ಮಹಾವಿಷ್ಣು ರೂಪಕಲ್ಪನ ಕಾವ್ಯವುಂ

ಮಹಾವಿಷ್ಣು ರೂಪಕಲ್ಪನ ಕಾವ್ಯವುಂ


ಕೇಶವನಾನಂದದ ರೂಪರಾಶಿಂ
ಬ್ರಹ್ಮಾಂಡದಾಪಾರ ಚರಾಚರಾತ್ಮಂ
ವಂದೇ ಗದಾಧರ ಮಹಾಸುರೂಪಂ
ಸಾನಂದ ನಾರಾಯಣ ಪಾದಪದ್ಮಂ ||೧||

ಕ್ಷೀರಾಂಬುಧಿವಾಸ ಸುಶಾಂತ ಮೂರ್ತಿಂ
ಬಾಳೆಂಬ ಮಾಯಾಜಗವೆಲ್ಲ ಕ್ಷೀರಂ
ಅರ್ಥೈಸೆ ಮೂಲೋಕ ಮಹಾಂತ ಸತ್ಯಂ
ಸಾನಂದ ನಾರಾಯಣ ಪಾದಪದ್ಮಂ ||೨||

ಪಾಲೆಂದು ಪಾಲಾಗಿರದೆಂಬ ಸತ್ಯಂ
ಪಾಳಾಗಿ ಮೂರೇ ದಿನಕಾಯುನಾಶಂ
ಕ್ಷೀರಾಂತರಾಳಂ ದಿಟದೇವವಾಸಂ
ಸಾನಂದ ನಾರಾಯಣ ಪಾದಪದ್ಮಂ ||೩||

ಹೆಪ್ಪೆರೆದಾಗಂ ಮೊಸರಾಗಿ ಪಾಲುಂ
ಬಾಳ್ಪುದು ನಾಕಾರು ದಿನಾಂತಕಂತಂ
ಕ್ಷೀರಂ ದಧಿಯುಂ ಹರಿದೇವವಾಸಂ
ಸಾನಂದ ನಾರಾಯಣ ಪಾದಪದ್ಮಂ ||೪||

ಮಂಥನವಂ ಮಾಡೆ ದಧಿಯನೀಗಂ
ಉದ್ಭವವುಂ ಕ್ಷೀರಸಮುದ್ರಸಾರಂ
ಪ್ರತ್ಯಕ್ಷರೂಪಂ ನವನೀತಚೋರಂ
ಸಾನಂದ ನಾರಾಯಣ ಪಾದಪದ್ಮಂ ||೫||

ಘೃತಸ್ವರೂಪಂ ವಸುದೇವದೇವಂ
ಸಾಧಾರ ಸಾಕ್ಷ್ಯಂ ಜಯನಾಮಮಂತ್ರಂ
ಅರ್ಥೈಸೆ ಮೋಕ್ಷಂ ಜಗದಾದಿ ಲೋಕಂ
ಸಾನಂದ ನಾರಾಯಣ ಪಾದಪದ್ಮಂ ||೬||

ಮಾಯಾಮನೋಹರನು ಆದಿಶೇಷಂ
ಶೇಷತಲ್ಪಶಾಯಿ ಸುಯೋಗರೂಪಂ
ನಾಗಸ್ವರೂಪಂ ಅರಿತಂದು ಬಾಳ್ಪುಂ
ಸಾನಂದ ನಾರಾಯಣ ಪಾದಪದ್ಮಂ ||೭||

ಬ್ರಹ್ಮಾಂಡದಾಧಿಕ ಕಠೋರ ಕಷ್ಟಂ
ಪಾಶಸ್ವರೂಪಂ ಕಡುಕಷ್ಟವೆಲ್ಲಂ
ಕಷ್ಟಂಗಳ ಮೇಲೆ ಸುಖಾಂತ ಕಾಲಂ
ದೃಷ್ಟಾಂತ ನಾರಾಯಣ ಪಾದಪದ್ಮಂ ||೮||

ಪೋರಾಡುತಂ ಜೀವನ ಜೀವನಾಂತಂ
ಪೋರಾಟದಾ ರೂಪವಿರೂಪ ಶೇಷಂ
ಶೇಷನದಾತಂಕಗಳಿಂಗತೀತಂ
ಪ್ರಣಾಮಿ ನಾರಾಯಣ ಪಾದಪದ್ಮಂ ||೯||

ಶೇಷ ಸುಕಾಯಂ ಶಯನಾ ತಲ್ಪವುಂ
ಮೋದಂ ವಿನೋದಾತಿವಿನೋದ ವಿಷ್ಣುಂ
ನಿದ್ರಾವಿಲೀನಂ ಕಪಟಾಂಕಲೀಲಂ
ಸಾಷ್ಟಾಂಗ ನಾರಾಯಣ ಪಾದಪದ್ಮಂ ||೧೦||

ಶಿರೋತಲಂ ಕೈಪಿಡಿದಿಂತು ಪೇಳ್ದಂ
ಭಾವಾತಿರೇಕಂ ತೊರೆದುಂ ಮನುಷ್ಯಂ
ಬಂಧಗಳಂ ತ್ಯಜಿಸೆ ಮುಕ್ತಿ ಮೋಕ್ಷಂ
ಪ್ರಣಾಮಿ ನಾರಾಯಣ ಪಾದಪದ್ಮಂ ||೧೧||

ಬಂಧುಗಳುಂ ಕೂಡರು ಕಷ್ಟಕಾಲಂ
ತಾನಾಗಿ ತಾನೇ ಪರಿತಾಪ ಪೊಂದಿಂ
ಧ್ಯಾನಾಂತರಾಳಂ ಪರತತ್ವಲೀನಂ
ಸಾನಂದ ನಾರಾಯಣ ಪಾದಪದ್ಮಂ ||೧೨||

ಲಕ್ಷ್ಮೀನಿವಾಸಂ ಹರಿಪಾದಮೂಲಂ
ಆಭರಣವುಂ ಲಕುಮೀಸುರೂಪಂ
ಶೋಭಾಯಮಾನಂ ಸಿರಿದೇವಿ ಮೂರ್ತಿಂ
ಸಾನಂದ ನಾರಾಯಣ ಪಾದಪದ್ಮಂ ||೧೩||

ಬಂಗಾರಮೋಹಂ ಬರಿದೊಂದು ಮಿಥ್ಯಂ
ಶಿರಾಂತರ್ಯದಿಂ ನೆಲೆಯಾಗೆ ಭ್ರಾಂತಿಂ
ನಾಶಾಂತರಾಳಂ ಬಸುಮಾಂತರಾತ್ಮಂ
ಪ್ರಣಾಮಿ ನಾರಾಯಣ ಪಾದಪದ್ಮಂ ||೧೪||

ನಾಭಿಯೊಳುಂ ಅಂಬುಜವುಂ ಸುಪುಷ್ಪಂ
ಬ್ರಹ್ಮವಿಕಾಸಂ ಕಮಲಾಂತರಾಳಂ
ಸೃಷ್ಟಿ ಸುಕಾರ್ಯಂ ನರರೂಪ ಲೀಲಂ
ಸಾನಂದ ನಾರಾಯಣ ಪಾದಪದ್ಮಂ ||೧೫||

ಈಶ್ವರನಾತ್ಮದಲಿ ಭಾವಲೀನಂ
ಏಕೈಕರೂಪಂ ಜಗದಾದಿದೇವಂ
ಈಶ ಮಧುಸೂದನರೇಕರೂಪಂ
ಸಾನಂದ ನಾರಾಯಣ ಪಾದಪದ್ಮಂ ||೧೬||

ತ್ರಿಮೂರ್ತಿರೂಪಂ ಜಗದಾದಿ ಶಕ್ತಿಂ
ಮಾಧವನಾತ್ಮದಿ ವಿಲೀನ ಸರ್ವಂ
ಬ್ರಹ್ಮಾಂಡಪಿಂಡಂ ಸುಗುಣಾಂತರಂಗಂ
ಸಾಷ್ಟಾಂಗ ನಾರಾಯಣ ಪಾದಪದ್ಮಂ ||೧೭||

ಭುಜಂಗಳುಂ ನಾಕು ಯುಗಾದಿ ರೂಪಂ
ತೇಜೋಮಯಂ ಯೋಗ ಸುಯೋಗಕಾರಂ
ಕೃತಂ ಕಲಿಂ ದ್ವಾಪರದಾಂತ ತ್ರೇತಾಂ
ಸಿಂಧೂರ ನಾರಾಯಣ ಪಾದಪದ್ಮಂ ||೧೮||

ನಾಕಾಯುಧವುಂ ಚತುರಾದಿ ಜ್ಞಾನಂ
ಕಷ್ಟಂಗಳ ಮೇಲೆ ಗದಾಪ್ರಹಾರಂ
ಶಂಖನಿನಾದಂ ಜಗತ್ಪಾಲ ಗಾನಂ
ಸಿಂಧೂರ ನಾರಾಯಣ ಪಾದಪದ್ಮಂ ||೧೯||

ಮೇಧಾ ಮನೋಜ್ಞ ಸುದರ್ಶನ ಚಕ್ರಂ
ಸ್ಪಷ್ಟ ಸುಮಾರ್ಗವ ದರ್ಶಿಪ ಚಕ್ರಂ
ಸೃಷ್ಟಿಂ ಲಯಂ ಜೀವನ ರೂಪ ಚಕ್ರಂ
ಸಾನಂದ ನಾರಾಯಣ ಪಾದಪದ್ಮಂ ||೨೦||

ಪದ್ಮಂ ಮನೋಹರ ಪದಂ ಸುಲೋಕಂ
ಕ್ಷಿಪ್ರಗತಿಂ ಕೋಮಲಧಾಮ ಗಮ್ಯಂ
ಅತ್ಯಂತ ವೇಗಂ ಗರುಡಂ ಸುವಾಹಂ
ಸಂಪ್ರೀತ ನಾರಾಯಣ ಪಾದಪದ್ಮಂ ||೨೧||

ವೇದಸ್ವರೂಪಂ ಸುಮುಖಾರವಿಂದಂ
ಬ್ರಹ್ಮಾಂಡ ರೂಪಂ ನಯನಾ ಮನೋಜ್ಞಂ
ವಂದೇ ಪರಾತ್ಮರ ಮಹಾಂತ ಹಂಸಂ
ಸಾನಂದ ನಾರಾಯಣ ಪಾದಪದ್ಮಂ ||೨೨||

ವಂದೇ ಸುರೂಪಂ ಸನಕಾದಿ ವಂದ್ಯಂ
ವಂದೇ ಸುರೂಪಂ ಅಮರಂ ಅಜೇಯಂ
ವಂದೇ ಸುರೂಪಂ ಜಗದಾದಿ ದೇವಂ
ಸಾಷ್ಟಾಂಗ ನಾರಾಯಣ ಪಾದಪದ್ಮಂ ||೨೩||

ಯೋಗಂ ಸುನಾದಂ ಪಯಣಿಗ ಕಾವ್ಯಂ
ಶಬ್ದಂಗಳುಂ ದೇವಸುಪಾದ ಸೇವ್ಯಂ
ಕಾವ್ಯಂ ಅರ್ಪಿತಂ ಹರಿದೇವ ಪಾದಂ
ಪ್ರಣಾಮಿ ನಾರಾಯಣ ಪಾದಪದ್ಮಂ ||೨೪||

- ಪ್ರಕಾಶ ಪಯಣಿಗ

Comments

Popular posts from this blog

ಸ್ವರ್ಣಬಿಂದು: ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ ಚಿನ್ನ

ಸೋಲಾರನ್ನು ಪೇಂಟ್ ಮಾಡಿ