ಸ್ವರ್ಣಬಿಂದು: ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ ಚಿನ್ನ


ಕಶ್ಯಪ ಸಂಹಿತೆಯಲ್ಲಿ ಹೇಳಿರುವಂಥ ಸ್ವರ್ಣಬಿಂದು ಪ್ರಾಶನ ಇತ್ತೀಚೆಗೆ ಖ್ಯಾತಿಗೊಳ್ಳುತ್ತಿದೆ. ಸ್ವರ್ಣಬಿಂದು ಪ್ರಾಶನವನ್ನು ಪರಿಣಿತ ವೈದ್ಯರ ಬಳಿಯೇ ಹಾಕಿಸಿಕೊಳ್ಳಬೇಕು. ಅತ್ಯಲ್ಪ ಪ್ರಮಾಣದಲ್ಲಿ ಶುದ್ಧ ಚಿನ್ನವನ್ನು ಔಷಧಿಯುಕ್ತವಾದಂಥ ತುಪ್ಪದೊಂದಿಗೆ ಕೊಡುವ ಕಾರಣ ಇದರಿಂದ ಹಾನಿಯೇನೂ ಇಲ್ಲ. ಆ ಬಗ್ಗೆ ಭಯ ಬೇಡ. ಬುದ್ಧಿ ಶಕ್ತಿ, ಜೀರ್ಣಕ್ರಿಯೆ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣ ಚಿನ್ನಕ್ಕಿದೆ.

ಒಂದೊಂದು ಕಾಲಘಟ್ಟದಲ್ಲಿ ಕೆಲವೊಂದು ವಿಚಾರಗಳು ಹೆಚ್ಚು ಪ್ರಚಲಿತದಲ್ಲಿರುತ್ತವೆ. ಒಂದು ಕಾಲದಲ್ಲಿ ಅಖಂಡ ಭಾರತವನ್ನು ಆಳಿದ್ದ ಆಯುರ್ವೇದ ವೈದ್ಯ ಪದ್ಧತಿ ನಂತರ ಕಳೆ ಕಳೆದುಕೊಂಡಿತು. ಇತ್ತೀಚಿನ ದಿನಗಳಲ್ಲಿ ಮತ್ತೆ ಪ್ರಖ್ಯಾತಿಗೊಳ್ಳುತ್ತಿದೆ. ಹೆಚ್ಚು ಹೆಚ್ಚು ಜನ ಆಯುರ್ವೇದದತ್ತ ವಾಲುತ್ತಿದ್ದಾರೆ. ಅಂಥಾದ್ದರಲ್ಲಿ ಆಯುರ್ವೇದದಲ್ಲಿ ಹಲವು ಸಾವಿರ ವರ್ಷಗಳ ಹಿಂದೆ ಹೇಳಿದ್ದಂಥ ಔಷಧೀಯ ಪದ್ಧತಿಯೊಂದು ಈಗ ಕರ್ನಾಟಕ, ಕೇರಳ ಮತ್ತು ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಜನಜನಿತವಾಗುತ್ತಿದೆ. ಅದುವೇ ಸ್ವರ್ಣಬಿಂದು ಪ್ರಾಶನ. ಚಿಕ್ಕ ಮಕ್ಕಳಿಗೆ ಸ್ವರ್ಣಬಿಂದು ಪ್ರಾಶನ ಮಾಡಿಸಿದಲ್ಲಿ ಅದು ಹಲವು ರೋಗಗಳನ್ನು ತಡೆಯುತ್ತದೆ, ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಮತ್ತು ಬುದ್ಧಿಶಕ್ತಿಯನ್ನು ಹೆಚ್ಚಿಸುತ್ತದೆ ಎನ್ನುತ್ತದೆ ಆಯುರ್ವೇದ. ಸ್ವರ್ಣಬಿಂದು ಪ್ರಾಶನ ಮಾಡಿಸಿಕೊಳ್ಳುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಇಂತಿರುವಾಗ ಸ್ವರ್ಣಬಿಂದು ಎಂದರೇನು? ಸ್ವರ್ಣಬಿಂದು ಪ್ರಾಶನದ ಬಗ್ಗೆ ಆಯುರ್ವೇದ ಏನೆನ್ನುತ್ತದೆ? ಅದರ ಉಪಯೋಗಗಳೇನು? ಇವೆಲ್ಲ ವಿಚಾರಗಳ ಬಗ್ಗೆ `ಹೊಸದಿಗಂತ'ವು ಬೆಂಗಳೂರಿನ `ಸುಕೃತಂ ಆಯುರ್ವೇದ'ದ ಡಾ.ಗಿರಿಧರ್ ಅವರನ್ನು ಮಾತಾಡಿಸಿತು.
ಸ್ವರ್ಣಬಿಂದು ಎಂದರೇನು?
ಇದು ಔಷಧಿಯುಕ್ತವಾದಂಥ ತುಪ್ಪ. ವಿವಿಧ ಬಗೆಯ ಮೂಲಿಕೆಗಳನ್ನು ಒಳಗೊಂಡಿರುವ ತುಪ್ಪಕ್ಕೆ ಅತ್ಯಲ್ಪ ಪ್ರಮಾಣದ ಶುದ್ಧ ಸ್ವರ್ಣ ಭಸ್ಮವನ್ನು ಸೇರಿಸಲಾಗುತ್ತದೆ. ಔಷಧಿಯುಕ್ತವಾದಂಥ ತುಪ್ಪಕ್ಕೆ ಒಬ್ಬೊಬ್ಬರು ಒಂದೊಂದು ಪ್ರಮಾಣದ ಮೂಲಿಕೆಗಳನ್ನು ಸೇರಿಸುತ್ತಾರೆ. ಕೆಲವರು 30 ಬಗೆಯ ಮೂಲಿಕೆಗಳನ್ನು ಮಿಶ್ರ ಮಾಡುತ್ತಾರೆ. ನಾವು ಬ್ರಾಹ್ಮಿ, ಮಂಡೂಕಪರ್ಣಿ ಮುಂತಾದವುಗಳ ಜೊತೆಗೆ 38 ಬಗೆಯ ಮೂಲಿಕೆಗಳನ್ನು ಸೇರಿಸಿ ಘೃತ(ತುಪ್ಪ) ಸಿದ್ಧಪಡಿಸುತ್ತೇವೆ. ಈ ರೀತಿ ಸಿದ್ಧವಾದ ತುಪ್ಪದಲ್ಲಿ ಸ್ವರ್ಣಭಸ್ಮವನ್ನು ಸೇರಿಸಿ ಅದನ್ನು ಸಂಸ್ಕರಿಸಲಾಗುತ್ತದೆ. ಸ್ವರ್ಣಭಸ್ಮ ತಯಾರಿಸುವಾಗಲೂ ಅತ್ಯಂತ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಚಿನ್ನವನ್ನು ಶುದ್ಧೀಕರಿಸಿ ಅದರಲ್ಲಿರುವ ದೋಷಪೂರಿತ ಅಂಶಗಳನ್ನು ತೆಗೆಯಬೇಕು. `ರಸಶಾಸ್ತ್ರ'ದಲ್ಲಿ ಹೇಳಿರುವಂತೆ ಶುದ್ಧ ಚಿನ್ನವನ್ನು ನಿಗದಿತ ಪ್ರಮಾಣದ ಉರಿ ಮತ್ತು ನಿಗದಿತ ಸಮಯದಲ್ಲಿ ಸುಟ್ಟು ಅದು ಪೂರ್ಣ ಪ್ರಮಾಣದಲ್ಲಿ ಭಸ್ಮವಾಗುವಂತೆ ನೋಡಿಕೊಳ್ಳಬೇಕಾಗುತ್ತದೆ. ಈ ಸಂಸ್ಕರಿತ ಸ್ವರ್ಣಭಸ್ಮವನ್ನು ಔಷಧಿಯುಕ್ತವಾದ ತುಪ್ಪಕ್ಕೆ ಸೇರಿಸಿ ಕೊಡಲಾಗುತ್ತದೆ. ಅದರ ಜೊತೆಗೆ ಸಮಾನ ಪ್ರಮಾಣದ ಜೇನನ್ನು ನೀಡಲಾಗುತ್ತದೆ. ಸ್ವರ್ಣ ಭಸ್ಮ ಇರುವ ತುಪ್ಪ ಮತ್ತು ಜೇನನ್ನು ಪ್ರತ್ಯೇಕ ಪ್ರತ್ಯೇಕವಾಗಿ ಕೊಡಲಾಗುತ್ತದೆ. ಕೆಲವೊಂದು ಕಡೆ ತುಪ್ಪಕ್ಕೆ ಸ್ವರ್ಣ ಭಸ್ಮವನ್ನು ಸೇರಿಸುವ ಬದಲಾಗಿ ಜೇನಿಗೆ ಸೇರಿಸಿ ಕೊಡುವುದೂ ಉಂಟು. ಎರಡೂ ವಿಧಾನದಲ್ಲಿ ತಪ್ಪೇನೂ ಇಲ್ಲ.
ಸ್ವರ್ಣಬಿಂದು ಪ್ರಾಶನದ ಉಪಯೋಗವೇನು?
ಸ್ವರ್ಣಭಸ್ಮದ ಮಹತ್ವವನ್ನು `ಮಕ್ಕಳ ತಜ್ಞ' ಎಂದೇ ಖ್ಯಾತಿ ಪಡೆದಿರುವ ಕಶ್ಯಪ ಮಹರ್ಷಿಯು ತನ್ನ `ಕಾಶ್ಯಪ ಸಂಹಿತೆ'ಯಲ್ಲಿ ವಿವರಿಸಿದ್ದಾನೆ. ಆ ಶ್ಲೋಕ ಹೀಗಿದೆ-
ಸ್ವರ್ಣಪ್ರಾಶನ ಹೀ ಏತ್ ಮೇಧಾಗ್ನಿ ಬಲವರ್ಧನಂ|
ಆಯುಷ್ಯಂ ಮಂಗಲಂ ಪುಣ್ಯಂ ವೃಷ್ಯಂ ವಣ್ರ್ಯಂ ಗ್ರಹಾಪಹಂ||
ಮಾಸಾತ್ ಪರಂ ಮೇಧಾವಿ ವ್ಯಾಧಿಭಿರ್ ನ ಚ ಘೃಷ್ಯತೇ|
ಶಡ್ಬೀರ್ಮಾಸೈ ಶ್ರುತಧರ ಸ್ವರ್ಣಪ್ರಾಶನಾದ್ಭವೇತ್||
ಸ್ವರ್ಣಪ್ರಾಶನವು ಬುದ್ಧಿಶಕ್ತಿ, ಜೀರ್ಣಕ್ರಿಯೆ ಮತ್ತು ಶಕ್ತಿಯನ್ನು ವೃದ್ಧಿಸುತ್ತದೆ. ಸಾತ್ವಿಕತೆಯನ್ನು ಹೆಚ್ಚಿಸುವ ಮೂಲಕ ದೀರ್ಘಾಯುಷ್ಯವನ್ನು ನೀಡುತ್ತದೆ ಎನ್ನುತ್ತಾನೆ ಕಶ್ಯಪ ಮಹರ್ಷಿ. ಚಿನ್ನ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ದೇಹದಲ್ಲಿ ಹಾನಿಗೊಳಗಾಗಿರುವ ಡಿಎನ್ಎಗಳು, ವರ್ಣತಂತುಗಳು, ವಂಶವಾಹಿಗಳನ್ನು ಸರಿಪಡಿಸುವ ಶಕ್ತಿ ಚಿನ್ನಕ್ಕಿದೆ. ಇದು ವೈಜ್ಞಾನಿಕವಾಗಿ ಸಾಬೀತಾಗಿದೆ. ಸಂತಾನಾಭಿವೃದ್ಧಿ ಸಾಮಥ್ರ್ಯವನ್ನೂ ಹೆಚ್ಚಿಸುವ ಗುಣ ಚಿನ್ನದಲ್ಲಿದೆ. ಸತತವಾಗಿ 21 ದಿನ ಸ್ವರ್ಣಬಿಂದು ಪ್ರಾಶನ ಮಾಡಿಸಬಹುದು, ಇಲ್ಲವಾದಲ್ಲಿ ಪ್ರತಿ ತಿಂಗಳಿಗೊಮ್ಮೆಯಂತೆ (ಸಾಮಾನ್ಯವಾಗಿ ಪುಷ್ಯ ನಕ್ಷತ್ರದ ದಿನ) 21 ತಿಂಗಳು ನೀಡಬಹುದು.
ಪುಷ್ಯ ನಕ್ಷತ್ರಕ್ಕೂ ಸ್ವರ್ಣಬಿಂದು ಪ್ರಾಶನಕ್ಕೂ ಏನು ಸಂಬಂಧ?
ವೇದಗಳ ಪ್ರಕಾರ ಔಷಧಿಗಳನ್ನು ಕೊಡುವುದಕ್ಕೆ, ಅದರಲ್ಲೂ ಮುಖ್ಯವಾಗಿ ಬುದ್ಧಿವರ್ಧಕ ಔಷಧಿಗಳನ್ನು ಕೊಡುವುದಕ್ಕೆ ಪುಷ್ಯ ನಕ್ಷತ್ರದ ದಿನ ಸೂಕ್ತ ಕಾಲ. ಇನ್ನು, ಔಷಧಿಯ ಸಾಮಥ್ರ್ಯ ಮತ್ತು ಆ ಔಷಧಿಯನ್ನು ಅರಗಿಸಿಕೊಳ್ಳುವ ಸಾಮಥ್ರ್ಯ... ಇವೆರಡೂ ಪುಷ್ಯ ನಕ್ಷತ್ರದ ದಿನ ಹೆಚ್ಚಿರುತ್ತದೆ ಎನ್ನುತ್ತದೆ ಆಯುರ್ವೇದ ಶಾಸ್ತ್ರ. ಇದು ಕೂಡಾ ವೈಜ್ಞಾನಿಕವಾಗಿ ಸಾಬೀತಾಗಿದೆ.
ಸ್ವರ್ಣಬಿಂದು ಪ್ರಾಶನ ಇತ್ತೀಚೆಗೆ ಹೆಚ್ಚು ಪ್ರಚಲಿತವಾಗುತ್ತಿದೆಯಲ್ಲ?
ಸ್ವರ್ಣಬಿಂದು ಪ್ರಾಶನ ತುಂಬಾ ಹಳೇ ಕಾಲದ್ದು. ಹೆಚ್ಚು ಜನರಿಗೆ ಅದರ ಉಪಯೋಗ ಗೊತ್ತಿರಲಿಲ್ಲ. ಮತ್ತೊಂದು ಆಂಗ್ಲರ ಪ್ರಾಬಲ್ಯದಿಂದಾಗಿ ನಾವು ನಮ್ಮ ವೈದ್ಯ ಪದ್ಧತಿಯನ್ನು ಕಡೆಗಣಿಸಿದ್ದೆವು. ಈಗ ಜನರು ಮತ್ತೆ ಆಯುರ್ವೇದದ ಮೊರೆ ಹೋಗುತ್ತಿದ್ದಾರೆ. ಅದರ ಮಹತ್ವ ಏನು ಎಂಬುದರ ಅರಿವಾಗುತ್ತಿದೆ. ಆದ ಕಾರಣವೇ ಸ್ವರ್ಣಬಿಂದು ಪ್ರಾಶನ ಪ್ರಚಲಿತಕ್ಕೆ ಬಂದಿದೆ. ಒಂದು ಔಷಧಿಯಿಂದ ಯಾವುದೇ ಅಡ್ಡಪರಿಣಾಮ ಇಲ್ಲದೆ, ಅದು ನಮ್ಮ ಆರೋಗ್ಯವೃದ್ಧಿಗೆ ನೆರವಾಗುತ್ತದೆ ಎಂದಾದರೆ ಜನರು ಸಹಜವಾಗಿಯೇ ಅದರಿಂದ ಆಕರ್ಷಿತರಾಗುತ್ತಾರೆ. ಒಂದೈವತ್ತು ವರ್ಷಗಳ ಹಿಂದೆ ಕೆಲವೊಂದು ಮನೆಗಳಲ್ಲಿ ಮಾತ್ರ ಇದನ್ನು ಮಾಡುತ್ತಿದ್ದರು. ಈಗ ಆಸ್ಪತ್ರೆಗಳಲ್ಲಿಯೂ ಸ್ವರ್ಣಬಿಂದು ಪ್ರಾಶನ ಮಾಡಿಸಲಾಗುತ್ತದೆ.
ಸ್ವರ್ಣಬಿಂದು ಪ್ರಾಶನದಿಂದ ಪ್ರಯೋಜನ ಇದೆಯೇ?
ಖಂಡಿತ. ಬಹುಪಾಲು ಜನ ಇದರಿಂದ ಪ್ರಯೋಜನ ಪಡೆದಿದ್ದಾರೆ. ಇನ್ನೂ ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಮ್ಮ ಆಹಾರ ಪದ್ಧತಿ ನಮ್ಮನ್ನು ಹಾಳು ಮಾಡ್ತಾ ಇದೆ. ಆರೋಗ್ಯ ಚೆನ್ನಾಗಿರಲಿ ಅಂತ ಔಷಧಿ ತೆಗೆದುಕೊಂಡು ತಕ್ಷಣವೇ ಫಾಸ್ಟ್ ಫುಡ್, ಜಂಕ್ ಫುಡ್ ತಿಂದು, ತಂಪು ಪಾನೀಯ ಕುಡಿದರೆ ಹೇಗಾದೀತು? ಜನರು ತಮ್ಮ ಆಹಾರ ಪದ್ಧತಿಯನ್ನು ಮೊದಲು ಸರಿಪಡಿಸಿಕೊಳ್ಳಬೇಕು. ಪರಿಶುದ್ಧ ಆಹಾರ ಮತ್ತು ಪರಿಶುದ್ಧ ಜೀವನ ಶೈಲಿಯೇ ಆರೋಗ್ಯದ ತಳಹದಿ ಎಂದು ಆಯುರ್ವೇದ ಶಾಸ್ತ್ರ ಹೇಳುತ್ತದೆ. ಆಹಾರ ಸರಿಯಾಗಿದ್ದರೆ ರೋಗಗಳು ಬರುವುದಿಲ್ಲ. ಆರೋಗ್ಯವರ್ಧನೆಗೆ ಸೇವಿಸಿದ ಔಷಧಿಗಳು ಕೂಡಾ ಫಲ ಕೊಡುತ್ತವೆ.

Comments

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು