ಗಣೇಶ ರೂಪಕಲ್ಪನ ಕಾವ್ಯ

(ಈ ಕೀರ್ತನೆಯ ಸುಮಧುರ ಗಾನ ಕೇಳಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ....

ಮೂಢಮನವನೇಳಿಸಿ ಜ್ಞಾನವೃದ್ಧಿಯ ಮಾಡುಬಾ
ದಿವ್ಯಮೂರ್ತಿ ಬುದ್ಧೀಶನೇ ಜೈ ಜೈ ಗಣೇಶ ಪಾಹಿಮಾಂ ||ಪ||

ಗಕಾರ ರೂಪ ಪೂರ್ವದಿ
ಪಾದ ಪೂಜೆಯ ಮಾಡುವೆ
ಕಾಲಾತೀತದ ಕಾಲ್ಗಳೋ
ಜೈ ಜೈ ಗಣೇಶ ಪಾಹಿಮಾಂ ||೧||

ಗರ್ವ ಬಂಡಾಟ ಗೀಳೇಕೆ
ಭೂಮಿಯಲೊಂದು ಪಾದವು
ಪರತತ್ವದೊಳೇ ಮುಕ್ತಿ
ಜೈ ಜೈ ಗಣೇಶ ಪಾಹಿಮಾಂ ||೨||

ಪಾದವಿನ್ನೊಂದೆತ್ತರದಿ
ಕ್ಷರಲೌಕಿಕ ಬೇಡವೋ
ಬ್ರಹ್ಮವಕ್ಷಯ ಕಾಣಿಸೋ
ಜೈ ಜೈ ಗಣೇಶ ಪಾಹಿಮಾಂ ||೩||

ಪಾದ ಪಾದದ ರೂಪವು
ಕ್ಷಯಾಕ್ಷಯದ ಅಂತರ
ಪಾದ ತಿಳಿಯೆ ಸ್ವರ್ಗವು
ಜೈ ಜೈ ಗಣೇಶ ಪಾಹಿಮಾಂ ||೪||

ಮಧ್ಯಮವು ಅಕಾರವು
ಭವ್ಯ ಬ್ರಹ್ಮಾಂಡ ರೂಪವು
ಅನಂತಾಖಂಡ ಸಾದೃಶ್ಯ
ಜೈ ಜೈ ಗಣೇಶ ಪಾಹಿಮಾಂ ||೫||

ನಾಗಪಾಶದಿ ಬಂಧಿತ
ವಿಶ್ವಾಶ್ವಾಕ್ಷದೆಲ್ಲ ಕಣ
ಪಾಶದಾಚೆ ಮುಕ್ತಿಲೋಕ
ಜೈ ಜೈ ಗಣೇಶ ಪಾಹಿಮಾಂ ||೬||

ಭವದಿಚ್ಛೆಯೆಲ್ಲವಿದು
ಭಕ್ಷ್ಯಭೋಜ್ಯ ಲಡ್ಡುಗಳು
ವಾಂಛೆ ತ್ಯಜಿಸೆ ಬ್ರಹ್ಮೈಕ್ಯ
ಜೈ ಜೈ ಗಣೇಶ ಪಾಹಿಮಾಂ ||೭||

ಚಿತ್ತ ಮರ್ಕಟ ಬಂಧಕೆ
ಪರಶು ಪಾಶದಂಕುಶ
ದಿವ್ಯ ಹೃದಯ ತುಂಬಿಕೋ
ಜೈ ಜೈ ಗಣೇಶ ಪಾಹಿಮಾಂ ||೮||

ಭವ್ಯ ರೂಪವ ನೋಡಿದೆ
ಮಿಥ್ಯ ಮೋಹವೆಲ್ಲ ಕಳೆ
ಭವಸಾಗರ ದಾಟಿಸೋ
ಜೈ ಜೈ ಗಣೇಶ ಪಾಹಿಮಾಂ ||೯||

ಅನುಸ್ವಾರಾಂತ ರೂಪವು
ಶೂನ್ಯದೊಳು ಸರ್ವೈಕವೋ
ಋಣ ಧನದ ಹಂಗೇಕೋ
ಜೈ ಜೈ ಗಣೇಶ ಪಾಹಿಮಾಂ ||೧೦||

ಆರೋಗ್ಯವದು ಭಾಗ್ಯವೋ
ನೆಮ್ಮದಿ ಮನ ಸಂತಸ
ಆನೆ ಮುಖದ ಸಂದೇಶ
ಜೈ ಜೈ ಗಣೇಶ ಪಾಹಿಮಾಂ ||೧೧||

ಶೂರ್ಪಕರ್ಣದಿ ಕೇಳಿಕೋ
ತೀಕ್ಷ್ಣ ನೇತ್ರದಿ ನೋಡಿಕೋ
ಜ್ಞಾನವೃದ್ಧಿಯ ಮಾಡಿಕೋ
ಜೈ ಜೈ ಗಣೇಶ ಪಾಹಿಮಾಂ ||೧೨||

ದೀರ್ಘನಾಸಿಕದಿಂದಲಿ
ಸೂಕ್ಷ್ಮಗ್ರಾಹಿ ಸತ್ಯ ತಿಳಿ
ಬ್ರಹ್ಮಸತ್ಯವ ಕಾಣಿಸೋ
ಜೈ ಜೈ ಗಣೇಶ ಪಾಹಿಮಾಂ ||೧೩||

ಏಕದಂತ ವಕ್ರತುಂಡ
ಸರ್ವವೇಕೈಕ ಮಂಡಲ
ಏಕೈಕ್ಯದ ತತ್ವವಿದು
ಜೈ ಜೈ ಗಣೇಶ ಪಾಹಿಮಾಂ ||೧೪||

ವೇದಜ್ಞಾನವ ಕೇಳಿಕೋ
ಸಾಕ್ಷಾತ್ಕಾರವ ಮಾಡಿಕೋ
ಸಿದ್ಧಿ ಸೂಕ್ಷ್ಮದಿ ಸೂಕ್ಷ್ಮವೋ
ಜೈ ಜೈ ಗಣೇಶ ಪಾಹಿಮಾಂ ||೧೫||

ಬಿಂದುವುತ್ತರ ರೂಪವು
ಮೂಲವೆಂಬುದ ಬಿಂಬವೋ
ಬಿಂಬದಿ ಬಿಂದುವಾಗಿಸೋ
ಜೈ ಜೈ ಗಣೇಶ ಪಾಹಿಮಾಂ ||೧೬||

ಜ್ಞಾನಸಾಗರ ಬಿಂದುವಾ
ಚಿತ್ತ ಭಿತ್ತಿಗೆ ಅಂಟಿಸೋ
ದಿವ್ಯಬಿಂಬ ಮನ್ಮಂದಿರ
ಜೈ ಜೈ ಗಣೇಶ ಪಾಹಿಮಾಂ ||೧೭||

ವಾಹನವಾಗಿ ಮೂಷಿಕ
ಕಷ್ಟಕೋಟಲೆ ನಾಶಕ
ವಿಘ್ನ ಕಳೆವ ನಾಯಕ
ಜೈ ಜೈ ಗಣೇಶ ಪಾಹಿಮಾಂ ||೧೮||

ಕಷ್ಟ ಮೆಟ್ಟುತ ನಿಂತಾಗ
ಬಾಳಿಕ್ಷುರಸ ಧಾರೆಯು
ಮುಕ್ತಿಧಾಮಕೆ ಸೋಪಾನ
ಜೈ ಜೈ ಗಣೇಶ ಪಾಹಿಮಾಂ ||೧೯||

ಗೌರೀಪುತ್ರ ವಿಘ್ನೇಶನೇ
ಮಹಾಗಣಪ ಪಾಹಿಮಾಂ
ಕ್ಷಿಪ್ರಪ್ರಸಾದ ಹೇರಂಬ
ಜೈ ಜೈ ಗಣೇಶ ಪಾಹಿಮಾಂ ||೨೦||

ಪಯಣಿಗ ಕಲ್ಪನದೀ
ಕಾವ್ಯಪ್ರಿಯಗೆ ವಂದನೆ
ಅಕ್ಷರರೂಪ ಬ್ರಹ್ಮಜ್ಞ
ಜೈ ಜೈ ಗಣೇಶ ಪಾಹಿಮಾಂ ||೨೧||

- ಪ್ರಕಾಶ ಪಯಣಿಗ

Comments

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು