಡದ್ದು ನ್ಯಾನೋ ತಂತ್ರಜ್ಞಾನವನ್ನು. ನ್ಯಾನೋ ಸೌರ ಹರಳುಗಳನ್ನು (ಸೋಲಾರ್ ನಾನೋ ಕ್ರಿಸ್ಟಲ್‌ಗಳು) ಒಂದು ದ್ರಾವಣದಲ್ಲಿ ಸೇರಿಸಿದರು ಸಂಶೋಧಕರು. ಈ ಸೌರ ಹರಳುಗಳ ಗಾತ್ರ ಸುಮಾರು ೪ ನ್ಯಾನೋಮೀಟರ್‌ಗಳು. ಅಂದರೆ ಒಂದು ಹೇರ್‌ಪಿನ್‌ನ ತುದಿಯಲ್ಲಿ ೨೫೦,೦೦,೦೦,೦೦,೦೦೦ ಹರಳುಗಳನ್ನು ಕೂರಿಸಬಹುದು. ವಿಶೇಷ ಎಂದರೆ ಪತ್ರಿಕೆಗಳನ್ನು ಮುದ್ರಿಸುವಂತೆ ಈ ನ್ಯಾನೋ ಹರಳುಗಳನ್ನು ಬೇಕೆಂದಲ್ಲಿ ಮುದ್ರಿಸಬಹುದಾಗಿದೆ. ದ್ರಾವಣ ರೂಪದಲ್ಲಿರುವ ಕೋಶಗಳನ್ನು ಮನೆಯ ಗೋಡೆಗೆ ಪೇಂಟ್ ಮಾಡಬಹುದು. ಗೋಡೆಗೆ ಬೇರೆ ಪೇಂಟ್ ಕೊಡುವ ಅನಿವಾರ್ಯತೆಯೂ ಇಲ್ಲ, ಗೋಡೆಗೆ ಬಳಿದ ಪೇಂಟ್ ವ್ಯರ್ಥವಾಗುತ್ತದೆ ಎಂಬ ಯೋಚನೆಯೂ ಇಲ್ಲ. ದ್ರವ ಸೌರಕೋಶಗಳನ್ನು ಗೋಡೆಗೆ ಪೇಂಟ್ ರೂಪದಲ್ಲಿ ಬಳಸುವುದಕ್ಕೆ ಎಷ್ಟು ಖರ್ಚು ಮಾಡುತ್ತೇವೆಯೋ ಅಷ್ಟೂ (ಅದಕ್ಕಿಂತ ಹೆಚ್ಚೇ) ಮೌಲ್ಯ ಸೌರವಿದ್ಯುತ್ ರೂಪದಲ್ಲಿ ಬಂದುಬಿಡುತ್ತದೆ. ಮಳೆಗೆ ಇದು ಹಾಳಾಗುತ್ತದೆ ಎಂಬ ಚಿಂತೆಯೂ ಬೇಕಿಲ್ಲ ಎಂಬುದು ಸಂಶೋಧಕರ ವಿಶ್ವಾಸದ ನುಡಿ.

ಈ ಸೂಕ್ಷ್ಮಾತಿಸೂಕ್ಷ್ಮ ನ್ಯಾನೋ ಹರಳುಗಳನ್ನು ಪರಸ್ಪರ ಬಂಧಿಸುವುದಕ್ಕೆ ಮತ್ತು ಅವು ಉತ್ಪಾದಿಸುವ ಸೌರವಿದ್ಯುತ್ ಅನ್ನುಬ್ಯಾಟರಿಗೆ ಪೂರೈಸಿ ಅಲ್ಲಿ ಶೇಖರಿಸುವದಕ್ಕೆ ನೆರವಾಗಲು ಸಿಂಥೆಟಿಕ್ ಲಿಗಂಡ್ (ವಿವಿಧ ಅಣುಗಳನ್ನು ಪರಸ್ಪರ ಬಂಧಿಸುವ ಕೃತಕ ಅಯಾನ್) ಉತ್ಪಾದಿಸಿದ್ದಾರೆ ಸಂಶೋಧಕರು. ಹೀಗಾಗಿ ಉತ್ಪಾದನೆಯಾದ ವಿದ್ಯುತ್ ಅನ್ನು ಸಂಗ್ರಹಿಸುವ ಬಗೆ ಹೇಗೆ ಎಂಬ ಚಿಂತೆ ದೂರಾಗಿದೆ.
ಈ ತಂತ್ರಜ್ಞಾನವನ್ನು ವಾಣಿಜ್ಯೀಕರಣಗೊಳಿಸುವುದಕ್ಕೆ ಇನ್ನೂ ಒಂದಷ್ಟು ವರ್ಷಗಳು ಬೇಕಾಗಬಹುದು. ಆದರೆ ಮುಂದೊಂದು ದಿನ ಈ ತಂತ್ರಜ್ಞಾನ ವಿದ್ಯುತ್ ಕೊರತೆಯನ್ನು ನೀಗುವುದರಲ್ಲಿ ಸಂಶಯವಿಲ್ಲ.

Comments

  1. ನೀವು ವಿಷಯವನ್ನು ಆಯ್ಕೆ ಮಾಡುವ ಪರಿ, ನಿರೂಪಣೆಯ ಸರಳತೆ, ಕ್ಲಿಷ್ಟವೆನಿಸುವುದನ್ನು ಕೂಡ ಸುಲಭವಾಗಿಸುವ ಶೈಲಿ ನನಗೆ ಯಾವತ್ತೂ ಅಚ್ಚರಿ,ಖುಷಿ.... ಹೀಗೆ ಹರಿಯುತ್ತಿರಲಿ ವಿಜ್ಞಾನ ಗಂಗೆ ಆಸಕ್ತರ ದಾಹ ತಣಿಸುತ್ತ.... ಮುಂದೊಂದು ದಿನ ಬೆಸ್ಟ್ ಸೈನ್ಸ್ ರೈಟರ್ ಅವಾರ್ಡ್ ನಿಮಗೆ ಬಂದರೆ ಅಚ್ಚರಿಯಿಲ್ಲ ....

    ReplyDelete
  2. ಐಡಿಯಾ ಏನೋ ಒಳ್ಳೆಯದೇ...ಆದರೆ ಪೇಂಟ್ ನಲ್ಲಿರುವ ಸೂಕ್ಷ್ಮ ನ್ಯಾನೋ ಕಣಗಳು ಅಲರ್ಜಿಕ್ ಆಗಿರಬಹುದಾದ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಈಬಗ್ಗೆ ಇನ್ನಷ್ಟು ಸಂಶೋಧನೆ ಅಗತ್ಯ....

    ReplyDelete
  3. nanu nimma webb anna prajavani paper nalli odide english arha agde iro nmmanta yuvakarige nimma patave spurti thank you...........

    ReplyDelete

Post a Comment

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು