ಇಂಥ ಸಂಶೋಧನೆಗಳು ಬೇಕಾ?

ಲುಮಿನಾಲ್  ರಕ್ತದ ಜೊತೆಗೆ ರಾಸಾಯನಿಕ ಕ್ರಿಯೆಗೆ ಒಳಗಾದಾಗ ನೀಲಿ ಬಣ್ಣದ ಪ್ರಕಾಶಮಾನ ಬೆಳಕು ಹೊಮ್ಮಿಸುತ್ತದೆ.

ವೈಜ್ಞಾನಿಕ ಸಂಶೋಧನೆಗಳು ಜಗತ್ತಿಗೆ ಉಪಕಾರಿ ಯಾಗುವಂತಿರ ಬೇಕು. ಮನುಕುಲವನ್ನು, ಜೀವಸಂಕುಲವನ್ನು ಪೋಷಿಸುತ್ತಿರುವಂಥ ಭೂಮಿಯನ್ನು ನಾಶ ಮಾಡುವಂಥ ಸಂಶೋಧನೆಗಳನ್ನು ಮಾಡಬಾರದು. ಆದರೆ ಬಹಳಷ್ಟು ಬಾರಿ ಸಂಶೋಧನೆಗಳು ಸಂಶೋಧನೆಕಾರನ ಎಣಿಕೆಯನ್ನು ಮೀರಿ ಹಳಿ ತಪ್ಪಿ ನಡೆಯುತ್ತವೆ. ಇನ್ನೂ ಬಹಳಷ್ಟು ಸಾರ್ತಿ ಉದ್ದೇಶಪೂರ್ವಕವಾಗಿಯೇ ನಡೆಸಿದ ಒಂದು ಸಂಶೋಧನೆ ಜೀವಪೋಷಕ ಭೂಮಿಗೆ ಮಾರಕವಾಗಿ ಪರಿಣಮಿಸುತ್ತವೆ. ಕೆಲವೊಂದು ಬಾರಿ ಯಾರದೋ ಒತ್ತಾಸೆಗೆ, ಒತ್ತಡಕ್ಕೆ, ಬೆದರಿಕೆಗೆ ಮಣಿದು ಇಳೆಯನ್ನು ಹಾಳು ಮಾಡುವಂಥ ಸಂಶೋಧನೆ ನಡೆಯುತ್ತದೆ.
ಈಗಲೂ ಒಂದು ಸಂಶೋಧನೆ ನಡೆದಿದೆ. ಇಂಧನ, ವಿದ್ಯುತ್ ಎಷ್ಟು ಅಮೂಲ್ಯವಾದುದು ಎಂಬುದನ್ನು ಜನತೆಗೆ ತೋರಿಸಿಕೊಡಲು ಈ ಪ್ರಯೋಗ ಅಥವಾ ಸಂಶೋಧನೆ ನಡೆದಿದೆ ಎಂದು ಹೇಳಲಾಗಿದೆಯಾದರೂ ಇದು ಯಾವ ರೀತಿಯ ಪರಿಣಾಮ ಉಂಟು ಮಾಡಬಹುದು, ಭವಿಷ್ಯದಲ್ಲಿ ಇದೇ ಸಂಶೋಧನೆ ಬೀರಬಹುದಾದಂಥ ವ್ಯತಿರಿಕ್ತ ಪರಿಣಾಮಗಳು ಏನಿರಬಹುದು ಎಂಬುದನ್ನು ಯೋಚಿಸಿದರೆ ಮೈ ಕಂಪಿಸುತ್ತದೆ.

ಏನಿದು ಸಂಶೋಧನೆ?
ಅಷ್ಟಕ್ಕೂ ಭೀತಿಗೊಳಗಾಗುವುದಕ್ಕೆ ಕಾರಣ ಸಂಶೋಧನೆಗೆ ಬಳಸಿದಂಥ ವಸ್ತುಗಳು. ಬೆಳಕನ್ನು ಹೀಗೂ ಉತ್ಪಾದಿಸಬಹುದು ಎಂದು ಇದು ತೋರಿಸಿಕೊಟ್ಟಿದೆ. ಇದಕ್ಕೆ ಬಳಸಿದ್ದು ರಾಸಾಯನಿಕಗಳು ಮತ್ತು ಮನುಷ್ಯನ ರಕ್ತ!
ಹೌದು, ಹೀಗಾಗಿ ಈ ವಿಚಾರ ಕೇಳಿದ ಕ್ಷಣದಿಂದಲೇ ಮುಂದೇನಾದೀತು ಎಂಬ ಚಿಂತನೆ ಬೃಹದಾಕಾರವಾಗಿ ಬೆಳೆದು ನಿಂತಿದೆ. ಈ ಬಲ್ಬ್ ಹೇಗಿದೆ ಗೊತ್ತಾ?

ಗುಳಿಗೆಗಳ ರೂಪದಲ್ಲಿರುವ ರಾಸಾಯನಿಕಗಳನ್ನು (ಲುಮಿನಾಲ್) ಬಲ್ಬ್ ಆಕಾರದ ಒಂದು ಪಾತ್ರೆಯಲ್ಲಿ ಹಾಕಿದರು ಅಮೆರಿಕನ್ ವಿನ್ಯಾಸಕಾರ ಮೈಕ್ ಥಾಮ್ಸನ್. ಪಾತ್ರೆಯ ಮೇಲ್ಭಾಗ ಚೂಪಾಗಿದ್ದು, ಯುವತಿಯೊಬ್ಬಳು ತನ್ನ ಬೆರಳನ್ನು ಚೂಪು ಭಾಗಕ್ಕೆ ಒತ್ತಿ, ಗಾಯ ಮಾಡಿಕೊಂಡು ರಕ್ತ ಹರಿಸಿದಳು. ಪಾತ್ರೆಯೊಳಗಿದ್ದ ರಾಸಾಯನಿಕದ ಜೊತೆಗೆ ರಕ್ತವು ರಾಸಾಯನಿಕ ಪ್ರಕ್ರಿಯೆಗೆ ಒಳಗಾದಾಗ ನೀಲಿ ಬಣ್ಣದ ಬೆಳಕು ಹರಡಿತು. ಈ ದೀಪವನ್ನು ಒಮ್ಮೆ ಮಾತ್ರ ಬಳಸಲು ಸಾಧ್ಯವಾಗುತ್ತದೆ. ರಾಸಾಯನಿಕ ಮುಗಿದ ಬಳಿಕ ಮತ್ತೆ ಹೊಸದಾಗಿ ರಾಸಾಯನಿಕವನ್ನು ತುಂಬಿಸಬೇಕು, ಮತ್ತೆ ರಕ್ತ ಹರಿಸಬೇಕು. ಇಲ್ಲದಿದ್ದರೆ ದೀಪ ಉರಿಯುವುದಿಲ್ಲ.
ಇಂದು ನಾವು ಸ್ವಿಚ್ ಅದುಮಿದರೆ ಸಾಕು, ಮನೆಯಲ್ಲಿ ದೀಪಗಳು ಉರಿಯುತ್ತವೆ. ನಮ್ಮದೇ ವೆಚ್ಚದಲ್ಲಿ ವಿದ್ಯುತ್ ಬರುವಂತಿದ್ದರೆ ಹೇಗಾದೀತು? ರಕ್ತ ಹೆಚ್ಚು ಹರಿಸಿದರೆ ವ್ಯಕ್ತಿ ಸತ್ತು ಹೋಗುತ್ತಾನೆ. ಜಗತ್ತಿಗೆ ವಿದ್ಯುತ್ತಿನ ಮೌಲ್ಯ ಎಂಥಾದ್ದು ಎಂಬುದನ್ನು ತೋರಿಸಿಕೊಡಲು ಈ ಪ್ರಯೋಗ ಮಾಡಿದ್ದೇನೆ ಎನ್ನುತ್ತಾರೆ ಥಾಮ್ಸನ್.

ಬೆಳಕು ಹೇಗೆ?
ಲುಮಿನಾಲ್ ಎಂಬ ರಾಸಾಯನಿಕವು ರಕ್ತದಲ್ಲಿನ ಕಬ್ಬಿಣದ ಅಂಶದ ಜೊತೆಗೆ ರಾಸಾಯನಿಕ ಕ್ರಿಯೆಗೆ ಒಳಗಾಗುತ್ತದೆ. ತಾಮ್ರ ಮತ್ತು ಇತರ ಕೆಲವು ಲೋಹಗಳ ಜೊತೆಗೂ ಲುಮಿನಾಲ್ ರಾಸಾಯನಿಕ ಕ್ರಿಯೆಗೆ ಒಳಗಾಗುತ್ತದೆ. ಲುಮಿನಾಲ್  ರಕ್ತದ ಜೊತೆಗೆ ರಾಸಾಯನಿಕ ಕ್ರಿಯೆಗೆ ಒಳಗಾದಾಗ ನೀಲಿ ಬಣ್ಣದ ಪ್ರಕಾಶಮಾನ ಬೆಳಕು ಹೊಮ್ಮಿಸುತ್ತದೆ.

ಬೇಕಿತ್ತೇ ಇದು?
ಜನರಿಗೆ ಅರಿವು ಮೂಡಿಸುವುದಕ್ಕೆ ಎಂದು ಹೇಳಿದರೂ ಇಂಥ ಪ್ರಯೋಗಗಳು ಅಪಾಯಕಾರಿಯಾಗಿ ಪರಿಣಮಿಸುವ ಸಾಧ್ಯತೆಯೇ ಹೆಚ್ಚು. ಈಗಾಗಲೇ ನಮ್ಮಲ್ಲಿ ವಿದ್ಯುತ್ನ ತೀವ್ರ ಅಭಾವವಿದೆ. ಮುಂದೊಂದು ದಿನ ವಿದ್ಯುತ್ಗೆ ಯಾವುದೇ ಸಂಪನ್ಮೂಲ ಇಲ್ಲದೇ ಇರುವಂಥ ಪರಿಸ್ಥಿತಿ ಬಂತು ಎಂದಾದರೆ ಏನಾದೀತು? ಅದೆಷ್ಟೇ ಕಠಿಣ ಕಾನೂನುಗಳಿದ್ದರೂ ಈ ಜಗತ್ತಿನಲ್ಲಿ ಅಪರಾಧಗಳಿಗೇನೂ ಕೊನೆಯಿಲ್ಲ. ಇಂತಿರುವಾಗ ವಿದ್ಯುತ್ತೇ ಇಲ್ಲದಿರುವಂಥ ಪರಿಸ್ಥಿತಿಯಲ್ಲಿ ಲುಮಿನಾಲ್ ರಾಸಾಯನಿಕದಿಂದ ವಿದ್ಯುತ್ ಉತ್ಪಾದಿಸುವುದಕ್ಕಾಗಿಯೇ ಕೊಲೆಗಳು ನಡೆದರೆ?

ಅಂಥ ಪರಿಸ್ಥಿತಿ ಬರಲಿಕ್ಕಿಲ್ಲ ಎಂದು ವಾದಿಸುವವರು ಹಲವು ಜನರಿದ್ದಾರೆ. ಆದರೆ ಯಾವುದನ್ನೂ ಏಕಾಏಕಿ ಸರಿ ಎಂದು ಒಪ್ಪಿಕೊಳ್ಳುವುದಕ್ಕಾಗುವುದಿಲ್ಲ. ಆಟಂ ಬಾಂಬ್ ಸಂಶೋಧನೆ ಮಾಡುವಾಗಲೂ ಇಂಥದ್ದೇ ಸ್ಥಿತಿ ಎದುರಾಯಿತು. ನೀಲ್ಸ್ ಬೋರ್, ವಾರ್ನರ್ ಹಿಸೆನ್ ಬರ್ಗ್ ಮೊದಲಾದ ಖ್ಯಾತನಾಮ ವಿಜ್ಞಾನಿಗಳು ಆಟಂ ಬಾಂಬ್ ಸಂಶೋಧನೆಯನ್ನು ತೀವ್ರವಾಗಿ ಖಂಡಿಸಿದರು. ಜರ್ಮನಿಯಲ್ಲಿ ಹಿಟ್ಲರ್ ಹಲವಾರು ವಿಜ್ಞಾನಿಗಳನ್ನು ಕೂಡಿಹಾಕಿ ಅವರಿಂದ ಆಟಂ ಬಾಂಬ್ ಸಂಶೋಧನೆ ಮಾಡಿಸುತ್ತಿದ್ದ. ಆದರೆ ಬುದ್ಧಿವಂತ ವಿಜ್ಞಾನಿಗಳು ಮುಂದೆ ಆಟಂ ಬಾಂಬ್ ಜಗತ್ತಿಗೆ ಮಾರಕವಾಗಬಹುದು ಮತ್ತು ಹಿಟ್ಲರ್ನಂಥವರ ಕೈಗೆ ಅದು ಸಿಕ್ಕಿದರೆ ವಿಧ್ವಂಸಗಳೇ ನಡೆಯಬಹುದು ಎಂದೆಣಿಸಿ ಆಟಂ ಬಾಂಬ್ ಸಂಶೋಧನೆಯ ಪ್ರಕ್ರಿಯೆಯನ್ನು ನಿಧಾನಗೊಳಿಸಿದರು. ಆದರೆ ಬೇಗನೆ ಆಟಂ ಬಾಂಬ್ ಸಿದ್ಧಪಡಿಸುವಂತೆ ಒತ್ತಡ ಎದುರಾಗುತ್ತಲೇ ಇತ್ತು. ಇಂಥ ಸ್ಥಿತಿಯಲ್ಲಿ ನೀಲ್ಸ್ ಬೋರ್ ಜರ್ಮನಿಯಿಂದ ಸ್ವೀಡನ್ಗೆ ಪಲಾಯನ ಮಾಡಿದ್ದ.

ದುರದೃಷ್ಟ ನೋಡಿ, ಅಮೆರಿಕದಲ್ಲಿದ್ದ ವಿಜ್ಞಾನಿಗಳು ಆಟಂ ಬಾಂಬ್ ಕಂಡು ಹಿಡಿದು, ಅದನ್ನು ಜಪಾನಿನ ಹಿರೋಶಿಮಾ ಮತ್ತು ನಾಗಾಸಾಕಿಗಳ ಮೇಲೆ ಪ್ರಯೋಗ ಮಾಡಿದರು. ಒಂದು ವೇಳೆ ಅಂದು ಆಟಂ ಬಾಂಬ್ ಸಂಶೋಧನೆ ಮಾಡದೇ ಇರುತ್ತಿದ್ದರೆ ಇಂದು ಅಣುಯುದ್ಧದ ಭೀತಿ ಇರುತ್ತಿರಲಿಲ್ಲ. ದೇಶ ದೇಶಗಳು ಅಣ್ವಸ್ತ್ರಗಳನ್ನು ಸಂಗ್ರಹಿಸಲು ನಾಮುಂದು ತಾಮುಂದು ಅಂತ ಪೈಪೋಟಿ ನಡೆಸುತ್ತಿರಲಿಲ್ಲ. ತನ್ನ ಬಳಿ ಮಾತ್ರ ಅಣ್ವಸ್ತ್ರ ಇರಬೇಕು, ಬೇರೆ ದೇಶಗಳು ತನಗೆ ವಿಧೇಯರಾಗಿರಬೇಕು ಎಂದು ಅಮೆರಿಕ ಸಂಚು ರೂಪಿಸುತ್ತಿರಲಿಲ್ಲ.
ಇದನ್ನೇ ಬೇರೆ ಸಂಶೋಧನೆಗಳಿಗೂ ಅನ್ವಯಿಸಿ ನೋಡಿ, ಕೆಲವೊಂದು ಸಂಶೋಧನೆಗಳು ಎಷ್ಟೊಂದು ಅಪಾಯಕಾರಿ ಎಂಬುದು ಅರ್ಥವಾಗುತ್ತದೆ.
 

Comments

  1. ಬರೀ ಬುದ್ಧಿಯೊಂದಿದ್ದರೆ ಸಾಲದು.ಇದು ಎಷ್ಟು ಸರಿ ಎಂಬ ವಿವೇಚನೆಯೂ(wisdom)ಬೇಕು.ಇಂತಹ ವೈಜ್ಞಾನಿಕ ಪ್ರಯೋಗಗಳ ಹಿಂದೆ ವಿವೇಚನೆ ಏನಾದರೂ ಇದೆಯೇ?ಇದರಿಂದ ಸರ್ವ ಹಿತವೊಂದು ಉಂಟೆ ಎಂಬ ಪ್ರಶ್ನೆಯನ್ನೂ ವಿಜ್ಞಾನಿಗಳು ಕೇಳಿಕೊಳ್ಳುವುದು ಒಳ್ಳೆಯದು.ಉತ್ತಮ ಲೇಖನ.ಧನ್ಯವಾದಗಳು.ನನ್ನ ಬ್ಲಾಗಿಗೂ ಭೇಟಿಕೊಡಿ.ನಮಸ್ಕಾರ.

    ReplyDelete
  2. @ Dr.D.T.Krishna Murthy and M.D.subramanya Machikoppa-
    ಹೌದು, ಮನುಷ್ಯ ಬುದ್ಧಿಗೆ ವಿವೇಚನೆ ಸ್ವಲ್ಪ ಕಡಿಮೆ. ನಗರೀಕರಣ ಎಂಬ ಹೆಸರಿನಲ್ಲಿ ಅರಣ್ಯ ನಾಶ ಮಾಡಿದ್ದರ ಫಲ ಈಗ ಕಾಣಿಸತೊಡಗಿದೆ. ಮಹಾಯುದ್ಧದಲ್ಲಿ ಗೆಲುವು ಸಾಧಿಸುವ ಮಹತ್ವಾಕಾಂಕ್ಷೆಯಿಂದ ಅನ್ವೇಷಣೆಗೊಂಡ ಅಣುಬಾಂಬ್ ಇಂದು ಜಗತ್ತಿನಲ್ಲಿ ಭೀತಿಯ ಸಾರ್ವಭೌಮತ್ವ ಸ್ಥಾಪನೆಗೆ ಕಾರಣವಾಗಿದೆ. ಇನ್ನಾದರೂ ವಿವೇಚನೆಯನ್ನು ನಮ್ಮ ತಲೆಯೊಳಗೆ ತುರುಕಿಕೊಳ್ಳದಿದ್ದರೆ ಇನ್ನೇನೇನೂ ಅನಾಹುತಗಳನ್ನು ಕಾಣಬೇಕಾಗುತ್ತದೆಯೇ?!

    ReplyDelete
  3. nice article.... ಅ೦ತಹ ಒ೦ದು ದಿನ ಬ೦ದರೂ ಬರಬಹುದು. ಯಾಕೆ೦ದರೆ ವಿವೇಚನೆ ಉಳ್ಳವರು ಅವರ ಪಾಡಿಗೆ ಅವರು ಇರುತ್ತಾರೆ, ಇಲ್ಲದವರು ಬಲವ೦ತವಾಗಿಯಾದರೂ ತಮಗೆ ಬೇಕಾದ ಕೆಲಸಗಳನ್ನು ಮಾಡಿಸಿಕೊಳ್ಳುತ್ತಾರೆ.

    ReplyDelete
  4. ವಿದ್ಯೆಯ ಜತೆಗೇ ಇರಬೇಕಾದ ವಿವೇಕ ಇಲ್ಲದೇ ಹೋದಾಗ ಅಪಾಯಕಾರೀ ಸಂಶೋಧನೆಗಳು ಸಂಭವಿಸುತ್ತವೆ.. ಈ ಸಂಶೋಧನೆ ಅವಿವೇಕದ್ದು ಮಾತ್ರವಲ್ಲ ಖಂಡನಾರ್ಹ ಕೂಡ. ಮುಂದೊಂದು ದಿನ ಬಡ ಜನರು ವಿದ್ಯುತ್ ಬೇಕಾದವರಿಗೆ ರಕ್ತ ಮಾರುವ ವ್ಯಾಪಾರ ಶುರುವಾಗಬಹುದಾದ ೆಲ್ಲಾ ಸಾಧ್ಯತೆಗಳೂ ಇವೆ ಮತ್ತು ಇಂಥದ್ದೇ ಇನ್ನೆಷ್ಟು ಅಪಾಯಗಳೋ...

    ಅಂದ ಹಾಗೆ "ಮನುಷ್ಯ ಬುದ್ಧಿಗೆ ವಿವೇಚನೆ ಸ್ವಲ್ಪ ಕಡಿಮೆ" ಅಲ್ಲ ಪೂರ್ತಿ ಕಡಿಮೆ ಅನಿಸುತ್ತೆ ಬಹಳಷ್ಟು ಸಲ...

    ReplyDelete
  5. ನಿಜವಾಗ್ಲೂ ತುಂಬಾ ಉತ್ತಮ ಮಾಹಿತಿ...

    ಕೆಲವೊಂದು ಸಂಶೋಧನೆಗಳ ಹೆಸರಲ್ಲಿ ಮನುಷ್ಯ ಮನುಷ್ಯನನ್ನೇ ಹೊಂಚು ಹಾಕಿ ತಿನ್ನುವ ಕ್ರೂರ ಬೆಳವಣಿಗೆ ಇತ್ತೀಚೆಗೆ ಭಯ ಹುಟ್ಟಿಸುತ್ತದೆ. ಸಂಶೋಧನೆಗಳು ಬೇಕು.. ಆದರೆ ಅದೂ ಯಾವುದೇ ಪ್ರಾಣಿ, ಪಕ್ಷಿ ಜೊತೆಗೆ ಮನುಷ್ಯನ ಮುಂದಿನ ಪೀಳಿಗೆಗೆ ಅಪಾಯವನ್ನುಂಟು ಮಾಡಬಾರದಲ್ಲವೇ... ಮನುಷ್ಯನಲ್ಲಿರುವ ಕುತೂಹಲದ ಭಾವನೆಯೇ ಮನುಷ್ಯನ ಪೀಳಿಗೆಯ ವಿನಾಶದ ಹಾದಿಯನ್ನು ತೊಡುವುದು ಎಷ್ಟು ಸರಿ...? ಎಂಬುದನ್ನು ಎಲ್ಲರೂ ಅಲೋಚಿಸಬೇಕಿದೆ.

    ವಿದ್ಯಾ ಇವ೯ತ್ತೂರು

    ReplyDelete
  6. ಮಾನ್ಯ ವಿಷ್ಣು ಪ್ರಿಯರೇ... ನಿಮ್ಮ ಲೇಖನಗಳು ಮಾಹಿತಿ ಪೂರ್ಣವಾಗಿ ಹೊರಬರುತ್ತಿವೆ. ಮೇಲೆ ತಿಳಿಸಿರುವ ಲೂಮಿನಾಲ್ ಮತ್ತು ರಕ್ತದ ಮಿಶ್ರಣ ಪ್ರಕ್ರಿಯೆಯನ್ನು ಬಹಳ ಹಿಂದಿನಿಂದಲೂ ಫ್ಹೊರೆನ್ಸಿಕ್ ಅಧ್ಯಯನದಲ್ಲಿ ಹೇರಳವಾಗಿ ಬಳಸುತಿದ್ದರು. ಘಟನಾ ಸ್ಥಳದಿಂದ ವಶಪಡಿಸಿಕೊಂಡ ವಸ್ತುಗಳಮೇಲೆ ಲುಉಮಿನಾಲ್ ಸಿಂಪಡಣೆಯಿಂದ ಸಾದಾರಣ ಕಣ್ಣಿಗೆ ಗೋಚರಿಸದ ರಕ್ತದ ಕಲೆ ಸ್ಪಷ್ಟವಾಗುತ್ತದೆ. ಇದೊಂದು ಉತ್ತಮ ತಂತ್ರ. ಆದರೆ ಈಗ ಅಣಕು ಪ್ರದರ್ಶನಕ್ಕಾಗಿ ಬಳಕೆಯಾಗಿದೆ. ವಿಜ್ಞಾನದ ಮಟಕ್ಕೆ ನಾವು ಏರದೇ, ಅದನ್ನೇ ನಮ್ಮ ವ್ಯಕ್ತಿತ್ವಕ್ಕೆ ತಕ್ಕಂತೆ ಬಳಸುತ್ತೆವೆ.

    ReplyDelete

Post a Comment

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು