ಶನಿಯ ಚಂದಿರನಲ್ಲೂ ನೀರಿದೆ, ಎಲ್ಲೆಲ್ಲೂ ಇದೆ!


ಜೀವಿಗಳ ಪ್ರಮುಖ ಅಗತ್ಯವಾದ ನೀರು ಯಾವುದಾದರೂ ಕಾಯಗಳಲ್ಲಿದೆಯೇ? ಎಂಬ ಹುಡುಕಾಟ ನಡೆಯುತ್ತಿತ್ತು. ಈಗ ಶನಿಗ್ರಹದ ಅತಿದೊಡ್ಡ ಉಪಗ್ರಹ (ಚಂದ್ರ) ಟೈಟಾನ್ನಲ್ಲಿ ನೀರಿನ ಸಾಗರವೇ ಪತ್ತೆಯಾಗಿದೆ. ಪ್ರತಿಯೊಂದು ಕಾಯಗಳಲ್ಲಿಯೂ ನೀರಿನ ಅಸ್ತಿತ್ವ ಕಾಣಿಸುತ್ತಿದೆ ಎಂದರೆ ಈ ಬ್ರಹ್ಮಾಂಡದ ಯಾವ ಭಾಗಕ್ಕೆ ಹೋದರೂ ಅಲ್ಲಿ ನೀರಿನ ಅಸ್ತಿತ್ವ ಇರಲೇಬೇಕು. ಅದು ದ್ರವ ರೂಪದಲ್ಲಿಯೇ ಇರಬೇಕೆಂದಿಲ್ಲ. ಯಾವ ರೂಪವನ್ನಾದರೂ ಹೊಂದಿರಬಹುದು. 

ವೈಜ್ಞಾನಿಕ ಜಗತ್ತೇ ಹಾಗೆ, ಏನೋ ಒಂದು ವಿಚಾರ ಹೊಳೆದರೆ ಸಾಕು ಮತ್ತೆ ಅದರ ಸುತ್ತಲೇ ಈ ಜಗತ್ತು ಗಿರಕಿ ಹೊಡೆಯುತ್ತಿರುತ್ತದೆ. ಅಂಥದ್ದೇ ಒಂದು ಹುಡುಕಾಟ ಜೀವಜಗತ್ತಿನ ಬಗ್ಗೆ. ಭೂಮ್ಯೇತರ ಆಕಾಶಕಾಯಗಳಲ್ಲಿ ಜೀವಜಗತ್ತಿನ ಅಸ್ತಿತ್ವವಿದೆಯೇ? ಅಸ್ತಿತ್ವ ಹೊಂದಲು ಅವಕಾಶವಿದೆಯೇ? ಜೀವಿಗಳ ಪ್ರಮುಖ ಅಗತ್ಯವಾದ ನೀರು ಯಾವುದಾದರೂ ಕಾಯಗಳಲ್ಲಿದೆಯೇ? ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕುತ್ತ ಹೊರಟಿತ್ತು ವೈಜ್ಞಾನಿಕ ಜಗತ್ತು. ಹುಡುಕಾಟದ ಹಾದಿಯಲ್ಲಿ ಚಂದ್ರನ ಅಂಗಳದಲ್ಲಿ ನೀರಿರುವುದು ಗೊತ್ತಾಯಿತು. ಮಂಗಳನಲ್ಲೂ ನೀರಿನ ಒರತೆಯ ಸುಳಿವು ಸಿಕ್ಕಿತು. ಕ್ಷುದ್ರಗ್ರಹಗಳಲ್ಲಿ ಭರವಸೆಯ ಹನಿಯೊಂದು ಗೋಚರಿಸಿತು. ಹುಡುಕಾಟ ನಿರಂತರ, ಅನಂತದೆಡೆಗಿನ ಪಯಣ, ಮುಂದುವರಿಯಿತು. ಒಂದೊದೇ ಗ್ರಹಗಳನ್ನು ತಡಕಾಡತೊಡಗಿತು ವೈಜ್ಞಾನಿಕ ಜಗತ್ತು. ಇದೀಗ ಮತ್ತೊಂದು ಹೊಳಹು ಮೂಡಿದೆ. ಅದು- ಶನಿಯ ಚಂದ್ರನಲ್ಲಿ!
ಶನಿಗ್ರಹದ ಅತಿದೊಡ್ಡ ಉಪಗ್ರಹ (ಚಂದ್ರ) ಟೈಟಾನ್ನಲ್ಲಿ ನೀರಿನ ಸಾಗರವೇ ಪತ್ತೆಯಾಗಿದೆ. ಆದರೆ ಅಲ್ಲಿನ ಸಾಂಧ್ರ ವಾತಾವರಣದ ಕಾರಣದಿಂದಾಗಿ ಈ ನೀರಿನ ಸಾಗರ ಟೈಟಾನ್ನ ಮೇಲ್ಮೈಗಿಂತ 19 ಮೈಲಿಗಳಷ್ಟು ಆಳದಲ್ಲಿದೆ. ನಾಸಾದ ಕ್ಯಾಸಿನಿ ವ್ಯೋಮನೌಕೆಯಲ್ಲಿನ ರಾಡಾರ್ಗಳು ಇದನ್ನು ಗುರುತಿಸಿವೆ. ಭೂಮಿಯನ್ನು ಹೊರತುಪಡಿಸಿದರೆ ಮೇಲ್ಮೈಯಲ್ಲೇ ನೀರು ಅಥವಾ ಇನ್ಯಾವುದೇ ದ್ರವವನ್ನು ಹೊಂದಿರುವುದು ಟೈಟಾನ್ ಮಾತ್ರ ಎನ್ನುತ್ತವೆ ಸಂಶೋಧನೆಗಳು. ಟೈಟಾನ್ನಲ್ಲಿ ನೀರಿದೆ ಅನ್ನುವುದು ಗೊತ್ತಾದೊಡನೆ ಹಲವಾರು ಪ್ರಶ್ನೆಗಳು ಸಹಜವಾಗಿಯೇ ಪುಟಿದೆದ್ದಿವೆ. ಅಲ್ಲಿ ಜೀವಾಸ್ತಿತ್ವವಿದೆಯೇ ಎಂಬ ಕೌತುಕವೂ ಹೆಚ್ಚಾಗಿದೆ. ಇನ್ನೂ ವಿಶೇಷ ಅಂದರೆ ಟೈಟಾನ್ನ ಗರ್ಭ ಚಲಿಸುತ್ತಿದೆ (ಭೂಮಿಯಾಳದಲ್ಲಿರುವ ಭೂತಟ್ಟೆಗಳು ಚಲಿಸಿದಂತೆ!). ಇದಕ್ಕೆ ಅದರ ಗರ್ಭದಲ್ಲಿರುವ ನೀರು ಮತ್ತು ಅಮೋನಿಯಾದ ಸಂಯುಕ್ತ ದ್ರಾವಣವೇ ಕಾರಣ ಎಂಬುದನ್ನೂ ಇದೇ ಸಂಶೋಧನೆ ಹೇಳುತ್ತಿದೆ.

ಹುಡುಕಾಟದ ಹಾದಿ
ಜೀವಜಗತ್ತಿನ ಅಸ್ತಿತ್ವ, ಜೀವಿಗಳಿಗೆ ಸಂಜೀವಿನಿಯಾಗಿರುವ ನೀರಿನ ಒರತೆಗಾಗಿ ನಡೆಯುತ್ತಿರುವ ಹುಡುಕಾಟ ಹಲವು ಶತಮಾನಗಳದ್ದು. ಭೂಮಿಯ ಉಪಗ್ರಹ ಚಂದ್ರ, ನಂತರ ಮಂಗಳ ಗ್ರಹ... ಹೀಗೆ ನೀರು ಮತ್ತು ಜೀವಾಸ್ತಿತ್ವಕ್ಕಾಗಿ ಹುಡುಕಾಟ ನಡೆಯುತ್ತಲೇ ಇತ್ತು. ಹಾಗಂತ ಶನಿಗ್ರಹ ಅಥವಾ ಅದರ ಉಪಗ್ರಹಗಳಲ್ಲಿ ನೀರಿದೆಯೇ? ಜೀವಾಸ್ತಿತ್ವ ಇದೆಯೇ? ಎಂದೆಲ್ಲ ಪ್ರತ್ಯೇಕವಾಗಿ ಹುಡುಕಾಟ ನಡೆದಿಲ್ಲ. ಬದಲಾಗಿ, ಶನಿ ಮತ್ತದರ ಉಪಗ್ರಹಗಳಲ್ಲಿನ ವಾತಾವರಣವನ್ನು ಅಧ್ಯಯನ ಮಾಡುವುದಕ್ಕಾಗಿ ನಿಯೋಜಿಸಲ್ಪಟ್ಟಿದ್ದ ಕ್ಯಾಸಿನಿ ವ್ಯೋಮನೌಕೆಯೇ ಈ ಎಲ್ಲ ಕಾರ್ಯಗಳನ್ನು ಮಾಡಿದೆ. ಅಲ್ಲಿ ನೀರಿನ ಅಸ್ತಿತ್ವವಿದೆ ಎಂಬ ಚಿಂತನೆ ಹೊಳೆದದ್ದಾದರೂ ಹೇಗೆ? ಆ ಚಿಂತನೆಗೆ ಪುಷ್ಟಿ ನೀಡಿದ್ದು ಎಂತಹ ವಿಚಾರಗಳು?
ಸಂಪೂರ್ಣ ಘನವಾಗಿರುವ ಕಾಯಗಳ ಕಕ್ಷೆ ನೇರವಾಗಿರುತ್ತದೆ. ಆದರೆ, ತನ್ನೊಳಗೆ ದ್ರವ ವಸ್ತುಗಳನ್ನು ಅಡಗಿಸಿಕೊಂಡಿರುವ ಆಕಾಶಕಾಯಗಳು ಸ್ವಲ್ಪ ವಾಲಿಕೊಂಡಿರುತ್ತವೆ. ಟೈಟಾನ್ನ ಕಕ್ಷೆಯೂ 0.3 ಡಿಗ್ರಿಯಷ್ಟು ವಾಲಿದೆ.(ಭೂಮಿಯ ಕಕ್ಷೆ 23.4 ಡಿಗ್ರಿಯಷ್ಟು ವಾಲಿಕೊಂಡಿದೆ.) ಹೀಗಾಗಿ ಟೈಟಾನ್ನಲ್ಲಿ ದ್ರವ ವಸ್ತುಗಳೂ ಇರಲೇಬೇಕು ಎಂಬ ಚಿಂತನೆ ಬಲವಾಯಿತು. ಟೈಟಾನ್ನ ಆಳದಲ್ಲಿ ನೀರಿನ ಸಾಗರವಿದೆ ಮತ್ತು ಆ ನೀರು ಜೀವಿಗಳು ಉಪಯೋಗಿಸಲು ಯೋಗ್ಯವಾಗಿದೆ ಎಂಬುದು ತಿಳಿದುಬಂತು. ಈ ನೀರಿನ ಸಾಗರವನ್ನು ಮಂಜಿನ ಪದರ ಆವರಿಸಿದ್ದು, ನೀರು ಕೂಡಾ ಅತ್ಯಂತ ಶೀತಲವಾಗಿದೆ. ಟೈಟಾನ್ನ ಗರ್ಭವೂ ಸಹ ಕಲ್ಲು, ನೀರು ಮತ್ತು ಮಂಜಿನಿಂದ ರಚಿತವಾಗಿದೆ. ಇನ್ನು ಟೈಟಾನ್ನ ಕೇಂದ್ರ ಭಾಗವು ಮೇಲ್ಮೈಗಿಂತ ಕಡಿಮೆ ಸಾಧ್ರವಾಗಿದೆ. ಟೈಟಾನ್ನಲ್ಲಿರುವ ಸಾಗರದ ಆಳವು 3ರಿಂದ 265 ಮೈಲಿಗಳವರೆಗೆ ಇರಬಹುದು. ಒಂದೊದು ಪ್ರದೇಶದಲ್ಲೂ ಭಿನ್ನವಾದ ಆಳವನ್ನು ಹೊಂದಿರುವುದಂತೂ ಖಂಡಿತ. ಅಲ್ಲದೆ, ಈ ಸಾಗರದ ಮೇಲಿರುವ ಮಂಜಿನ ಪದರವು 90ರಿಂದ 125 ಮೈಲಿಗಳಷ್ಟು ದಪ್ಪ ಇರಬಹುದು ಎನ್ನುತ್ತಾರೆ ವಿಜ್ಞಾನಿಗಳು.
ಹಾಗಿದ್ದರೆ ಅನ್ಯಗ್ರಹ ಜೀವಿಗಳು ಅಸ್ತಿತ್ವದಲ್ಲಿರಬಹುದೇ? ಶನಿಯ ಉಪಗ್ರಹ ಟೈಟಾನ್ನಲ್ಲಿನ ವಿಚಾರಗಳನ್ನೆಲ್ಲಾ ಗಮನಿಸಿದರೆ ಭೂಮ್ಯೇತರ ಆಕಾಶಕಾಯಗಳಲ್ಲಿಯೂ ಜೀವಾಸ್ತಿತ್ವ ಇರುವ ಸಾಧ್ಯತೆಯಿದೆ. ಹಾಗೊಂದು ವೇಳೆ ಇದ್ದದ್ದೇ ಆದಲ್ಲಿ ಆ ಜೀವಿಗಳ ಜೀವನ ಮಟ್ಟ ಯಾವ ಸ್ಥಿತಿಯಲ್ಲಿರಬಹುದು? ಅವು ನಮ್ಮನ್ನು, ನಮ್ಮ ಸಂಶೋಧನೆಗಳನ್ನು ಗಮನಿಸುತ್ತಿರಬಹುದೆ? ನಮ್ಮ ಮೇಲೆ ಆಕ್ರಮಣ ಮಾಡುವ ಸಾಧ್ಯತೆಗಳಿವೆಯೇ? ಎಂಬೆಲ್ಲ ಪ್ರಶ್ನೆಗಳು ಹುಟ್ಟಿಕೊಳ್ಳುವುದು ಸಹಜ. ಅದಕ್ಕೆ ಉತ್ತರ ಕಂಡುಕೊಳ್ಳುವ ಪ್ರಯತ್ನವೂ ನಡೆಯುತ್ತಿದೆ. ಅದರ ಜೊತೆಗೇ ಇನ್ನೂ ಒಂದು ಪ್ರಶ್ನೆ ಕಾಡುತ್ತದೆ. ಅದು- ಜೀವಿಗಳಿಗೆ ಅಮೃತ ಸಮಾನವಾಗಿರುವ ನೀರು ಎಲ್ಲೆಲ್ಲ ಇರಬಹುದು?

ಎಲ್ಲೆಲ್ಲೂ ನೀರಿದೆ!
ಭೂಮಿಯಲ್ಲಿ ಹೇರಳವಾಗಿ ನೀರಿದೆ. ಭೂಮಿಯ ಉಪಗ್ರಹ ಚಂದ್ರನಲ್ಲೂ ನೀರಿನ ಸುಳುವು ಸಿಕ್ಕಿದೆ. ಹೀಗೆ ಒಂದೊಂದೇ ಗ್ರಹದಲ್ಲಿ, ಉಪಗ್ರಹದಲ್ಲಿ, ಕ್ಷುದ್ರಗ್ರಹಗಳಲ್ಲಿ ನೀರಿನ ಅಸ್ತಿತ್ವ ಕಾಣಿಸುತ್ತಿದೆ. ಪ್ರತಿಯೊಂದು ಕಾಯಗಳಲ್ಲಿಯೂ ನೀರಿನ ಅಸ್ತಿತ್ವ ಕಾಣಿಸುತ್ತಿದೆ ಎಂದರೆ ಈ ಬ್ರಹ್ಮಾಂಡದ ಯಾವ ಭಾಗಕ್ಕೆ ಹೋದರೂ ಅಲ್ಲಿ ನೀರಿನ ಅಸ್ತಿತ್ವ ಇರಲೇಬೇಕು. ಹಾಗಂತ ನೀರು ದ್ರವ ರೂಪದಲ್ಲೇ ಇರಬೇಕು ಎಂಬ ನಿಯಮವಿಲ್ಲ. ಅದು ಮಂಜಿನ ರೂಪ ಇರಬಹುದು, ಇಲ್ಲವೇ ಉಗಿಯ ರೂಪದಲ್ಲಿರಬಹುದು, ಅದೂ ಅಲ್ಲ ಎಂದಾದರೆ ಆವಿಯ ರೂಪದಲ್ಲಿರಬಹುದು. ನೀರಿಗೆ ಇಷ್ಟೇ ರೂಪಗಳಲ್ಲ. ಆ ನೀರು ಇರುವಂಥ ಪ್ರದೇಶದಲ್ಲಿ ಲಭ್ಯವಿರುವಂಥ ನೈಸರ್ಗಿಕ ರಾಸಾಯನಿಕಗಳ ಜೊತೆಗೆ ಸಂಯೋಗಗೊಂಡು ಸಂಯುಕ್ತ ರೂಪದಲ್ಲಿಯೇ ನೀರಿರಬಹುದು, ಸಂಯುಕ್ತ ರೂಪ ಒಂದೊಂದು ಕಾಯದಲ್ಲಿಯೂ ಭಿನ್ನವಾಗಿರಬಹುದು. ಸಂಯುಕ್ತ ರೂಪದ ನೀರನ್ನು ಸೇವಿಸಿ ಬದುಕುವಂಥ ಜೀವಿಗಳು ಕೂಡಾ ಅಸ್ತಿತ್ವದಲ್ಲಿರಬಹುದು.
ನಮ್ಮ ಶರೀರ ಪಂಚಭೂತಗಳಿಂದ(ನೀರು, ಭೂಮಿ, ಗಾಳಿ, ಅಗ್ನಿ, ಆಕಾಶ) ರಚಿತವಾಗಿದೆ ಎನ್ನುತ್ತವೆ ವೇದಗಳು ಮತ್ತು ಉಪನಿಷತ್ಗಳು. ಈ ಬ್ರಹ್ಮಾಂಡವೂ ಪಂಚಭೂತಗಳಿಂದಲೇ ಮಾಡಲ್ಪಟ್ಟಿದೆ. ನಮ್ಮ ದೇಹದಲ್ಲಿ ನೀರು ರಕ್ತದ ರೂಪದಲ್ಲಿಯೂ, ಅಗ್ನಿ ಹಸಿವಿನ ರೂಪದಲ್ಲಿಯೂ ಇದೆ. ಭೂಮಿಯನ್ನು ನಮ್ಮ ದೇಹಕ್ಕೆ ಹೋಲಿಸಲಾಗುತ್ತದೆ. ಗಾಳಿ ಉಸಿರಾಗಿದೆ. ಆಕಾಶ ಎಂದರೆ ಅನಂತ ಎಂಬರ್ಥವೂ ಇದೆ ಮತ್ತು ಆಕಾಶ ಅನಂತವನ್ನೇ ಪ್ರತಿನಿಧಿಸುತ್ತದೆ ಕೂಡಾ. ಅಂದರೆ ಪರಮಾತ್ಮನ ರೂಪ ಅದು. ಈ ಅನಂತ ನಮ್ಮಲ್ಲಿ ಆತ್ಮದ ರೂಪ ಹೊಂದಿದೆ. ಹೀಗೆಯೇ ಭೂಮಿಯಲ್ಲಿ ಕೂಡಾ ಪಂಚಭೂತಗಳು ಒಂದೊಂದು ರೂಪದಲ್ಲಿವೆ. ಇದೇ ವಿಚಾರ ಇತರ ಎಲ್ಲಾ ಆಕಾಶಕಾಯಗಳಿಗೂ ಅನ್ವಯಿಸುತ್ತದೆ. ಈ ಬ್ರಹ್ಮಾಂಡವೇ ಪಂಚಭೂತಗಳಿಂದ ಮಾಡಲ್ಪಟ್ಟಿದೆ ಎಂದರೆ ಈ ಪಂಚಭೂತಗಳ ಯಾವುದೋ ಒಂದು ರೂಪ ಅಲ್ಲಿ ಅಸ್ತಿತ್ವದಲ್ಲಿರಲೇಬೇಕು.
ನಾವು ಸೇವಿಸುವುದು ಸಿಹಿನೀರನ್ನು. ಹಾಗಂತ ಉಪ್ಪುನೀರನ್ನು ಸೇವಿಸಿ ಬದುಕುವ ಜೀವಿಗಳು ಸಮುದ್ರದಲ್ಲಿಲ್ಲವೇ? ಅವುಗಳಿಗೆ ನೇರವಾಗಿ ಆಮ್ಲಜನಕದ ಪೂರೈಕೆ ಇಲ್ಲದಿದ್ದರೂ ಅವು ನೀರಿನಲ್ಲಿ ಸಂಯುಕ್ತ ರೂಪದಲ್ಲಿರುವ ಆಮ್ಲಜನಕವನ್ನು ಸೇವಿಸಿಕೊಂಡು ಬದುಕುತ್ತವೆ. ಸಮುದ್ರದಲ್ಲಿ ಬದುಕುತ್ತಿರುವ ಜೀವಿಗಳ ಆಕಾರ ಕೂಡಾ ಭೂಮಿಯಲ್ಲಿನ ಜೀವಿಗಳಿಗಿಂತ ಭಿನ್ನವಾಗಿದೆ. ಇನ್ನು ಸೂಕ್ಷಾಣು ಜೀವಿಗಳು! ಸಾಮಾನ್ಯ ಕಣ್ಣಿಗೆ ಅವು ಕಾಣಿಸುವುದೇ ಇಲ್ಲ, ಹಾಗಂತ ಅವುಗಳ ಅಸ್ತಿತ್ವ ನಮಗೆ ಸೂಕ್ಷ್ಮದರ್ಶಕದಿಂದ ಗೊತ್ತಾಗಿತ್ತದೆ. ಪರಾವಲಂಬಿಯಾದಂಥ ಜೀವಿಗಳು ಎಲ್ಲಿ ಬೇಕಾದರೂ ಬದುಕುತ್ತವೆ. ಭೂಮ್ಯೇತರ ಆಕಾಶಕಾಯಗಳಲ್ಲಿ ನೀರು ಮತ್ತು ಜೀವಾಸ್ತಿತ್ವದ ಸಾಧ್ಯತೆಯನ್ನು ನಿರೂಪಿಸಲು ಇದೊಂದೇ ವಾದ ಸಾಲದೇ?

Comments

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು