ಗ್ರಹಗಳು ಮಾರಾಟಕ್ಕಿವೆ...!!

ಒಬ್ಬ ತಾಯಿಯ ಗರ್ಭ ಶಿಶುವಿನ ಬೆಳವಣಿಗೆ ಮತ್ತು ಜನ್ಮಕ್ಕೆ ಯೋಗ್ಯವಾಗಿದೆ ಎಂಬುದಷ್ಟೇ ಮುಖ್ಯವಾಗುವುದಿಲ್ಲ. ಆ ಗರ್ಭದಲ್ಲಿ ಜೀವ ಚಿಗುರಬೇಕು. ಅಂತೆಯೇ ಗ್ರಹಗಳು.

ಓಹ್, ಒಂದು ಪುಟ್ಟ ಭೂಮಿ ನಮ್ಮಲ್ಲಿರುತ್ತಿದ್ದರೆ, ಚಿಕ್ಕದಾದರೂ ಚೊಕ್ಕದಾದ ಮನೆಯೊಂದನ್ನು ಕಟ್ಟಿ ಹಾಯಾಗಿರುತ್ತಿದ್ದೆವು ಎಂದು ಹಲುಬುತ್ತಾ ಕೂರುವವರಿಗೆ ಬರವಿಲ್ಲ. ಬೆಂಗಳೂರಿನಂಥ ನಗರಗಳಲ್ಲಿ ಮೂರಡಿ ಆರಡಿ ಜಾಗ ಸಿಗುವುದೇ ಕಷ್ಟ, ಇಂತಿರುವಾಗ ಮನೆ ಕಟ್ಟಲು ಬೇಕಾದಷ್ಟು ಜಾಗ ಎಲ್ಲಿ ಸಿಕ್ಕೀತು? ಹಳ್ಳಿಗಳಲ್ಲಿ ಕೂಡಾ ಈಗ ಪಟ್ಟಣದ ಸ್ಥಿತಿ ಬಂದುಬಿಟ್ಟಿದೆ...

ಒಂದು ಜಾಗ ಖರೀದಿಸುವುದಕ್ಕೆ ಹೊರಟರೆ ಎಷ್ಟೆಲ್ಲ ಯೋಚನೆಗಳು ಹುಟ್ಟಿಕೊಳ್ಳುತ್ತವೆ! ಆದರೆ ಜಾಗ ಖರೀದಿ ವಿಚಾರ ಈಗ ಹೊಸ ಆಯಾಮವನ್ನು ಪಡೆದುಕೊಳ್ಳುತ್ತಿದೆಯೇನೋ ಎಂಬ ಶಂಕೆ ಶುರುವಾಗಿದೆ. ಯಾಕೆ ಗೊತ್ತಾ? ನಮ್ಮ ಬ್ರಹ್ಮಾಂಡದಲ್ಲಿ ಇರುವಂಥ ಹಲವಾರು ವಾಸಯೋಗ್ಯ ಗ್ರಹಗಳಲ್ಲಿನ ಜಾಗ ಈಗ ಮಾರಾಟಕ್ಕಿದೆ. ಅಚ್ಚರಿ ಪಡಬೇಡಿ, ಶೀಘ್ರದಲ್ಲಿಯೇ ನಮ್ಮ ಜನರು ಭೂಮಿಯನ್ನು ಬಿಟ್ಟು ಮತ್ತಾವುದೋ ಆಕಾಶಕಾಯಗಳಿಗೆ  ಗುಳೇ ಹೊರಡುವುದು ಖರೇ! ಮುಂದೊಂದು ದಿನ ಸೂಪರ್ ಭೂಮಿಯಲ್ಲಿ ಜಾಗ ಹೊಂದಿರುವ, ಭವ್ಯ ಬಂಗಲೆ ಕಟ್ಟಿರುವ ಹುಡುಗನಿಗೆ ಮಾತ್ರ ಹುಡುಗಿ ಕೊಡುವುದು ಎಂಬ ಷರತ್ತನ್ನು ಹೆಣ್ಣು ಹೆತ್ತವರು ಹೇರಿದರೆ ಗಂಡು ಹೆತ್ತವರು ಸೂಪರ್ ಭೂಮಿಯಲ್ಲಿ ಜಾಗ ಖರೀದಿಸುವುದಕ್ಕೆ ಪಡಿಪಾಟಲು ಪಡುವಂಥ ಪರಿಸ್ಥಿತಿ ಬಂದೀತು!
ಪ್ರಸ್ತುತ ವಿಜ್ಞಾನಿಗಳು ಹೇಳುತ್ತಿರುವುದೂ ಇದೇ ವಿಚಾರಕ್ಕೆ ಪುಷ್ಠಿ ಕೊಡುವಂಥ ಮಾತು. ಅಂದರೆ ಈಗಾಗಲೇ ಹಲವಾರು ವಾಸಯೋಗ್ಯ ಗ್ರಹಗಳನ್ನು ನಮ್ಮ ಕ್ಷೀರಪಥ ಗೆಲಾಕ್ಷಿ (ಆಕಾಶಗಂಗೆ)ಯಲ್ಲಿಯೇ ಪತ್ತೆ ಮಾಡಲಾಗಿದೆ. ಈ ಗ್ರಹಗಳು ವಾಸಯೋಗ್ಯವಾಗಿಯೇ ಇರಬೇಕು ಎಂದಾದರೆ ಅಲ್ಲಿ ಜೀವಿಗಳು ನೆಲೆಸಬೇಕು. ಹಂತ ಹಂತವಾಗಿ ಅಲ್ಲಿ ಜೀವ ವಿಕಸನವಾಗಬೇಕು. ಈಗಿಂದೀಗಲೇ ನಾವು ವಾಸಯೋಗ್ಯ ಗ್ರಹಗಳಲ್ಲಿ ವಾಸಿಸುವ ಸಾಮರ್ಥ್ಯ ಹೊಂದಿರುವ ಕೆಲವೊಂದು ಜೀವಿಗಳನ್ನು ಕಳುಹಿಸಿ, ಅಲ್ಲಿ ಅವುಗಳು ಜೀವಿಸುವುದಕ್ಕೆ ಬೇಕಾದ ಏರ್ಪಾಟು ಮಾಡಿದೆವು ಎಂದಾದರೆ ಮುಂದೊಂದು ದಿನ ಅಲ್ಲಿ ಮನುಷ್ಯರು ಕೂಡಾ ಬದುಕುವುದಕ್ಕೆ ಬೇಕಾದ ವಾತಾವರಣ ಅಭಿವೃದ್ಧಿಯಾದೀತು. ಇಲ್ಲವಾದಲ್ಲಿ ಕಾಲಾಂತರದಲ್ಲಿ ವಾಸಯೋಗ್ಯ ಸ್ಥಿತಿ ಬದಲಾಗಿ, ಆ ಗ್ರಹಗಳು ವಾಸಕ್ಕೆ ಯೋಗ್ಯವಲ್ಲದೇ ಹೋಗಬಹುದು ಎಂಬ ಎಚ್ಚರಿಕೆಯನ್ನು ಕೊಡುತ್ತಿದ್ದಾರೆ ವಿಜ್ಞಾನಿಗಳು.

ಅರಳಬೇಕು ಜೀವ
ಒಂದು ಗ್ರಹದಲ್ಲಿ ವಾಸಯೋಗ್ಯ ಸ್ಥಿತಿ ಇದ್ದರೆ ಸಾಲದು. ಅಲ್ಲಿ ಜೀವ ಅರಳಬೇಕು. ಒಬ್ಬ ತಾಯಿಯ ಗರ್ಭ ಶಿಶುವಿನ ಬೆಳವಣಿಗೆ ಮತ್ತು ಜನ್ಮಕ್ಕೆ ಯೋಗ್ಯವಾಗಿದೆ ಎಂಬುದಷ್ಟೇ ಮುಖ್ಯವಾಗುವುದಿಲ್ಲ. ಆ ಗರ್ಭದಲ್ಲಿ ಜೀವ ಚಿಗುರಬೇಕು. ವೀರ್ಯಾಣು, ಅಂಡಾಣುಗಳು ಗರ್ಭದೊಳಗೆ ಮಿಲನಗೊಂಡು, ಅದು ಹೊಸತೊಂದು ಜೀವವಾಗಿ ಸೃಷ್ಟಿಯಾಗಬೇಕು. ಆ ರೀತಿ ಸೃಷ್ಟಿಯಾದ ಜೀವದಿಂದ ಇನ್ನಷ್ಟು ಜೀವಗಳ ಸೃಷ್ಟಿಯಾಗಬೇಕು. ಅದುವೇ ಜೀವ ವಿಕಸನ.

ಅಂತೆಯೇ ಗ್ರಹಗಳು. ವಾಸಯೋಗ್ಯ ಪರಿಸರ ಹೊಂದಿರುವ ಗ್ರಹಗಳಲ್ಲಿ ವಾಸಿಸುವುದಕ್ಕೆ ಶುರು ಮಾಡಬೇಕು. ಅಲ್ಲಿ ಗಿಡ-ಮರಗಳು, ತರು-ಲತೆಗಳು ಚಿಗುರಿ ಸೊಂಪಾಗಿ ಬೆಳೆದು, ಕಿಚಿಗುಡುವ ಖಗಸಂಕುಲಕ್ಕೆ ಆಸರೆಯಾಗಿ ನಿಲ್ಲಬೇಕು. ಅಲ್ಲೊಂದು ಕಾಡು ನಿರ್ಮಾಣವಾಗಿ, ಅಲ್ಲಿ ಕಾಡಿನಲ್ಲಿ ವಾಸಿಸುವಂಥ ಪ್ರಾಣಿಕುಲಗಳು ಬೆಳೆಯಬೇಕು.
ಇಷ್ಟಾದ ಮೇಲೆ ಒಂದು ಪ್ರಶ್ನೆ ಕಾಡುತ್ತದೆ- ಎಲ್ಲ ರೀತಯಲ್ಲಿಯೂ ಜೀವ ಸಂಕುಲ ವಿಕಾಸವಾಗಿ, ಮನುಷ್ಯನೆಂಬೋ ಜೀವಿ ವಾಸಿಸುವುದಕ್ಕೆ ಆ ಗ್ರಹ ಅನುಕೂಲವಾಯಿತು ಎಂದಾದ ತಕ್ಷಣ ಭೂಮಿಯಲ್ಲಿ ಮಾಡಿದಂತೆ ಮನುಷ್ಯ ಪ್ರಕೃತಿಯ ಮೇಲೆ ಅತ್ಯಾಚಾರ ಮಾಡಬೇಕೇ?

ಖಂಡಿತವಾಗಿಯೂ ಆಗುವುದು ಅದುವೇ!
ನಿಸರ್ಗ ಬೆಳೆದು ನಿಂತಾಗ ಅಲ್ಲಿನ ಉಷ್ಣಾಂಶ ತಗ್ಗುತ್ತಾ ಬರುತ್ತದೆ. ತಾವು ಸಹಿಸಿಕೊಳ್ಳಲು ಸಾಧ್ಯವಿರುವ ವಾತಾವರಣದಲ್ಲಿ ಒಂದೊಂದೇ ಜೀವಿ ಬೆಳೆಯುತ್ತದೆ. ಮನುಷ್ಯ? ಅಲ್ಲಿನ ನಿಸರ್ಗದ ಮೇಲೆ ಆಕ್ರಮಣ ಮಾಡಿ, ಗಿಡ ಮರಗಳನ್ನು ಕಡಿದು ಕಾಂಕ್ರೀಟು ಕಾಡನ್ನು ಬೆಳೆಸುತ್ತಾನೆ. ಅಲ್ಲಿಗೆ ಆ ಗ್ರಹದ ಉಷ್ಣಾಂಶ ಮತ್ತೆ ಏರುಮುಖವಾಗುತ್ತದೆ, ಪ್ರಸ್ತುತ ಭೂಮಿಯಲ್ಲಿ ಆಗಿರುವುದೇ ಇದು.

ಎಚ್ಚರಿರಬೇಕು
ಯಾವುದೋ ಒಂದು ಗ್ರಹ ವಾಸಕ್ಕೆ ಯೋಗ್ಯವಾಗಿದೆ ಎಂದಾಕ್ಷಣ ಅಲ್ಲಿ ಜೀವಸಂಕುಲವನ್ನು ಬೆಳೆಸಬೇಕು ಎಂಬ ಮಾತು ಒಪ್ಪತಕ್ಕದ್ದು. ಆದರೆ ಈ ಮನುಷ್ಯನನ್ನು ತೃಣಮಾತ್ರಕ್ಕೂ ನಂಬುವುದಕ್ಕೆ ಸಾಧ್ಯವಿಲ್ಲ. ನಾನು ಶ್ರೀಮಂತನಾಗಬೇಕು, ದೊಡ್ಡ ಮನುಷ್ಯ ಎಂದೆನಿಸಿಕೊಳ್ಳಬೇಕು ಎಂಬ ಬಯಕೆಯ ಭರದಲ್ಲಿ ತನ್ನ ಮನೆಗೆ ಕೊಳ್ಳಿಯಿಟ್ಟುಕೊಳ್ಳುತ್ತಿದ್ದಾನೆ. ಹೀಗಿರುವಾಗ ಅನ್ಯರ ಮನೆಗೆ (ಅನ್ಯಗ್ರಹಗಳು ನಮಗೆ ಅನ್ಯರ ಮನೆಗಳಿದ್ದಂತೆ!) ಕಿಚ್ಚಿಡುವುದಿಲ್ಲ ಎಂದು ಯಾವ ಖಾತರಿ ಕೊಡೋಣ?
ಅರಗಿನ ಅರಮನೆಯನ್ನು ಕಟ್ಟಿಕೊಂಡು ಅದರೊಳಗೆ ಬೆಂಕಿ ಹಚ್ಚಿ ಚಳಿ ಕಾಯಿಸುವುದೋ, ಅಡುಗೆ ಮಾಡುವುದೋ ಮಾಡಿದರೆ ಸುಟ್ಟು ಹೋಗುವುದು ನಾವು ಕಟ್ಟಿನ ಅರಮನೆಯೇ ಎಂಬುದನ್ನು ನಾವು ಅರಿಯದಾಗಿದ್ದೇವೆ.
ಹೋಗೋಣ, ಅನ್ಯಗ್ರಹದಲ್ಲಿ ಜೀವಸಂಕುಲವನ್ನು ಬೆಳೆಸುವುದ ನಮಗೆ ದೊಡ್ಡ ಸವಾಲಿನ ವಿಚಾರವೇನೂ ಅಲ್ಲ. ಆದರೆ ಭೂಮಿಯಲ್ಲಿ ಪ್ರಕೃತಿಯ ಮೇಲೆ ಅತ್ಯಾಚಾರ ಮಾಡಿದಂತೆ ಅಲ್ಲಿಯೂ ಮಾಡುವುದು ಬೇಡ ಎಂಬುದಷ್ಟೇ ನಮ್ಮ ಕಳಕಳಿ.

ಹಾಂ, ಒಂದು ಮಾತು- ನಮ್ಮ ಕ್ಷೀರಪಥದಲ್ಲಿಯೇ ವಾಸಯೋಗ್ಯ ಗ್ರಹಗಳಿವೆ. ಅಲ್ಲಿಗೆ ಪ್ರಯಾಣಿಸಬಹುದು ಎಂದು ಹೇಳಿದ ತಕ್ಷಣ ಗಂಟುಮೂಟೆ ಕಟ್ಟಿಕೊಂಡು ಹೊರಟುಬಿಡಬೇಡಿ. ಈ ಗ್ರಹಗಳೆಲ್ಲ ನಮಗಿಂತ ಹಲವು ಕೋಟಿ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿವೆ. ಕೆಲವೊಂದು ವಾಸಯೋಗ್ಯ ಗ್ರಹಗಳಿಗೆ ಹೋಗುವುದಕ್ಕೆ ಅದೆಷ್ಟು ನೂರು ವರ್ಷಗಳು ಬೇಕಾಗಬಹುದು ಎಂಬುದನ್ನು ಲೆಕ್ಕ ಹಾಕಿದರೆ, ನಮ್ಮ ಕಾಲಕ್ಕೆ ಆಗುವುದಲ್ಲ ಬಿಡಿ, ಎಂಬ ನಿರಾಶೆಯ ಉದ್ಗಾರ ನಿಮ್ಮ ಬಾಯಿಂದ ಹೊರಬಿದ್ದೀತು! ಜೀವ ಸಂಕುರಗಳನ್ನು ಕಳುಹಿಸಿ ಅಲ್ಲಿಯೇ ಅವುಗಳು ವಿಕಸನ ಹೊಂದುವಂತೆ ಮಾಡಬಹುದು ಅಷ್ಟೆ. ನಾವೇ ನೇರವಾಗಿ ಅಲ್ಲಿಗೆ ಹೋದರೂ ಬದುಕುವುದಕ್ಕೆ ಸಾಧ್ಯವಾಗದು!

Comments

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು