ಮೆದುಳೇ ಇನ್ನೂ ಅರ್ಥ ಆಗಿಲ್ಲ!


ಅಷ್ಟು ಸುಲಭಕ್ಕೆ ಗುಟ್ಟು ಬಿಟ್ಟುಕೊಡಲು ಈ ಹಾರ್ಡ್ ಡಿಸ್ಕ್  ಕೂಡಾ ತಯಾರಿಲ್ಲ. ಅದಕ್ಕೆ ಅಳವಡಿಸಿರುವ ಪಾಸ್ವರ್ಡ್ `ಹ್ಯಾಕ್' ಮಾಡುವುದಕ್ಕೆ ಇನ್ನೂ ಯಾರಿಗೂ ಸಾಧ್ಯವಾಗಿಲ್ಲ. ಆದರೆ, ಇದರ ಒಂದು ಸೂಕ್ಷ್ಮ ಭಾಗದಲ್ಲಾಗುವ ಒಂದು ಪರಿವರ್ತನೆ ಹಾರ್ಡ್ ಡಿಸ್ಕ್ ವ್ಯವಸ್ಥೆಯನ್ನೇ ಬದಲಲಿಸಿ ಬಿಡಬಲ್ಲುದು ಎಂಬುದನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಅಷ್ಟಕ್ಕೂ ಇದೆಂಥ ಹಾರ್ಡ್ ಡಿಸ್ಕ್ ? 

ಇದೊಂಥರ ಹಾರ್ಡ್ ಡಿಸ್ಕ್ . ಅದೆಷ್ಟು ವಿಚಾರಗಳನ್ನು ಸಂಗ್ರಹಿಸುತ್ತಾ ಹೋದರೂ ತುಂಬಿಕೊಳ್ಳುತ್ತಾ ಹೋಗುತ್ತದೆ. ವಾರಗಳು, ತಿಂಗಳುಗಳು, ವರ್ಷಗಳ ಕಾಲ ಈ ಹಾರ್ಡ್ ಡಿಸ್ಕ್ನಲ್ಲಿ ಸಂಗ್ರಹವಾಗುವ ವಿಚಾರಗಳು ಎಷ್ಟು ಗಿಗಾಬೈಟ್ (ಗಿಬಿ) ಇವೆ ಎಂಬುದನ್ನು ಯಾರೂ ಅಳತೆ ಮಾಡಿಲ್ಲ. ಅಳತೆ ಮಾಡಲು ಹೊರಟಿದ್ದಾರಾದರೂ ಇದರ ಸಾಮಥ್ರ್ಯ ಅವರ ಅರಿವಿಗೆ ನಿಲುಕಿಲ್ಲ. ಈ ಹಾರ್ಡ್ ಡಿಸ್ಕ್ ನಿರ್ವಹಿಸುವಂಥ ಕೆಲಸಗಳನ್ನು ನೋಡಿದವರಿಗೆ ಎಂಥವರಿಗಾದರೂ ಅಚ್ಚರಿಯಾಗುತ್ತದೆ. ಅಂಥ ಹಾರ್ಡ್ಡಿಸ್ಕ್ನ ಮೂಲ ವಿನ್ಯಾಸ ಏನು ಎಂದು ವಿಜ್ಞಾನಿಗಳು ತಲೆಕೆಡಿಸಿಕೊಂಡಿದ್ದರು. ಅಷ್ಟು ಸುಲಭಕ್ಕೆ ಗುಟ್ಟು ಬಿಟ್ಟುಕೊಡಲು ಈ ಹಾರ್ಡ್ಡಿಸ್ಕ್ ಕೂಡಾ ತಯಾರಿಲ್ಲ. ಅದಕ್ಕೆ ಅಳವಡಿಸಿರುವ ಪಾಸ್ವರ್ಡ್ `ಹ್ಯಾಕ್' ಮಾಡುವುದಕ್ಕೆ ಇನ್ನೂ ಯಾರಿಗೂ ಸಾಧ್ಯವಾಗಿಲ್ಲ. ಆದರೆ, ಇದರ ಒಂದು ಸೂಕ್ಷ್ಮ ಭಾಗದಲ್ಲಾಗುವ ಒಂದು ಪರಿವರ್ತನೆ ಹಾರ್ಡ್ಡಿಸ್ಕ್ನ ವ್ಯವಸ್ಥೆಯನ್ನೇ ಬದಲಲಿಸಿ ಬಿಡಬಲ್ಲುದು ಎಂಬುದನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಅಷ್ಟಕ್ಕೂ ಇದೆಂಥ ಹಾಡರ್್ಡಿಸ್ಕ್?
ಇದು ಮಾನವನ ಮೆದುಳು! ಹೌದು ಮಾನವನ ಮೆದುಳೆಂಬ ಹಾರ್ಡ್ಡಿಸ್ಕ್ನ ಪಾಸ್ವರ್ಡ್ ಇನ್ನೂ ವಿಜ್ಞಾನಿಗಳ ಕೈಗೆ ಸಿಕ್ಕಿಲ್ಲ. ಅದುವೇ ಸೋಜಿಗವಾಗಿದೆ. ಯಾವುದೇ ಒಂದು ಯೋಚನೆ ಬರಬೇಕು ಎಂದಾದರೆ ಮೆದುಳಿನಲ್ಲಿ ಹಲವಾರು ಕ್ರಿಯೆಗಳಾಗಬೇಕು. ಅಷ್ಟೊಂದು ಕ್ರಿಯೆಗಳು ನಡೆಯುವ ವೇಗವೂ ಊಹೆಗೆ ನಿಲುಕುವಂಥದ್ದಲ್ಲ. ಇಂಥ ಸಾಮಥ್ರ್ಯ ಮೆದುಳಿಗೆ ಬಂದದ್ದಾದರೂ ಹೇಗೆ? ಈ ವಿಚಾರವನ್ನು ಹಿಡಿದುಕೊಂಡು ಸಂಶೋಧನೆ ಶುರು ಮಾಡಿದ್ದರು ವಿಜ್ಞಾನಿಗಳು. ಯಾಲೆ ಸ್ಕೂಲ್ ಆಫ್ ಮೆಡಿಸಿನ್ ಮತ್ತು ಟರ್ಕಿಯ ವಿಜ್ಞಾನಿಗಳು ಜಂಟಿಯಾಗಿ ಮೆದುಳಿನ ಬಗ್ಗೆ ಸಂಶೋಧನೆ ನಡೆಸಿದ್ದು, ಮೆದುಳಿನಲ್ಲಿರುವ ವಂಶವಾಹಿಗಳಲ್ಲಿ ಅತ್ಯಂತ ಸೂಕ್ಷ್ಮವಾದ ಪರಿವರ್ತನೆಯಾದರೂ ಅದು ಮೆದುಳಿಗೆ ದೊಡ್ಡ ಆಘಾತವನ್ನೇ ನೀಡುತ್ತದೆ ಎಂಬುದನ್ನು ಕಂಡುಕೊಂಡಿದ್ದಾರೆ. ಈ ವಿಜ್ಞಾನಿಗಳು ವಾಸ್ತವವಾಗಿ ಹೊರಟದ್ದು ಮೆದುಳಿನ ಮೂಲವನ್ನು ಅರಿತುಕೊಳ್ಳಬೇಕೆಂಬ ತವಕದಲ್ಲಿ. ಮೆದುಳು ಮಾತ್ರ ತನ್ನ ಗುಟ್ಟು ಬಿಟ್ಟುಕೊಡುವುದಕ್ಕೆ ನಿರಾಕರಿಸಿತು.
ಮೆದುಳಿನ ಎಲ್ಲಾ ಕ್ರಿಯೆಗಳನ್ನು, ಅದರ ವಿನ್ಯಾಸವನ್ನು ನಿರ್ಧರಿಸುವುದು ವಂಶವಾಹಿಗಳು (ಜೀನ್ಗಳು). ಈ ಜೀನ್ಗಳಲ್ಲಿ ಸಣ್ಣ ಪರಿವರ್ತನೆ ಆದರೂ ಕೂಡಾ ಮೆದುಳಿನ ಕೆಲಸ ಕಾರ್ಯಗಳು ಏರುಪೇರಾಗುತ್ತವೆ. ಆದರೆ ಈ ವಂಶವಾಹಿಗಳಲ್ಲಾಗುವ ಪರಿವರ್ತನೆಗಳನ್ನು ನಿಯಂತ್ರಿಸುವ ಬಗೆ ಮಾತ್ರ ಇನ್ನೂ ಗೊತ್ತಾಗಿಲ್ಲ. ಮಾನಸಿಕ ಅಸ್ವಸ್ಥತೆ ಉಂಟಾಗುವುದಕ್ಕೂ ಈ ವಂಶವಾಹಿಗಳಲ್ಲಿನ ಪರಿವರ್ತನೆಯೇ ಕಾರಣ ಎನ್ನುತ್ತಾರೆ ಸಂಶೋಧಕರು. ಮಾನವನ ದೇಹದಲ್ಲಿ ಬಿಲಿಯನ್ಗಟ್ಟಲೆ ವಂಶವಾಹಿ ಸಂದೇಶಗಳು ಹರಿದಾಡುತ್ತಿರುತ್ತವೆ. ಈ ಸಂದೇಶಗಳಲ್ಲಿ ವ್ಯತ್ಯಾಸವುಂಟಾದರೆ ಅಥವಾ ಕೆಲವೊಂದು ಸಂದೇಶಗಳು ಅಳಿಸಿ ಹೋದರೆ ಅದರ ನೇರ ಪರಿಣಾಮ ಉಂಟಾಗುವುದು ಮೆದುಳಿನ ಮೇಲೆ. ಮಾನಸಿಕ ಸಮಸ್ಯೆ ಹೊಂದಿದ್ದ ವ್ಯಕ್ತಿಯೊಬ್ಬನ ಮೆದುಳಿನಲ್ಲಿರುವ ವಂಶವಾಹಿಗಳನ್ನು ಪರೀಕ್ಷಿಸಿದ ವಿಜ್ಞಾನಿಗಳಿಗೆ ಈ ವಿಚಾರ ಗೊತ್ತಾಗಿದೆ. ಆತನ ಮೆದುಳಿನಲ್ಲಿ ಬಿಲಿಯನ್ಗಟ್ಟಲೆ ವಂಶವಾಹಿ ಸಂದೇಶಗಳ ಪೈಕಿ ಕೇವಲ ಎರಡು ಸಂದೇಶಗಳು ಅಳಿಸಿ ಹೋಗಿದ್ದವು.

ಸಮಸ್ಯೆಗಳಿಗೆ ಪರಿಹಾರ?
ಮೆದುಳಿನ ಅಸಮರ್ಪಕ ಕ್ರಿಯೆಗೆ ಕಾರಣವಾಗುವ ವಂಶವಾಹಿಯನ್ನೇನೋ ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಆದರೆ, ಸಮಸ್ಯೆಗಳ ನಿವಾರಣೆ ಇದರಿಂದ ಸಾಧ್ಯವೆ? ನಮ್ಮ ದೇಹದಲ್ಲಿ ಮೆದುಳಿನಷ್ಟು ಸಂಕೀರ್ಣವಾದ ಭಾಗ ಮತ್ತೊಂದಿಲ್ಲ. ಅದರ ಕಾರ್ಯವನ್ನು, ರಚನೆಯನ್ನು ಅರ್ಥ ಮಾಡಿಕೊಳ್ಳುವುದೂ ಸುಲಭವಲ್ಲ. ಹೀಗಿರುವಾಗ ಮೆದುಳಿನ ಸಂಪೂರ್ಣ ವ್ಯವಸ್ಥೆಗೆ ಕಾರಣವಾಗುವ ವಂಶವಾಹಿ ಎಂದೆನಿಸಿಕೊಂಡದ್ದನ್ನು ಸರಿಪಡಿಸಿದರೆ ಮಾನಸಿಕ ಸ್ಥಿತಿಗತಿ ನೇರ್ಪಾಗುತ್ತದೆ ಎಂಬ ನಂಬಿಕೆಯೂ ಇಲ್ಲ. ಒಂದು ವ್ಯವಸ್ಥೆಗೆ ಒಂದು ವಂಶವಾಹಿ ಕಾರಣವಿರಬಹುದು ನಿಜ. ಆದರೆ ಆ ವಂಶವಾಹಿಯ ಮೇಲೆ ಪ್ರಭಾವ ಬೀರುವಂಥ ಇನ್ನೆಷ್ಟೋ ವಂಶವಾಹಿಗಳು ಇರುತ್ತವೆ. ಒಂದು ವಂಶವಾಹಿನಿಯಲ್ಲಿ ಪರಿವರ್ತನೆಗಳನ್ನು ಮಾಡಿದಾಗ ಅದರ ಪರಿಣಾಮ ಇತರ ವಂಶವಾಹಿಗಳ ಮೇಲೂ ಉಂಟಾಗುತ್ತದೆ. ವಂಶವಾಹಿಗಳೆಂದರೆ ಅವೆಲ್ಲವಕ್ಕೂ ಒಂದೊಂದು ರೀತಿಯ ನಂಟಿರುತ್ತದೆ. ಈ ನಂಟಿನಿಂದ ಒಂದು ವಂಶವಾಹಿ ಪ್ರತ್ಯೇಕಗೊಂಡರೆ ಆಗ ಎದುರಾಗುವ ಸಮಸ್ಯೆಗಳನ್ನು ನಿವಾರಿಸುವುದು ಸುಲಭದ ಮಾತಲ್ಲ. ಹೀಗಾಗಿ ಮೆದುಳಿನ ರಚನೆ, ಕಾರ್ಯವನ್ನು ನಿಯಂತ್ರಿಸುವಂಥ ವಂಶವಾಹಿಯ ಮೇಲೆ ಪ್ರಯೋಗ ಮಾಡಲು ಹೊರಟರೆ ಅದರಿಂದ ಹಾನಿಯೇ ಹೆಚ್ಚಾಗುವ ಸಾಧ್ಯತೆಗಳಿವೆ.
ಇನ್ನೂ ವಿಶೇಷ ಅಂದ್ರೆ ಮಾನವನ ಮೆದುಳು ಇತರ ಪ್ರಾಣಿಗಳ ಮೆದುಳಿಗಿಂತ ತುಂಬಾ ಭಿನ್ನವಾಗಿದೆ. ಈ ಭಿನ್ನತೆ ಅದು ಹೇಗೆ ಕಾಣಿಸಿಕೊಂಡಿತು ಎಂಬುದೂ ವಿಜ್ಞಾನ ಲೋಕಕ್ಕೆ ಸಂಪೂರ್ಣವಾಗಿ ಅರ್ಥವಾಗಿಲ್ಲ. ಯಾವ ವಂಶವಾಹಿ ಮೆದುಳಿನ ಅಸಮರ್ಪಕತೆಗೆ ಕಾರಣವಾಗುತ್ತದೆಯೋ ಅದೇ ವಂಶವಾಹಿ ಮೆದುಳಿನ ಭಿನ್ನ ರಚನೆಗೂ ಕಾರಣವಾಗಿರಬೇಕು ಎಂಬ ವಾದ ಯಾಲೆ ಸ್ಕೂಲ್ ಆಫ್ ಮೆಡಿಸಿನ್ ಮತ್ತು ಟರ್ಕಿಯ ವಿಜ್ಞಾನಿಗಳದ್ದು. ಈ ಎಲ್ಲದರ ಮಧ್ಯೆ ಇನ್ನೂ ಒಂದು ಸಂಶೋಧನೆ ನಡೆದಿದ್ದು, ಅಪಘಾತದ ಸಂದರ್ಭದಲ್ಲಿ ಮೆದುಳಿಗೆ ಹಾನಿಯುಂಟಾದರೂ ಅದನ್ನು ತಕ್ಷಣವೇ ಸರಿಪಡಿಸುವಂಥ ಚಿಕಿತ್ಸೆ ಸಿದ್ಧಪಡಿಸಿರುವುದಾಗಿ ಹೇಳಿಕೊಂಡಿದೆ. ಆದರೆ ಈ ಚಿಕಿತ್ಸಾ ಪದ್ಧತಿಯನ್ನು ಇನ್ನಷ್ಟು ಅಭಿವೃದ್ಧಿಪಡಿಸಬೇಕಿದ್ದು, ಅದರಲ್ಲಿರುವ ಲೋಪಗಳನ್ನು ನಿವಾರಿಸಬೇಕಂತೆ. ಒಟ್ಟಿನಲ್ಲಿ ಮಾನವನ ಮೆದುಳಿನ ಮೇಲೆ ಅಸಂಖ್ಯಾತ ಪ್ರಯೋಗಗಳು ನಡೆಯುತ್ತಿವೆ. ಮೆದುಳು ಮಾತ್ರ ತನ್ನ ಎಲ್ಲ ಗುಟ್ಟುಗಳನ್ನೂ ಒಮ್ಮೆಲೇ ಬಿಟ್ಟುಕೊಡಲು ಸಿದ್ಧವಿಲ್ಲವೋ ಎಂಬಂತೆ ಸಂಕೀರ್ಣತೆಯನ್ನು ಮುಂದುವರಿಸಿದೆ.

ಸೃಷ್ಟಿಯೂ ಸಂಕೀರ್ಣವೇ!
ಕೇವಲ ಮಾನವನ ಮೆದುಳು ಇಷ್ಟೊಂದು ಸಂಕೀರ್ಣವಾಗಿದೆ ಎಂದಾದರೆ ಇನ್ನು ಆ ಸಂಕೀರ್ಣ ಮೆದುಳಿನ ಹಿಂದಿನ ಸೃಷ್ಟಿ ಇನ್ನೆಷ್ಟು ಸಂಕೀರ್ಣವಾಗಿರಬಹುದು? ಮೆದುಳಿನ ಮೇಲೆ ನಡೆಯುತ್ತಿರುವ ಒಂದೊಂದು ಪ್ರಯೋಗಗಳೂ ಕೂಡಾ ಹೊಸ ಹೊಸ ವಿಚಾರಗಳನ್ನು ಹೊರಗೆಡಹುತ್ತಿವೆ. ಮೆದುಳಿನ ಸಂಕೀರ್ಣ ರಚನೆ ಮತ್ತು ಕಾರ್ಯದ ಬಗ್ಗೆ ಒಂದೊಂದೇ ಮಾಹಿತಿಗಳನ್ನು ವೈಜ್ಞಾನಿಕ ಲೋಕ ಕಲೆಹಾಕುತ್ತಿದೆ. ಇವೆಲ್ಲ ಮಾಹಿತಿಗಳನ್ನು ಕ್ರೋಡೀಕರಿಸಿದರೆ ಸೃಷ್ಟಿ ರಹಸ್ಯದ ಬಗ್ಗೆ ಏನಾದರೂ ಮಾಹಿತಿ ದೊರಕೀತೇ?
ಈ ಜಗತ್ತನ್ನು ನಿಯಂತ್ರಿಸುವ ಮೂಲಕ್ಕೂ ಪ್ರತಿಯೊಂದು ಜೀವಿಯನ್ನು ನಿಯಂತ್ರಿಸುವ ಮೂಲಕ್ಕೂ ಏನಾದರೂ ಒಂದು ನಂಟಿರಲೇಬೇಕು. ಆ ನಂಟಿನ ವಿಚಾರ ಮೆದುಳಿನಲ್ಲಿರುವ ವಂಶವಾಹಿಗಳಿಂದ ಪತ್ತೆಯಾದೀತೆ? ಮೆದುಳಿನ ವಿಚಾರವನ್ನು ತಿಳಿದುಕೊಳ್ಳುವುದೇ ಇಷ್ಟೊಂದು ಕಷ್ಟ ಎಂದ ಮೇಲೆ ಸೃಷ್ಟಿ ರಹಸ್ಯವನ್ನು ಅರಿತುಕೊಳ್ಳುವುದು ಇನ್ನಷ್ಟು ಕಷ್ಟವಾದೀತು! ಸೃಷ್ಟಿ ರಹಸ್ಯವನ್ನು ಕಂಡುಕೊಳ್ಳುತ್ತೇವೆ ಎಂದು ಹೊರಟಿರುವ ವಿಜ್ಞಾನಿಗಳು ಪ್ರತಿಯೊಂದು ವಿಚಾರಗಳತ್ತಲೂ ಸೂಕ್ಷ್ಮವಾಗಿ ಗಮನ ಹರಿಸಿದರಷ್ಟೇ ಸೃಷ್ಟಿಯ ಸಮಗ್ರತೆ ಅರ್ಥವಾದೀತು. ಒಂದೊಮ್ಮೆ ಸೃಷ್ಟಿ ರಹಸ್ಯ ಮಾನವನ ಅರಿವಿಗೆ ನಿಲುಕಿತು ಎಂದಾದರೆ ಮತ್ತೆ ಆಪತ್ತು ಎದುರಾಗುವುದಂತೂ ಖಂಡಿತ. ಏಕೆಂದರೆ ಈಗಾಗಲೇ ಪ್ರಕೃತಿಯನ್ನು ತನ್ನ ಅಂಕೆಗೆ ತೆಗೆದುಕೊಳ್ಳಲು ಹೊರಟಿದ್ದಾನೆ ಮಾನವ. ಇಂತಿರುವಾಗ ಸೃಷ್ಟಿ ರಹಸ್ಯವನ್ನು ಅರಿತುಕೊಂಡ ಎಂದಾದರೆ ಮತ್ತೆ ಸೃಷ್ಟಿ ಮತ್ತು ಆ ಸೃಷ್ಟಿಯ ಸ್ಥಿತಿ, ಲಯಗಳೆಲ್ಲವೂ ಮಾನವನ ಕೈಯಲ್ಲಿ ಸಿಕ್ಕಿ ನಲುಗುವುದಂತೂ ಖಂಡಿತ!

Comments

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು