ಅಜ್ಞಾತ ಶಕ್ತಿಯ ಸುತ್ತ ವಿಜ್ಞಾನದ ಪರಿಭ್ರಮಣ


ಜಗತ್ತಿನ ಎಲ್ಲ ಶಕ್ತಿಗಳೂ ಈ ಶಕ್ತಿಯ ಪ್ರತೀಕವಾಗಿವೆ. ಅಂತೆಯೇ ಗುರುತ್ವಾಕರ್ಷಣ ಶಕ್ತಿಯೂ ಅಜ್ಞಾತ ಶಕ್ತಿಯ ಸ್ವರೂಪವೇ ಆಗಿರಬಹುದು. ಆ ಅಜ್ಞಾತ ಶಕ್ತಿಯನ್ನು ಗುರುತಿಸುವಲ್ಲಿ ಐನ್ ಸ್ಟೀನ್ ನ ವಿಫಲವಾಗಿರಬಹುದು. ಅಥವಾ ವಿಶ್ವದ ಅಜ್ಞಾತ ಶಕ್ತಿಯನ್ನೇ ಗುರುತ್ವಾಕರ್ಷಣ ಶಕ್ತಿ ಎಂದೇ ತಿಳಿದುಕೊಂಡಿರಬಹುದು. ಒಂದು ಸಿದ್ಧಾಂತವನ್ನು ಸುಳ್ಳು ಎಂದು ಸಾರಾಸಗಟಾಗಿ ಹೇಳುವ ಮೊದಲು ವಿಚಾರ ಮಾಡುವುದು ಒಳಿತು. 

ವಿಶ್ವವನ್ನೇ ನಿಯಂತ್ರಿಸುವ ಶಕ್ತಿಯೊಂದಿದೆ. ಆ ಶಕ್ತಿಗೆ ಶರಣಾದರಷ್ಟೇ ಅಭಿವೃದ್ಧಿ ಎಂದರು ನಮ್ಮ ಹಿರಿಯರು. ಶಕ್ತಿಯೂ ಇಲ್ಲ, ಏನೂ ಇಲ್ಲ ಎಂದು ವಿತ್ತಂಡವಾದ ಮಂಡಿಸಿದರು ಕೆಲವೊಂದಷ್ಟು ಜನ ಬುದ್ಧಿಜೀವಿಗಳು. ಕಾಣದ ಅಸ್ತಿತ್ವವನ್ನು ಒಪ್ಪಿಕೊಳ್ಳುವುದು ಸುಲಭವೇನಲ್ಲ. ಒಪ್ಪಿಕೊಳ್ಳಬೇಕೆಂಬ ನಿಯಮವೂ ಇಲ್ಲ. ಅನುಭೂತಿಯಾದಾಗ, ಆ ಶಕ್ತಿಯ ಅಸ್ತಿತ್ವದ ಪ್ರಭಾವ ನಮ್ಮ ಮೇಲಾದಾಗ, ಹೌದು ಇಂಥದ್ದು ಯಾವುದೋ ಒಂದು ಶಕ್ತಿ ಇದೆ. ಆ ಶಕ್ತಿ ನಮ್ಮ ವಿಶ್ವವನ್ನು ತನ್ನ ನಿಯಂತ್ರಣದಲ್ಲಿರಿಸಿಕೊಂಡಿದೆ ಎಂದು ಒಪ್ಪಿಕೊಳ್ಳುತ್ತೇವೆ. ವಿಜ್ಞಾನವೂ ಹಾಗೆಯೇ. ಒಬ್ಬ ವಿಜ್ಞಾನಿ ಮಂಡಿಸಿದ ವಾದವನ್ನು ಇನ್ನೊಬ್ಬ ವಿಜ್ಞಾನಿ ಒಪ್ಪಿಕೊಳ್ಳಬೇಕೆಂದಿಲ್ಲ, ಆ ವಿಜ್ಞಾನಿಯ ವಾದಕ್ಕೇ ತನ್ನ ವಾದವೂ ಬಂದು ನಿಲ್ಲುವವರೆಗೆ ಒಪ್ಪಿಕೊಳ್ಳುವುದೂ ಇಲ್ಲ. ಇಂದು ಜಗತ್ತಿನ ಶ್ರೇಷ್ಟಾತಿಶ್ರೇಷ್ಠ ವಿಜ್ಞಾನಿಗಳೆನಿಸಿಕೊಂಡವರು, ಇಂದಿನ ವೈಜ್ಞಾನಿಕ ಆವಿಷ್ಕಾರಗಳಿಗೆ ಆಧಾರಸ್ವರೂಪವಾಗಿರುವವರು ತಮ್ಮ ಪರಿಶ್ರಮದ ಮೂಲಕ ಸಾಧಿಸಿದ್ದನ್ನು ಕೂಡಾ ಯಾರೂ ಒಪ್ಪಿಕೊಂಡಿರಲಿಲ್ಲ. ಇನ್ನೂ ಕೆಲವೊಂದು ಬಾರಿ ವಾದವನ್ನು ಅರ್ಥ ಮಾಡಿಕೊಳ್ಳುವ ಗೋಜಿಗೇ ಹೋಗುವುದಿಲ್ಲ. ಕಣ್ಣುಮುಚ್ಚಿ ಆ ವಾದವನ್ನು ಅಲ್ಲಗಳೆಯುತ್ತಾರೆ. 
ಈ ವಿಚಾರಕ್ಕೆ ಶ್ರೇಷ್ಠ ವಿಜ್ಞಾನಿ ಆಲ್ಬರ್ಟ್ ಐನ್ ಸ್ಟೀನ್ ಕೂಡಾ ಹೊರತಲ್ಲ. ಐನ್ಸ್ಟೀನ್ನ ಸಂಶೋಧನೆಗಳನ್ನು ಇತರ ವಿಜ್ಞಾನಿಗಳು, ಜನರು ಒಪ್ಪಿಕೊಳ್ಳುವುದಕ್ಕೆ ಬಹಳಷ್ಟು ಸಮಯ ಬೇಕಾಯಿತು. ಆದರೂ ಆತನ ಎಲ್ಲ ವಾದಗಳನ್ನೂ ಒಪ್ಪಿಕೊಳ್ಳಲಿಲ್ಲ. ಇದೀಗ ಐನ್ ಸ್ಟೀನ್ ನ ವಾದವೊಂದನ್ನು ತಿರಸ್ಕರಿಸುವ ಹಂತಕ್ಕೆ ವೈಜ್ಞಾನಿಕ ಜಗತ್ತು ಬಂದಿದೆ. ಇಲ್ಲಿಯೂ ಐನ್ ಸ್ಟೀನ್ ನ  ವಾದವನ್ನು ಯಥಾವತ್ತಾಗಿ ಅರ್ಥ ಮಾಡಿಕೊಂಡಿದ್ದಾರೆ, ಅದರ ಆಳವನ್ನು, ಅದರಲ್ಲಿ ಸಿಗಬಹುದಾದ ವಿಭಿನ್ನ ದೃಷ್ಟಿಕೋನವನ್ನು ಅರ್ಥೈಸಿಕೊಳ್ಳುವ ಗೊಡವೆಗೆ ಹೀಗಿಲ್ಲ ಎಂದೇ ಹೇಳಬೇಕು. ಹಾಗಿದ್ದರೆ ಐನ್ ಸ್ಟೀನ್ ಏನು ಹೇಳಿದ್ದ? ಈಗ ವೈಜ್ಞಾನಿಕ ಜಗತ್ತು ಅದನ್ನು ಅಲ್ಲಗಳೆಯಲು ಕಾರಣಗಳೇನು?

ಇದು ಅಜ್ಞಾತ ಶಕ್ತಿಯ ವಿಚಾರ
ನಮ್ಮ ಬ್ರಹ್ಮಾಂಡ ವಿಕಾಸವಾಗುತ್ತಿದೆ. ಗ್ರಹಗಳು, ಸೌರಮಂಡಲಗಳು, ಗೆಲಾಕ್ಸಿಗಳು ಒಂದರಿಂದೊಂದು ದೂರ ಹೋಗುತ್ತಿವೆ. ಜಗತ್ತು ಕಂಡಂಥ ಶ್ರೇಷ್ಠ ವಿಜ್ಞಾನಿ ಆಲ್ಬರ್ಟ್ ಐನ್ ಸ್ಟೀನ್ ತನ್ನ `ಥಿಯರಿ ಆಫ್ ಗ್ರಾವಿಟಿ' ಅಥವಾ `ಗುರುತ್ವಾಕರ್ಷಣ ಸಿದ್ಧಾಂತ'ದಲ್ಲಿ ವಿಶ್ವದ ವಿಕಸನಕ್ಕೆ ಗುರುತ್ವಾಕರ್ಷಣ ಶಕ್ತಿಯೇ ಕಾರಣ ಎಂದಿದ್ದ. `ಅನತಿ ದೂರದಲ್ಲಿರುವಾಗ ಗುರುತ್ವಾಕರ್ಷಣ ಶಕ್ತಿಯು ಎರಡು ಕಾಯಗಳನ್ನು ಆಕರ್ಷಿಸುವ ಬದಲು ವಿಕರ್ಷಿಸುತ್ತವೆ. ಈ ವಿಕರ್ಷಣೆಯ ಪ್ರಭಾವದಿಂದಾಗಿ ಕಾಯಗಳು ಒಂದರಿಂದೊಂದು ದೂರ ಚಲಿಸುತ್ತವೆ. ಕಾಯಗಳು ದೂರ ಸರಿದಂತೆ ವಿಶ್ವವೂ ವಿಕಾಸಗೊಳ್ಳುತ್ತಿದೆ' ಎಂದಿದ್ದ. 
ಇದೀಗ ಈ ಸಿದ್ಧಾಂತವೇ ಸುಳ್ಳು ಎನ್ನುತ್ತಿದ್ದಾರೆ ವಿಜ್ಞಾನಿಗಳು. ಆಂಗ್ಲೋ-ಆಸ್ಟ್ರೇಲಿಯನ್ ಟೆಲಿಸ್ಕೋಪ್ ಮತ್ತು ನಾಸಾದ ಗೆಲಾಕ್ಸಿ ವಿಕಾಸದ ಶೋಧ ನೌಕೆ ಕಳೆದ 5 ವರ್ಷಗಳಲ್ಲಿ 2 ಲಕ್ಷಕ್ಕೂ ಅಧಿಕ ಗೆಲಾಕ್ಸಿಗಳ ಸಂಶೋಧನೆ ನಡೆಸಿ ಐನ್ ಸ್ಟೀನ್ ನ ವಾದವನ್ನು ಸುಳ್ಳೆಂದು ಹೇಳುತ್ತಿದೆ. ಕೇವಲ ದಶಕಗಳ ಹಿಂದೆ ವೈಜ್ಞಾನಿಕ ಜಗತ್ತಿನಲ್ಲಿ ಮಂಡಿಸಲ್ಪಟ್ಟಂಥ `ಥಿಯರಿ ಆಫ್ ಡಾರ್ಕ್ ಎನರ್ಜಿ' ಅಥವಾ `ಅಜ್ಞಾತ ಶಕ್ತಿ ಸಿದ್ಧಾಂತ'ಕ್ಕೆ ಹೊಸ ಸಂಶೋಧನೆಯು ಬಲ  ತಂದುಕೊಡುತ್ತದೆ. ಹೊಸ ಸಂಶೋಧನೆಯ ಪ್ರಕಾರ `ಈ ಜಗತ್ತನ್ನು ಅಜ್ಞಾತ ಶಕ್ತಿಯೊಂದು ನಿಯಂತ್ರಿಸುತ್ತಿದೆ. ಆ ಶಕ್ತಿಯ ಕಾರಣದಿಂದಲೇ ಇಂದು ವಿಶ್ವ ವಿಕಸನಗೊಳ್ಳುತ್ತಿದೆ. ಐನ್ ಸ್ಟೀನ್ ಹೇಳಿದಂತೆ ಗುರುತ್ವಾಕರ್ಷಣ ಶಕ್ತಿಯಿಂದಾಗುವ ವಿಕರ್ಷಣೆಯ ಪರಿಣಾಮವಾಗಿ ವಿಶ್ವ ವಿಕಸನಗೊಳ್ಳುತ್ತಿರುವುದಲ್ಲ. ಹೀಗಾಗಿ ಐನ್ ಸ್ಟೀನ್ ನ ಗುರುತ್ವಾಕರ್ಷಣ ಸಿದ್ಧಾಂತವೇ ಸುಳ್ಳೆಂದಾಗುತ್ತದೆ. ಅಜ್ಞಾತ ಶಕ್ತಿಯು ಕಾಸ್ಮೊಲಾಜಿಕಲ್  ಕಾನ್ ಸ್ಟಂಟ್ (ವಿಶ್ವವಿಜ್ಞಾನದ ಸ್ಥಿರಾಂಕ) ಆಗಿದ್ದು, ಇದುವೇ ನಮ್ಮ ವಿಶ್ವವನ್ನು ನಿಯಂತ್ರಿಸುತ್ತಿದೆ. ಒಂದು ವೇಳೆ ಗುರುತ್ವಾಕರ್ಷಣ ಶಕ್ತಿಯೇ ವಿಶ್ವ ವಿಕಾಸಕ್ಕೆ ಕಾರಣವಾಗಿದ್ದಿದ್ದರೆ ಈ ಸ್ಥಿರಾಂಕ ಗೋಚರಿಸುತ್ತಿರಲಿಲ್ಲ. ಅಜ್ಞಾತ ಶಕ್ತಿಯ ಪ್ರಭಾವ ನಮ್ಮ ವಿಶ್ವದ ಮೇಲೆ ಶೆ.74ರಷ್ಟಿದೆ. ಅಜ್ಞಾತ ಶಕ್ತಿ ಎಂದರೆ- `ಒಂದು ಚೆಂಡನ್ನು ವೇಗವಾಗಿ ಮೇಲಕ್ಕೆಸೆದಾಗ ಅದು ಮತ್ತಷ್ಟು ವೇಗದಿಂದ ನಭೋಮುಖಿಯಾಗಿ ಚಲಿಸುವುದು.' ವಿಶ್ವವೂ ಇದೇ ರೀತಿ ಅಜ್ಞಾತ ಶಕ್ತಿಗೆ ಒಳಪಟ್ಟು ವಿಕಾಸವಾಗುತ್ತಿದೆ.'
ಬ್ರಹ್ಮಾಂಡದಲ್ಲಿ ಅತ್ಯಂತ `ಯುವ' ಎನ್ನಿಸಿಕೊಂಡಂಥ ಮೂರು ಗೆಲಾಕ್ಸಿಗಳ 3-ಡಿ ಮ್ಯಾಪ್ ಸಿದ್ಧಪಡಿಸಿದ ವಿಜ್ಞಾನಿಗಳ ಆ ಗೆಲಾಕ್ಸಿಗಳು ಒಂದಕ್ಕೊಂದು ದೂರಾಗುವುದು ಮತ್ತು ಅವು ನಮ್ಮ ಭೂಮಿಯಿಂದ ದೂರ ಸರಿಯುತ್ತಿರುವ ವೇಗವನ್ನು ತಾಳೆ ಮಾಡಿ ನೋಡಿದರು. ವಿಶ್ವ ಅತ್ಯಧಿಕ ವೇಗದಲ್ಲಿ ವಿಕಸನಗೊಳ್ಳುತ್ತಿರುವುದನ್ನು ಈ ಪ್ರಯೋಗದಿಂದ ಗಮನಿಸಿದರು. ಹೊಸ ಗೆಲಾಕ್ಸಿಗಳನ್ನು ತಮ್ಮತ್ತ ಸೆಳೆದುಕೊಳ್ಳಲು ನಕ್ಷತ್ರ ಗುಚ್ಛಗಳು ಪ್ರಯತ್ನಿಸುತ್ತಿರುತ್ತವೆ, ಆದರೆ ಅಜ್ಞಾತ ಶಕ್ತಿಯು ಅದನ್ನು ತಡೆಯುತ್ತದೆ ಎಂಬ ವಾದವನ್ನು ಮಂಡಿಸಿದ್ದಾರೆ ವಿಜ್ಞಾನಿಗಳು. ಹೊಸ ಸಂಶೋಧನೆಯ ಪ್ರಕಾರ ಎಲ್ಲದಕ್ಕೂ ಕಾರಣ ಅಜ್ಞಾತ ಶಕ್ತಿ. ವಿಶ್ವದ ವಿಕಸನಕ್ಕೂ ಗುರುತ್ವಾಕರ್ಷಣ ಶಕ್ತಿಗೂ ಯಾವ ಸಂಬಂಧವೂ ಇಲ್ಲ. ಇದೊಂದೇ ವಾದದಿಂದ ಐನ್ ಸ್ಟೀನ್ ನ ಸಂಶೋಧನೆಯನ್ನು ಅಲ್ಲಗಳೆಯಲಾದೀತೇ?

ಇದು ನಂಟಿನ ಪ್ರಶ್ನೆ
ಪ್ರತಿಯೊಂದು ಸೃಷ್ಟಿಯೂ ಲಯವಾಗಲೇಬೇಕು, ಲಯದಲ್ಲೊಂದು ಸೃಷ್ಟಿಯಾಗಲೇಬೇಕು. ಅಂತೆಯೇ ಯಾವ ವಿಶ್ವ ವಿಕಸನಗೊಳ್ಳುತ್ತಿದೆಯೋ ಅದು ಸಂಕೋಚನಗೊಳ್ಳಲೇಬೇಕು. ವಿಶ್ವದ ವಿಕಾಸಕ್ಕೆ ಅಜ್ಞಾತ ಶಕ್ತಿಯೇ ಕಾರಣವಿರಬಹುದು, ಒಪ್ಪಿಕೊಳ್ಳೋಣ. ಹಾಗಂತ ಐನ್ ಸ್ಟೀನ್ ನ ಸಿದ್ಧಾಂತವೇ ಸುಳ್ಳು ಎಂದು ಹೇಳಲಾದೀತೇ? ಆ ಸಿದ್ಧಾಂತ ಪರಿಪೂರ್ಣವಲ್ಲ ಎಂದರೆ ಒಪ್ಪಿಕೊಳ್ಳು ಅಡ್ಡಿಯಿಲ್ಲ. ಹಾಗೆ ನೋಡಿದರೆ ಯಾವ ಸಿದ್ಧಾಂತವೂ ಪರಿಪೂರ್ಣವಲ್ಲ. ಒಂದು ಸಿದ್ಧಾಂತ ಅದನ್ನು ಮಂಡಿಸಿದ ಕಾಲಕ್ಕೆ, ಆ ಸಮಯದಲ್ಲಿ ಇದ್ದಂಥ ಜ್ಞಾನಭಂಡಾರಕ್ಕೆ, ಸಿದ್ಧಾಂತದ ಹೂರಣದ ಬಗೆಗಿನ ತಿಳಿವಳಿಕೆಯ ಮಟ್ಟಕ್ಕೆ ಸೀಮಮಿತವಾಗಿರುತ್ತದೆ. ಐನ್ ಸ್ಟೀನ್ ಸಂಶೋಧನೆ ನಡೆಸುವಾಗ ಆತನಿಗೆ ವಿಶ್ವದ ವಿಕಾಸಕ್ಕೆ ಗುರುತ್ವಾಕರ್ಷಣ ಶಕ್ತಿಯೇ ಕಾರಣ ಎಂದು ಕಂಡಿರಬಹುದು. ಅಥವಾ ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಅಜ್ಞಾತ ಶಕ್ತಿಯೂ ಆತನಿಗೆ ಗುರುತ್ವಾಕರ್ಷಣ ಶಕ್ತಿಯಂತೆಯೇ ಕಂಡಿರಬಹುದು.
ಈ ವಿಶ್ವದಲ್ಲಿರುವ ಪ್ರತಿಯೊಂದು ಕಾಯವೂ ಅದರದ್ದೇ ಆದಂಥ ಗುರುತ್ವಾಕರ್ಷಣ ಶಕ್ತಿ ಹೊಂದಿದೆ. ಅಂತಹ ಒಂದು ಶಕ್ತಿ ವಿಶ್ವಕ್ಕೂ ಇರಬಹುದಲ್ಲವೆ? ವೇದ, ಉಪನಿಷತ್ತುಗಳ ಪ್ರಕಾರ ಪ್ರತಿಯೊಂದು ಜೀವಿಗಳಿಗೂ ಆತ್ಮ ಇರುವಂತೆ ಈ ಭೂಮಿ, ವಿಶ್ವಕ್ಕೂ ಆತ್ಮವಿದೆ. ಬ್ರಹ್ಮಾಂಡದ ಆತ್ಮವೇ ಪರಮಾತ್ಮ. ಅದುವೇ ಪರಬ್ರಹ್ಮ. ಎಲ್ಲ ಆತ್ಮಗಳೂ ಪರಮಾತ್ಮನ ಪ್ರತೀಕವಾಗಿವೆ. ಈ ವಿಶ್ವವನ್ನು ನಿಯಂತ್ರಿಸುತ್ತಿರುವ ಶಕ್ತಿಯನ್ನು ಆದಿಶಕ್ತಿ ಎಂದು ಕರೆದರು ನಮ್ಮ ಪೂರ್ವಜರು. ಜಗತ್ತಿನ ಎಲ್ಲ ಶಕ್ತಿಗಳೂ ಈ ಶಕ್ತಿಯ ಪ್ರತೀಕವಾಗಿವೆ. ಅಂತೆಯೇ ಗುರುತ್ವಾಕರ್ಷಣ ಶಕ್ತಿಯೂ ಅಜ್ಞಾತ ಶಕ್ತಿಯ ಸ್ವರೂಪವೇ ಆಗಿರಬಹುದು. ಆ ಅಜ್ಞಾತ ಶಕ್ತಿಯನ್ನು ಗುರುತಿಸುವಲ್ಲಿ ಐನ್ ಸ್ಟೀನ್ ವಿಫಲವಾಗಿರಬಹುದು. ಅಥವಾ ವಿಶ್ವದ ಅಜ್ಞಾತ ಶಕ್ತಿಯನ್ನೇ ಗುರುತ್ವಾಕರ್ಷಣ ಶಕ್ತಿ ಎಂದೇ ತಿಳಿದುಕೊಂಡಿರಬಹುದು. ಒಂದು ಸಿದ್ಧಾಂತವನ್ನು ಮಂಡಿಸುವುದು ಎಷ್ಟು ಕಷ್ಟವೋ ಅದನ್ನು ಅರ್ಥೈಸಿಕೊಳ್ಳುವುದೂ ಕಷ್ಟವೇ. ಅದನ್ನು ತಿರಸ್ಕರಿಸುವುದಂತೂ ತೀರಾ ಕಷ್ಟ. ಹೀಗಿರುವಾಗ ಐನ್ ಸ್ಟೀನ್ ನ ಸಿದ್ಧಾಂತವನ್ನು ತಿರಸ್ಕರಿಸುವುದು ಸುಲಭದ ಮಾತಲ್ಲ. ಅದರಲ್ಲಿರುವ ಲೋಪಗಳನ್ನು ತಿದ್ದಬಹುದು. ಒಂದು ಸಿದ್ಧಾಂತವನ್ನು ಸುಳ್ಳು ಎಂದು ಸಾರಾಸಗಟಾಗಿ ಹೇಳುವ ಮೊದಲು ವಿಚಾರ ಮಾಡುವುದು ಒಳಿತು.

Comments

Post a Comment

Popular posts from this blog

ಶಿವ ರೂಪಕಲ್ಪನ ಕಾವ್ಯ

ನೆನಪ ಮರೆಸಿಯಾವು ಗರ್ಭನಿರೋಧಕ ಗುಳಿಗೆಗಳು!

ಪುಟಾಣಿ ನವಿಲು